ಆಸ್ತಿ ತೆರಿಗೆ ಪರಿಷ್ಕರಣೆಗೆ ಸಿಇಓ ಸೂಚನೆ

ತುಮಕೂರು

      ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ವಸೂಲಿ ಮಾಡುವ ಆಸ್ತಿ ತೆರಿಗೆಯನ್ನು ಕೂಡಲೇ ಪರಿಷ್ಕರಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಪಿಡಿಓಗಳಿಗೆ ಸೂಚಿಸಿದರು.

     ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು “ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು, ಅಂಗನವಾಡಿ ಕಟ್ಟಡ, ಶೌಚಾಲಯ ಹಾಗೂ ದುರಸ್ಥಿ”ಗೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಗ್ರಾಮ ಪಂಚಾಯತಿಗಳ ಆಸ್ತಿ ತೆರಿಗೆ ಪರಿಷ್ಕರಣೆಯನ್ನು ಜುಲೈ ಮಾಹೆಯಲ್ಲಿ ಆಂದೋಲನದ ಮಾದರಿಯಲ್ಲಿ ಪ್ರಾರಂಭಿಸುವಂತೆ ಸೂಚಿಸಿದರು.

       ಸರ್ಕಾರದಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿಗಾಗಿ ಪ್ರಥಮ ಹಂತದಲ್ಲಿ 50 ಗ್ರಾಮಗಳ ಗುರಿಯನ್ನು ನಿಗಧಿಪಡಿಸಲಾಗಿದೆ. ಈ ಪೈಕಿ ಅನುಮೋದನೆಯಾಗಿರುವ 14 ಗ್ರಾಮಗಳಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲು ತಿಳಿಸಿದರಲ್ಲದೆ ಗ್ರಾಮ ವಿಕಾಸ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಜುಲೈ ಮಾಹೆಯ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಕೆ.ಆರ್.ಐ.ಡಿ.ಎಲ್. ಇಂಜಿನಿಯರ್‍ಗೆ ಸೂಚನೆ ನೀಡಿದರು.

      ನರೇಗಾ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಒಗ್ಗೂಡಿಸುವಿಕೆ ಕಾರ್ಯಕ್ರಮದಡಿ ಜಿಲ್ಲೆಗೆ 450 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಮಂಜೂರಾತಿ ದೊರೆತಿದ್ದು, ಈ ಪೈಕಿ 208 ಅಂಗನವಾಡಿ ಕಟ್ಟಡಗಳು ಪೂರ್ಣಗೊಂಡಿವೆ. ಉಳಿದ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಆಗಸ್ಟ್ ಮಾಹೆಯೊಳಗೆ ಪೂರ್ಣಗೊಳಿಸಬೇಕೆಂದು ಪಿಆರ್‍ಇಡಿ ಕಾರ್ಯಪಾಲಕ ಇಂಜಿನಿಯರ್‍ಗೆ ಸೂಚಿಸಿದರು.

        ಜಿಲ್ಲೆಯಲ್ಲಿ 241 ಅಂಗನವಾಡಿ ಶೌಚಾಲಯಗಳ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ದುರಸ್ಥಿಗಾಗಿ ಗುರುತಿಸಲಾಗಿರುವ 337 ಅಂಗನವಾಡಿ ಶೌಚಾಲಯಗಳನ್ನು ಒಂದು ವಾರದೊಳಗೆ ದುರಸ್ಥಿ ಕಾರ್ಯ ಕೈಗೊಳ್ಳಬೇಕು. ಮಧುಗಿರಿ ತಾಲ್ಲೂಕಿನಲ್ಲಿ ಗುರುತಿಸಲಾಗಿರುವ 37 ಅಂಗನವಾಡಿ ಶೌಚಾಲಯಗಳ ದುರಸ್ಥಿಗೆ ಅಂದಾಜು ವೆಚ್ಚಕ್ಕನುಗುಣವಾಗಿ ನಿಯಮಾನುಸಾರ ಕೂಡಲೇ ಟೆಂಡರ್ ಕರೆಯುವಂತೆ ಮಧುಗಿರಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣಪ್ಪ, ಯೋಜನಾ ನಿರ್ದೇಶಕ ಬಾಲರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಮತ್ತಿತರ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link