ದಾವಣಗೆರೆ:
ವಿಶ್ವ ಅಸ್ತಮ ದಿನಾಚರಣೆ ಅಂಗವಾಗಿ ನಗರದ ಪದ್ಮಶ್ರೀ ಚಿಂದೋಡಿಲೀಲಾ ಕಲಾ ಕ್ಷೇತ್ರದಲ್ಲಿ ಮೇ 26 ರಂದು ಬೆಳಿಗ್ಗೆ 10 ಗಂಟೆಗೆ ರಾಜ್ಯ ಮಟ್ಟದ ಅಸ್ತಮ ಸಮ್ಮೇಳನ ಹಾಗೂ ಉಚಿತ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದು ಅಸ್ತಮ ತಜ್ಞ ವೈದ್ಯ ಡಾ.ಎನ್.ಎಚ್.ಕೃಷ್ಣ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 18 ವರ್ಷಗಳಿಂದ ಈ ಸಮ್ಮೇಳನ ಆಯೋಜಿಸಿಕೊಂಡು ಬರುತ್ತಿದ್ದು, ಹಾಸನದ ಶ್ವಾಸಕೋಶ ತಜ್ಞ ವೈದ್ಯೆ ಡಾ.ದೀಪ್ತಿ ಕೃಷ್ಣನ್ ಸಮ್ಮೇಳನ ಉದ್ಘಾಟಿಸುವರು. ಹಾಸ್ಯ ಪ್ರಸ್ತುತಿಗಾರ ಗಂಗಾವತಿ ಪ್ರಾಣೇಶ್, ಕನ್ನಡ ಶಾಯಿರಿ ಕವಿ ಅಸಾದುಲ್ಲ ಬೇಗ್, ಹಾಸ್ಯ ವಾಗ್ಮಿ ಮಹದೇವ್ ಸತ್ತಿಗೆರಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಇತಿಹಾಸಕಾರ ಪ್ರೊ.ಕೆ.ಸದಾಶಿವ, ಕುಕ್ಕುವಾಡ ಸಕ್ಕರೆ ಕಾರ್ಖಾನೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಶೇಖರಪ್ಪ, ಸರ್ ಎಂ.ವಿ. ಕಾಲೇಜಿನ ಕಾರ್ಯದರ್ಶಿ ಎಸ್.ಜೆ.ಶ್ರೀಧರ್, ಉದ್ಯಮಿ ಎಚ್.ಎಂ. ಬಸವರಾಜಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಕಲುಷಿತ ವಾತಾವರಣದಲ್ಲಿ ದಾವಣಗೆರೆ ಜಿಲ್ಲೆಯು ರಾಜ್ಯದಲ್ಲಿ 2 ಮತ್ತು 3ನೇ ಸ್ಥಾನದಲ್ಲಿದ್ದು, ಧೂಳು ಮತ್ತು ಹೊಗೆಯಿಂದಾಗಿ ಶೇ.12 ರಷ್ಟು ಜನ ಅಸ್ತಮ ಹಾಗೂ ಶೇ.25ರಿಂದ 30 ರಷ್ಟು ಜನ ಅಲರ್ಜಿ ನೆಗಡಿಯಿಂದ ಬಳಲುತ್ತಿದ್ದಾರೆ. ಮಹಾನಗರ ಪಾಲಿಕೆ ಚರಂಡಿ ನಿರ್ಮಾಣಕ್ಕೆ ಒತ್ತು ನೀಡಿದರೆ, ಈ ಸಮಸ್ಯೆ ಅರ್ಧದಷ್ಟು ಬಗೆಹರಿಯಲಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ನವ್ಯಾ ಕೃಷ್ಣ, ಡಿ.ಎನ್. ಶಿವನಗೌಡ್ರು, ಗಜಾನನ ಬೂತೆ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ