ತುಮಕೂರು
ಅಂತರ್ಜಲ ಮಟ್ಟ ಹೆಚ್ಚಿಸಲು ತುಮಕೂರು ಜಿಲ್ಲೆಯ 7 ತಾಲ್ಲೂಕು ಸೇರಿದಂತೆ ರಾಜ್ಯದ 14 ಜಿಲ್ಲೆಗಳಲ್ಲಿ ಅಟಲ್ ಭೂ ಜಲ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ತುಮಕೂರಿನಲ್ಲೆ ಪೈಲಟ್ ಪ್ರಾಜೆಕ್ಟ್ ಪ್ರಾರಂಭ ಮಾಡಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರದಿಂದ 1201 ಕೋಟಿ ರೂ. ಅನುದಾನ ಬರಲಿದೆ ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ 71ನೇ ಭಾರತ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಾನೂನು, ಶಿಸ್ತು, ಉತ್ತಮ ಆಡಳಿತ ಪಾಲನೆ ಇದ್ದರೆ, ಸಂಘರ್ಷವನ್ನು ತಡೆಯಬಹುದಾಗಿದೆ. ಅದರಂತೆ ಜಿಲ್ಲಾಡಳಿತದ ಸಹಕಾರದೊಂದಿಗೆ ಹೇಮಾವತಿಯಿಂದ ಈ ಭಾರಿ ತುಮಕೂರು, ಹಾಸನ, ಮಂಡ್ಯ ಜಿಲ್ಲೆಗಳಿಗೆ ನೀರು ಹರಿಸಲಾಗಿದೆ. ತುಮಕೂರು ಜಿಲ್ಲೆಗೆ ಈ ಬಾರಿ ಕುಡಿಯುವ ನೀರಿಗಾಗಿ ಕೆರೆಗಳಿಗೆ 18.8 ಟಿಎಂಸಿ ನೀರನ್ನು ಹರಿಸಲಾಗಿದೆ. ಇನ್ನೂ 6 ರಿಂದ 7 ಟಿಎಂಸಿ ಉಳಿತಾಯವಾಗಿದೆ. ನೀರಿನ ಸಮಸ್ಯೆಯಾದರೆ ಮುಂಬರುವ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮತ್ತೆ ನೀರನ್ನು ಹರಿಸಲು ಚಿಂತಿಸಲಾಗಿದೆ ಎಂದರು.
ಹೇಮಾವತಿ ತುಮಕೂರು ನಾಲೆ 0-70 ಕಿ.ಮೀ. ಅಗಲೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು, ಕಾಮಗಾರಿ ಪೂರ್ಣಗೊಂಡರೆ ಈಗಿನ ಎರಡರಷ್ಟು ನೀರನ್ನು ಪಡೆಯಬಹುದಾಗಿದೆ. ಅಲ್ಲದೆ ಪ್ರಧಾನಮಂತ್ರಿಗಳು ಕರೆ ಕೊಟ್ಟಿರುವಂತೆ ನಗರ ಹಾಗೂ ಪಟ್ಟಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿ, ಉತ್ತಮ ಆರೋಗ್ಯವನ್ನು ಪಡೆಯುವ ಕಡೆ ಜನರು ಮುಂದಾಗಬೇಕು ಎಂದು ಅವರು ಹೇಳಿದರು.
ರಾಷ್ಟ್ರ, ರಾಜ್ಯದಲ್ಲಿ ಪ್ರಗತಿ
ಸಂವಿಧಾನ ಜಾರಿಗೆ ಬಂದ ನಂತರ ದೇಶ ಹಾಗೂ ರಾಜ್ಯದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಅಭಿವೃದ್ಧಿಯಾಗುತ್ತಿದ್ದು, ಸ್ವಾತಂತ್ರ್ಯ ನಂತರ ದೇಶ ರಕ್ಷಣಾ ಶಕ್ತಿಯಲ್ಲಿ ಪ್ರಪಂಚದಲ್ಲಿಯೇ 3ನೇ ಸ್ಥಾನ ಪಡೆದಿದೆ. ವೈಜ್ಞಾನಿಕ ಸಂಶೋಧನೆಯಲ್ಲೂ ಭಾರತ ಮುಂದಿದೆ ಎಂದು ತಿಳಿಸಿದರು.
ಕಾನೂನು ಬದಲಿಸುವ ಅವಕಾಶ
ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರು ಕರಡು ರಚನಾ ಸಮಿತಿ ಅಧ್ಯಕ್ಷರಾಗಿ ಪ್ರಪಂಚದಲ್ಲಿ ಉತ್ಕøಷ್ಟ ಮಟ್ಟದ ಸಂವಿಧಾನವನ್ನು ನೀಡಿದ್ದಾರೆ. ಅಲ್ಲದೆ ಸಂವಿಧಾನ ಕತೃಗಳು ಈ ದೇಶದ ಜನರ ಬದುಕು, ಜೀವನದ ಬದಲಾವಣೆಗೆ ತಕ್ಕಂತೆ ಕಾನೂನುಗಳನ್ನು ಬದಲಾಯಿಸುವ ಬಹುದೊಡ್ಡ ಅವಕಾಶವನ್ನು ನೀಡಿದ್ದಾರೆ. ದೇಶದಲ್ಲಿ ಬೇಕಾದಷ್ಟು ಧರ್ಮಗಳು, ಭಾಷೆಗಳು, ಪ್ರಾಂತ್ಯಗಳು ಇದ್ದರೂ ಜನರು ನೆಮ್ಮದಿಯಾಗಿ ಬದುಕುವ ಸ್ಥಿತಿ ಹಾಗೂ ಸಮಾಜವಾದ, ಸಮತಾವಾದ ಹಾಗೂ ಅಶಕ್ತರನ್ನು ಶಕ್ತರನ್ನಾಗಿಸುವ ಹಾಗೂ ಸಂಪತ್ತಿನ ಸಮಾನ ಹಂಚಿಕೆಯ ಬಗ್ಗೆ ಸಂವಿಧಾನದಲ್ಲಿ ತಿಳಿಸಲಾಗಿದೆ ಎಂದರು.
ಸಾಕ್ಷರತಾ ಪ್ರಮಾಣ ಹೆಚ್ಚಳ
ಸ್ವಾತಂತ್ರ್ಯ ನಂತರ ದೇಶದಲ್ಲಿ ಆಹಾರದ ಕೊರತೆ ಇಲ್ಲ. ಆಹಾರ ಭದ್ರತೆ ಕಾಯ್ದೆಯನ್ವಯ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಆಹಾರವನ್ನು ಪಡೆಯುತ್ತಿವೆ. ಕಡ್ಡಾಯ ಶಿಕ್ಷಣ ಕಾರ್ಯಕ್ರಮವನ್ನು ಜಾರಿಗೆ ತಂದು ಉಚಿತವಾಗಿ 0-14 ವಯಸ್ಸಿನ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಇದರಿಂದಾಗಿ ಶೇ.30ರಷ್ಟಿದ್ದ ಸಾಕ್ಷರತಾ ಪ್ರಮಾಣ 80% ರಷ್ಟರವರೆಗೆ ಏರಿಕೆಯಾಗಿ ಆ ಮೂಲಕ ಮುಖ್ಯವಾಹಿನಿಗೆ ತರಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಮಹಿಳೆಯರ ರಕ್ಷಣೆಗೆ ಆದ್ಯತೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಾಣಿಜ್ಯ ಮಳಿಗೆ ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ರಕ್ಷಣೆ ಒದಗಿಸಲು ನಿಯಮ ಜಾರಿಗೆ ತರಲಾಗಿದೆ. ಆಯಾ ಸಂಸ್ಥೆಯ ಮಾಲಿಕರು ಮಹಿಳೆಯರ ಮನೆ ವಿಳಾಸದೊಂದಿಗೆ ಅವರು ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಅವರ ಸಂಪೂರ್ಣ ಜವಾಬ್ದಾರಿ ಅವರೇ ಪಡೆದುಕೊಳ್ಳತಕ್ಕದ್ದು ಎಂದರು.
ವೃತ್ತಿಪರ ಹುದ್ದೆಗಳ ನೇಮಕಾತಿ
ಸರ್ಕಾರದ ವೃತ್ತಿಪರ ಹುದ್ದೆಗಳ ನೇಮಕಾತಿಯಲ್ಲಿ ಸಂದರ್ಶನ ನಡೆಸುವುದನ್ನು ರದ್ದುಗೊಳಿಸಿ, ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡುವುದನ್ನು ಜಾರಿಗೆ ತರಲಾಗಿದೆ. ಇದರಿಂದ ಸರ್ಕಾರದ ಹುದ್ದೆಗಳಿಗೆ ಸೇರುವಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಜಾರಿಗೆ ತರಲಾಗಿದೆ.
ತುಮಕೂರು ನಗರದ ವಿವಿಧ ಕಾಲೇಜು ಮಕ್ಕಳಿಂದ ದೇಶಭಕ್ತಿ ಸಾರುವ ಸಾಂಸ್ಕøತಿಕ ಕಾರ್ಯಕ್ರಮಗಳು ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನೆರೆದಿದ್ದವರ ಮೈಜುಮ್ಮೆನಿಸಿದವು. ಪೊಲೀಸ್ ಇಲಾಖೆಯ ವಿವಿಧ ಘಟಕಗಳು, ಎನ್‍ಸಿಸಿ, ಸೇವಾದಳ, ಸ್ಕೌಟ್ಸ್ ಅಂಡ್ ಗೈಡ್ಸ್, ರೆಡ್ ಕ್ರಾಸ್ ಸಂಸ್ಥೆಯ ಶಾಲೆ ಸೇರಿದಂತೆ ಇನ್ನಿತರರ ಶಾಲೆಯ ಮಕ್ಕಳು ಪಥ ಸಂಚಲನ ನಡೆಸಿದರು. ಇದರಲ್ಲಿ ಉತ್ತಮವಾಗಿ ಕವಾಯತು ನಡೆಸಿಕೊಟ್ಟ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಕಾಂತರಾಜ್ ಬಿಎಂಎಲ್, ಕೆ.ಎ.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಮೇಯರ್ ಲಲಿತ ರವೀಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿ.ಪಂ. ಸಿಇಓ ಶುಭಾ ಕಲ್ಯಾಣ್, ಎಸ್‍ಪಿ ಡಾ. ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಪಾಲಿಕೆ ಆಯುಕ್ತ ಭೂಬಾಲನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಮಾಜಿ ಸೈನಿಕರ ಅಸಮಾಧಾನ
ಪ್ರತಿ ಬಾರಿ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮಾಜಿ ಸೈನಿಕರು ಭಾಗವಹಿಸಿ ಕವಾಯತು ನಡೆಸಿಕೊಡಲಾಗುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಸಮಾರಂಭಕ್ಕೆ ನಮಗೆ ಆಹ್ವಾನ ನೀಡುತ್ತಿಲ್ಲ. ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಮಾಜಿ ಸೈನಿಕರಿದ್ದೇವೆ. ನಮಗೆ ಗೌರವ ಸಿಗುತ್ತಿಲ್ಲ ಎಂದು ಮಾಜಿ ಸೈನಿಕರು ಅಸಮಾಧಾನ ವ್ಯಕ್ತ ಪಡಿಸಿದರು.
ಶ್ರೀ ಚೈತನ್ಯ ಟೆಕ್ನೋ ಶಾಲೆಯ ಮಕ್ಕಳು ಒಂದು ಹಾಡಿನಲ್ಲಿ ಇಡೀ ನಮ್ಮ ರಾಜ್ಯದ ವಿವಿಧ ಸಾಂಸ್ಕøತಿಕ ಕಲೆಗಳು, ನಮ್ಮ ದೇಶದ ಎರಡು ಕಣ್ಣುಗಳಾದ ರೈತನ ಜೀವನ ಹಾಗೂ ಗಡಿಯಲ್ಲಿ ಹೋರಾಡಿ ವೀರ ಮರಣವನ್ನುಪ್ಪು ಸೇನೆಯ ಯುದ್ಧ ಸನ್ನಿವೇಶ ಸೇರಿದಂತೆ ಸ್ವಾತಂತ್ರ ಹೋರಾಟಗಾರರ ವೇಷಭೂಷಣಗಳೊಂದಿಗೆ ಸೇನೆಯಲ್ಲಿ ವೀರಮರಣವನ್ನಪ್ಪಿದ ನಮ್ಮ ರಾಜ್ಯದ ಸೈನಿಕರ ಭಾವಚಿತ್ರಗಳನ್ನು ಪ್ರದರ್ಶಿಸಿದರು.