`ಈಝೀ ಮೈಂಡ್’ : ಆತಂಕದಲ್ಲಿ ಹಣ ಹೂಡಿದವರು

ತುಮಕೂರು:

     ತುಮಕೂರಿನ ಹೆಚ್.ಎಂ.ಎಸ್. ಕಾಂಪ್ಲೆಕ್ಸ್‍ನಲ್ಲಿ ವಹಿವಾಟು ಆರಂಭಿಸಿದ್ದ `ಈಝೀ ಮೈಂಡ್’ ಮಾರ್ಕೆಟಿಂಗ್ ಇಂಡಿಯಾ ಲಿಮಿಟೆಡ್ ಕಂಪನಿ ಬಾಗಿಲು ಮುಚ್ಚಿ ಮೂರು ತಿಂಗಳ ಮೇಲಾಗಿದೆ. ಕಚೇರಿಯತ್ತ ಈಗಷ್ಟೇ ಹೂಡಿಕೆದಾರರು ಹೋಗಿ ಬರುವುದು ಮಾಡತೊಡಗಿದ್ದು, ನಾವು ಕಟ್ಟಿದ ಹಣ ವಾಪಸ್ ಬರುವುದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ.

     ಶುಕ್ರವಾರ ಈ ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿ ಹಣ ಹೂಡಿಕೆದಾರರು ಜಮಾಯಿಸಿದ್ದರು. ಕೆಲವರು ಪತ್ರಿಕಾಗೋಷ್ಠಿ ನಡೆಸಿ ಸಾರ್ವಜನಿಕರಿಂದ ಸಂಗ್ರಹಿಸಿರುವ ಸುಮಾರು 250 ರಿಂದ 300 ಕೋಟಿ ರೂ.ಗಳನ್ನು ಅಸ್ಲಾಂಪಾಷ ಎಂಬಾತ ಹಣ ನೀಡದೆ ವಂಚಿಸಿ ನಾಪತ್ತೆಯಾಗಿದ್ದಾನೆ ಎಂದು ದೂರಿದ್ದರು.

      ಮಾರನೆಯ ದಿನ ಶನಿವಾರವೂ ಈ ಕಚೇರಿಯತ್ತ ಕೆಲವರು ಬಂದು ಹೋಗುತ್ತಿದ್ದರು. ಅಲ್ಲಿಗೆ ಆಗಮಿಸಿದ್ದ ಮಹಿಳೆಯೊಬ್ಬರು ತನ್ನ ಸಂಕಟವನ್ನು ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿದುದು ಕಂಡುಬಂದಿತು. ಕಷ್ಟಪಟ್ಟು ದುಡಿದ ಹಣದಲ್ಲಿ ಹೂಡಿಕೆ ಮಾಡಲಾಗಿದ್ದ ಹಣ ವಾಪಸ್ ಬರುವುದೋ ಇಲ್ಲವೋ ಎಂಬ ಆತಂಕ ಆಕೆಯದ್ದು. ಇನ್ನೊಂದು ವಿಶೇಷವೆಂದರೆ, ಈಕೆ ಇಲ್ಲಿ ಹೂಡಿಕೆ ಮಾಡಿದ್ದ ವಿಷಯವನ್ನು ತನ್ನ ಕುಟುಂಬಸ್ಥರಿಗೆ ತಿಳಿಸಿಲ್ಲ. ಮುಂದೆ ಮಕ್ಕಳ ಭವಿಷ್ಯಕ್ಕೆ ನೆರವಾಗಲಿ ಎಂಬ ಉದ್ದೇಶದಿಂದ ಹೂಡಿಕೆ ಮಾಡಿದ್ದು, ತಾನು ಕಟ್ಟಿದ ಹಣ ಹೀಗಾಯಿತಲ್ಲ ಎಂಬ ಆತಂಕದಲ್ಲಿ ಆಕೆ ಮುಳುಗಿ ಹೋಗಿದ್ದರು

      ಈ ನಡುವೆ ತುಮಕೂರು ನಗರ ಠಾಣೆ ಪಿಎಸ್‍ಐ ವಿಜಯಲಕ್ಷ್ಮಿ ಸೇರಿದಂತೆ ಠಾಣೆಯ ಸಿಬ್ಬಂದಿ ಶುಕ್ರವಾರದಂದೇ ಅಲ್ಲಿಗೆ ತೆರಳಿ ಗ್ರಾಹಕರಿಂದ ಮಾಹಿತಿ ಪಡೆದಿದ್ದಾರೆ. ಅದರೆ ಈವರೆಗೆ ಸದರಿ ಕಂಪನಿಯ ವಿರುದ್ಧ ಯಾರೂ ದೂರು ನೀಡಿಲ್ಲ. ಬಹುಶಃ ಇಂದು ಅಥವಾ ನಾಳೆ ದೂರು ನೀಡಬಹುದು ಎಂಬ ಇಂಗಿತವನ್ನು ಹಣ ಕಳೆದುಕೊಂಡ ಕೆಲವರು ವ್ಯಕ್ತಪಡಿಸುತ್ತಿದ್ದಾರೆ.

      ಬೆಂಗಳೂರಿನಲ್ಲಿ ಐಎಂಎ ವಂಚನೆ ಪ್ರಕರಣ ಬಯಲಾಗುತ್ತಿದ್ದಂತೆಯೇ ತುಮಕೂರಿನಲ್ಲಿಯೂ ಅದೇ ತರಹದ ಪ್ರಕರಣ ಬಯಲಿಗೆ ಬಂದಿರುವುದು ಹೂಡಿಕೆದಾರರಲ್ಲಿ ಆತಂಕವನ್ನುಂಟು ಮಾಡಿದೆ. ಇಲ್ಲಿಗೆ ಮೂರು ವರ್ಷಗಳ ಹಿಂದೆ ಎಚ್.ಎಂ.ಎಸ್. ಕಾಂಪ್ಲೆಕ್ಸ್‍ನಲ್ಲಿ ಅಸ್ಲಾಂಪಾಷ ಎಂಬಾತ ಮಾರ್ಕೆಟಿಂಗ್ ಕಂಪನಿ ಆರಂಭಿಸಿದ್ದ. ಕಂಪನಿ ಕಾಯ್ದೆ ಪ್ರಕಾರ ಈಝೀ ಮೈಂಡ್ ಮಾರ್ಕೆಟಿಂಗ್ ಇಂಡಿಯಾ ಸಂಸ್ಥೆಯನ್ನು ಲಿಮಿಟೆಡ್ ಕಂಪನಿಯಾಗಿ ನೋಂದಣಿ ಮಾಡಿಸಿದ್ದಾನೆ.

     ಇದಕ್ಕೆ ಸಂಬಂಧಿಸಿದಂತೆ ಹೂಡಿಕೆ ಒಡಂಬಡಿಕೆಯೂ ಸಹ ಮಾಡಿಕೊಂಡಿದ್ದಾನೆ. ಹಣ ಹೂಡಿಕೆದಾರರಿಂದ ಪ್ರತ್ಯೇಕ ಒಪ್ಪಂದ ಪತ್ರ ಮಾಡಿಕೊಳ್ಳಲಾಗಿದ್ದು, ಇದಕ್ಕೆ ಸಂಬಂಧಿಸಿದ ರಸೀದಿಗಳನ್ನೂ ನೀಡಲಾಗಿದೆ. ಕಂಪನಿ ಕಾಯ್ದೆ ಪ್ರಕಾರ ವ್ಯವಹಾರ ಆರಂಭಿಸಿ ಇದೀಗ ಕಳೆದ ಮೂರು ತಿಂಗಳಿನಿಂದ ಬಾಗಿಲು ಹಾಕಲಾಗಿದ್ದು, ಈ ವ್ಯವಹಾರದ ಹಿಂದೆ ಇನ್ನೂ ಅನೇಕ ಮಂದಿ ಇದ್ದಾರೆಂಬ ಮಾಹಿತಿಗಳು ಹರಿದಾಡುತ್ತಿವೆ. ದೂರು ದಾಖಲಾದ ಬಳಿಕವಷ್ಟೇ ಈ ಎಲ್ಲಾ ಮಾಹಿತಿಗಳೂ ಹೊರಬರಬಹುದು.

     ಆರಂಭಿಕ ಹಂತದಲ್ಲಿ ವಾರ್ಷಿಕ 1 ಲಕ್ಷಕ್ಕೆ 5 ರಿಂದ 7 ಸಾವಿರ ರೂ.ಗಳವರೆಗೂ ಲಾಭದ ಹಣ ವಿತರಿಸಿದರು. ಆನಂತರ ಹೂಡಿಕೆಯ ಎರಡರಷ್ಟು ಹಣ ನೀಡುವುದಾಗಿ ನಂಬಿಸಲಾಯಿತು. ಆರಂಭದ ಒಂದೆರಡು ವರ್ಷ ಹೇಳಿದ ರೀತಿಯಲ್ಲಿಯೇ ಹಣ ವಿತರಿಸಲಾಯಿತು. ಹಣ ಹೂಡಿದ ಬಹಳ ಮಂದಿ ಲಾಭದ ಹಣ ಪಡೆದು ಮುಂದಿನ ಹೂಡಿಕೆ ಸ್ಥಗಿತಗೊಳಿಸಿದರೆಂದು ಹೇಳಲಾಗಿದೆ. ಕೆಲವರು ಹೂಡಿಕೆ ಮುಂದುವರೆಸಿದರೆ ಮತ್ತೆ ಕೆಲವರು ಬಂದ ಲಾಭದ ಹಣವನ್ನು ಪಡೆದು ಅತ್ತ ವ್ಯವಹಾರವನ್ನು ಮುಂದುವರೆಸದೆ ಸ್ಥಗಿತಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಣದ ಎರಡುಪಟ್ಟು ಹಣ ನೀಡುವ ಆಫರ್ ಕೊಟ್ಟು ಜನರನ್ನು ಸೆಳೆಯುವ ತಂತ್ರ ಮಾಡಿದರೆಂದು ಹೇಳಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap