ಚಿತ್ರದುರ್ಗ
ರಾಜ್ಯಾದ್ಯಂತ ಜೂ. 03 ರಿಂದ 17 ರವರೆಗೆ ಅತಿಸಾರ ಬೇಧಿ ನಿಯಂತ್ರಣಾ ಪಾಕ್ಷಿಕ ಜರುಗಲಿದ್ದು ಈ ಕುರಿತು ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ವಿಚಾರಕ ಸಿಬ್ಬಂದಿಗಳಿಗೆ ಕಾರ್ಯಗಾರ ಚಿತ್ರದುರ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಏರ್ಪಡಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಮತ್ತು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳಾದ ಡಾ.ಪಿ.ಸಿ.ಕುಮಾರಸ್ವಾಮಿ, ರವರು ಓ.ಆರ್.ಎಸ್. ಮತ್ತು ಜಿಂಕ್ ಮಾತ್ರೆಗಳನ್ನು ಪ್ರದರ್ಶಿಸುವ ಮೂಲಕ ಕಾರ್ಯಗಾರಕ್ಕೆ ಚಾಲನೆ ನೀಡಿದರು. ಡಾ.ಪಾಲಾಕ್ಷ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ 5 ವರ್ಷದೊಳಗಿನ ಮಕ್ಕಳ ಸಮೀಕ್ಷೆ ಕೈಗೊಂಡು ಮಕ್ಕಳಿಗೆ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಬೇಕು.
ದೇಶದಲ್ಲಿ ಮಕ್ಕಳ ಸಾವಿನ ಪ್ರಕರಣಗಳ ಪೈಕಿ ಶೇ. 10 ರಷ್ಟು ಮಕ್ಕಳು ಅತೀಸಾರ ಬೇದಿಯಿಂದ ಮರಣ ಹೊಂದುತ್ತಿದ್ದಾರೆ. ಅತಿಸಾರ ಬೇಧಿ ಒಂದು ನಿಯಂತ್ರಿಸಬಹುದಾದ ರೋಗವಾಗಿರುವುದರಿಂದ ಈ ಕಾರ್ಯದಲ್ಲಿ ನೀವೆಲ್ಲರೂ ಸಿದ್ಧರಾಗಿ, ಸನ್ನಧ್ಧರಾಗಿ ಅತಿಸಾರ ಬೇಧಿಯಿಂದ ಸಂಬವಿಸಬಹುದಾದ ಮಕ್ಕಳ ಸಾವನ್ನು ನಿಯಂತ್ರಿಸಿ ಎಂದು ಕರೆ ನೀಡಿದರು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜಿಂಕ್ ಕಾರ್ನರ್ ತೆರೆಯಬೇಕು. ಓ.ಆರ್.ಎಸ್. ದ್ರಾವಣವನ್ನು ನೀಡಬೇಕು. ಮಕ್ಕಳ ನಿರ್ಜಲೀಕರಣವನ್ನು ತಡೆಗಟ್ಟಬೇಕು. ಅಲ್ಲದೆ, 14 ದಿನಗಳವರೆಗೂ ಜಿಂಕ್ ಮಾತ್ರೆ ಯನ್ನು ನೀಡಬೇಕು. ಮಗುವಿಗೆ ತಾಯಿ ಎದೆಹಾಲನ್ನು ತಪ್ಪದೇ ನೀಡಬೇಕು, ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಗ್ರಾಮಗಳಲ್ಲಿ ಗುಂಪು ಸಭೆಗಳು, ತಾಯಂದಿರ ಸಭೆಗಳನ್ನು ಶಾಲಾ ಮಕ್ಕಳ ಅರೋಗ್ಯ ಜಾಗೃತಿ ಕಾರ್ಯಕ್ರಮ, ಸಮುದಾಯ ಸಭೆಗಳನ್ನು, ಗ್ರಾಮ ಆರೋಗ್ಯ ಪೌಷ್ಟಿಕ ದಿನವನ್ನು ಆಚರಿಸಿ ಕೈತೊಳೆಯುವ ವಿಧಾನ, ಶುಚಿತ್ವ, ಶೌಚಾಲಯ ಬಳಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.ಕಾರ್ಯಕ್ರಮದಲ್ಲಿ, ಓ.ಸಾವಿತ್ರಮ್ಮ, ಪೂರ್ಣಿಮಾ, ಮೂಗಪ್ಪ, ಹನುಮಂತಪ್ಪ, ದಸ್ತಗೀರ್, ವಿರೇಶ್, ಕನಕಪ್ಪ ಮೇಟಿ ಪ್ರಫುಲ್ಲಾ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
