ದಾವಣಗೆರೆ:
ಪೋಷಕರು ಸ್ವಚ್ಛತೆಗೆ ಗಮನ ಹರಿಸುವ ಮೂಲಕ, ಮಕ್ಕಳು ಅತಿಸಾರ ಬೇಧಿಗೆ ತುತ್ತಾಗದಂತೆ ಜಾಗ್ರತೆ ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಕರೆ ನೀಡಿದರು.
ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಐಎಪಿ ಹಾಗೂ ಐಎಂಎ ಸಹಯೋಗದೊಂದಿಗೆ ಆಏರ್ಪಡಿಸಿದ್ದ ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಮಕ್ಕಳಿಗೆ ಓಆರ್‍ಎಸ್ ದ್ರಾವಣ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಆರೋಗ್ಯವೇ ನಮ್ಮ ಆಸ್ತಿಯಾಗಿದ್ದು, ಸ್ವಚ್ಛತೆಯೆಡೆ ಹೆಚ್ಚಿನ ಗಮನ ಹರಿಸಿ, ಮಕ್ಕಳು ಅತಿಸಾರ ಬೇಧಿಗೆ ತುತ್ತಾಗದಂತೆ ಜಾಗ್ರತೆ ವಹಿಸಬೇಕೆಂದು ಸಲಹೆ ನೀಡಿದರು.
ಅತಿಸಾರ ಬೇಧಿಯಿಂದ ಮಗು ನಿತ್ರಾಣಗೊಂಡು ಸಮರ್ಪಕ ಚಿಕಿತ್ಸೆ ದೊರಕದಿದ್ದರೆ ಸಾವಿನ ಹಂತದವರೆಗೆ ತಲುಪುವ ಸಂಭವ ಇರುವುದರಿಂದ, ಪೋಷಕರು ಮಕ್ಕಳು ಬಳಸುವ ವಸ್ತುಗಳ ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕಾಯಿಲೆ ಬಂದ ಮೇಲೆ ಉಪಚರಿಸುವ ಬದಲು, ಕಾಯಿಲೆ ಬಾರದಂತೆ ತಡೆಗಟ್ಟಲು ಮೊದಲ ಆದ್ಯತೆ ನೀಡಬೇಕು.
ಮಕ್ಕಳು ಸಿಕ್ಕ ಸಿಕ್ಕದನ್ನು ಬಾಯಿಗೆ ಇಟ್ಟುಕೊಳ್ಳುತ್ತವೆ. ಆದ್ದರಿಂದ ಮಕ್ಕಳು ಬಳಸುವ ವಸ್ತುಗಳನ್ನು ಕುದಿಯುವ ನೀರಿನಲ್ಲಿ ತೊಳೆದಿಡಬೇಕು. ಪೋಷಕರು ಶೌಚದ ನಂತರ ಸಾಬೂನಿನಿಂದ ಕೈ ತೊಳೆಯಬೇಕು. ಮಕ್ಕಳಿಗೂ ಇದನ್ನು ರೂಢಿಸಬೇಕು. ಅಡುಗೆ ಮಾಡುವ, ಊಟ ಮಾಡುವ ಮುನ್ನ ಹಾಗೂ ಮಕ್ಕಳಿಗೆ ತಿನ್ನಿಸುವ ಮುನ್ನ ಸಾಬೂನಿಂದ ಕೈ ತೊಳೆಯಬೇಕು. ಸ್ವಚ್ಚ ಮೇವ ಜಯತೇ ಎಂಬಂತೆ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಕಿವಿಮಾತು ಹೇಳಿದರು.
ಒಂದು ಪಕ್ಷ ಮಗು ಅತಿಸಾರ ಬೇಧಿಗೆ ತುತ್ತಾದರೆ ಸರ್ಕಾರದಿಂದ ಸರಬರಾಜಾಗುವ ಓಆರ್‍ಎಸ್ ಮತ್ತು ಝಿಂಕ್ ಎಲ್ಲೆಡೆ ಲಭ್ಯವಿದ್ದು ಅದನ್ನು ವೈದ್ಯರು ಹೇಳಿದಂತೆ ಮಗುವಿಗೆ ನೀಡಬೇಕು. ಆಶಾ ಕಾರ್ಯಕರ್ತೆಯರು ಅತ್ಯಂತ ಜವಾಬ್ದಾರಿಯಿಂದ ಇದನ್ನು ಮನೆ ಮನೆಗೆ ತಲುಪಿಸುತ್ತಿದ್ದು ಇದರ ಉಪಯೋಗ ಪಡೆಯಬೇಕು ಹಾಗೂ ಬಹುಮುಖ್ಯವಾಗಿ ಸ್ವಚ್ಚತೆಯ ಮೂಲಕ ಆರೋಗ್ಯವಂತ ಸಮಾಜ ನೀಡಬೇಕೆಂದು ಕರೆ ನೀಡಿದರು.
ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್. ಬಸವರಾಜೇಂದ್ರ ಮಾತನಾಡಿ, ಅತಿಸಾರ ಬೇಧಿ ಮಕ್ಕಳಲ್ಲಿ ನಿರ್ಜಲೀಕರಣ ಉಂಟು ಮಾಡಿ ಸಾವಿನಂತಹ ಪರಿಸ್ಥಿತಿಗೂ ತೆಗೆದುಕೊಂಡು ಹೋಗಬಹುದಾದ್ದರಿಂದ ಪೋಷಕರು ಅತ್ಯಂತ ಜಾಗರೂಕತೆಯಿಂದ ಮಕ್ಕಳ ಸ್ವಚ್ಛತೆ-ಆರೋಗ್ಯದ ಕಡೆ ಗಮನ ಹರಿಸಬೇಕು. ಓಆರ್‍ಎಸ್ ದ್ರಾವಣವು ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿದ್ದು, ಇದನ್ನು ತಯಾರಿಸುವ ಹಾಗೂ ಕುಡಿಸುವ ವಿಧಾನ ಕೂಡ ಸುಲಭ ಇದ್ದು, ಮಕ್ಕಳಿಗೆ ಬೇಧಿ ಕಂಡು ಬಂದ ತಕ್ಷಣ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಕರೆ ನೀಡಿದರು.
ಆರ್‍ಸಿಹೆಚ್‍ಓ ಡಾ.ಈ.ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ 5 ವರ್ಷದ ಕೆಳಗಿನ ಮಕ್ಕಳ ಮರಣ ಕಾರಣಗಳಲ್ಲಿ ಅತಿಸಾರ ಬೇಧಿಯ ಪಾತ್ರ ಶೇ.10 ರಷ್ಟಿದೆ. ಪ್ರತಿ ವರ್ಷ ಸುಮಾರು ಒಂದು ಲಕ್ಷ ಐದು ವರ್ಷದೊಳಗಿನ ಮಕ್ಕಳು ಇದರಿಂದ ಅಸುನೀಗುತ್ತಿದ್ದಾರೆ. ಅತಿಸಾರ ಬೇಧಿಯಿಂದ ಉಂಟಾಗುವ ಸಾವುಗಳು ಸಾಮಾನ್ಯವಾಗಿ ಗುಂಪಾಗಿ ಮಳೆಗಾಲ ಹಾಗೂ ಬೇಸಿಗೆಯಲ್ಲಿ ಸಂಭವಿಸುತ್ತವೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮಕ್ಕಳು ಹೆಚ್ಚಾಗಿ ಸಾವಿಗೀಡಾಗುತ್ತಾರೆಂದು ತಿಳಿಸಿದರು.
ಆಗ್ಗಿಂದಾಗ್ಗೆ ಹೆಚ್ಚುಬಾರಿ ಬೇಧಿ ಆದರೆ ಅದನ್ನು ಅತಿಸಾರ ಬೇಧಿ ಎನ್ನಲಾಗುತ್ತದೆ. ಅತಿಸಾರ ಬೇಧಿಯಿಂದ ಮಕ್ಕಳ ದೇಹದಲ್ಲಿ ನಿರ್ಜಲೀಕರಣ ಮತ್ತು ಲವಣಾಂಶಗಳ ಕೊರತೆಯಾಗಿ ಇವು ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಕಾಲದಲ್ಲಿ ಆರೈಕೆ ಮಾಡದಿದ್ದಲ್ಲಿ ಸಾವು ಕೂಡ ಸಂಭವಿಸುತ್ತದೆ. ಅತಿಸಾರ ಬೇಧಿಯಿಂದ ಉಂಟಾಗುವ ನಿರ್ಜಲೀಕರಣ ಮತ್ತು ಲವಣಾಂಶ ಕೊರತೆಯನ್ನು ಓಆರ್‍ಎಸ್ ದ್ರಾವಣ ನೀಡುವುದರೊಂದಿಗೆ ಹಾಗೂ ಝಿಂಕ್ ಸಲ್ಫೇಟ್ ಮಾತ್ರೆ ಮತ್ತು ಪೌಷ್ಟಿಕ ಆಹಾರ ನೀಡುವುದರೊಂದಿಗೆ ಸರಿಪಡಿಸಬಹುದು ಎಂದರು.
ಶುದ್ಧ ಕುಡಿಯುವ ನೀರಿನ ಬಳಕೆ, ಶುಭ್ರವಾಗಿ ಕೈತೊಳೆಯುವುದು, ಲಸಿಕೆ ನೀಡುವುದು, ಎದೆ ಹಾಲು ಹಾಗೂ ಸೂಕ್ತ ಆಹಾರ ಬಳಕೆಯಿಂದ ಅತಿಸಾರ ಬೇಧಿಯನ್ನು ನಿಯಂತ್ರಿಸಬಹುದು. ಅತಿಸಾರ ಬೇಧಿಯಿಂದುಂಟಾಗುವ ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸಲು ಸರ್ಕಾರ ಜೂ.3 ರಿಂದ 17 ರವರೆಗೆ ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಆಚರಿಸುವ ಮೂಲಕ ಇದರ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ಕೊಡಲು ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಐಎಪಿ ಮತ್ತು ಐಎಂಎ ಕೂಡ ಸಹಾಯ ಹಸ್ತ ಚಾಚಿದೆ ಎಂದು ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಬ ಮಾತನಾಡಿ, ಎನ್‍ಹೆಚ್‍ಎಂ ಅಡಿಯಲ್ಲಿ ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಈ ಪಾಕ್ಷಿಕದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಓಆರ್‍ಎಸ್ ಪೊಟ್ಟಣ ನೀಡಿ, ದ್ರಾವಣ ತಯಾರಿಸುವ ಮತ್ತು ತೆಗೆದುಕೊಳ್ಳುವ ಬಗ್ಗೆ ಪೋಷಕರಿಗೆ ಹೇಳಿಕೊಡುತ್ತಾರೆ. ಅತಿಸಾರ ಬೇಧಿಗೊಳಗಾದವರಿಗೆ ಝಿಂಕ್ ಮಾತ್ರೆಗಳನ್ನು 14 ದಿನಗಳವರೆಗೆ ಪ್ರತಿದನ 1 ರಂತೆ ನೀಡುವುದರಿಂದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ 3 ತಿಂಗಳುಗಳವರೆಗೆ ಅತಿಸಾರ ಬೇಧಿಯಿಂದ ಕಾಪಾಡುತ್ತದೆ ಎಂದರು.
ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಅಧೀಕ್ಷಕಿ ಡಾ. ನೀಲಾಂಬಿಕೆ, ಡಾ.ರೇಣುಕಾರಾಧ್ಯ, ಚಿಗಟೇರಿ ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ವಿಶ್ವನಾಥ್, ಆಯುಷ್ ಅಧಿಕಾರಿ ಡಾ.ಸಿದ್ದೇಶ್, ಡಾ.ಲೋಹಿತಾಶ್ವ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಪೋಷಕರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
