ಅತೃಪ್ತ ಶಾಸಕರ ವಿರುದ್ಧ ಛೀ… ಥೂ… ಚಳವಳಿ

ದಾವಣಗೆರೆ:

   ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿ, ವೈಯಕ್ತಿಕ ಹಿತಾಸಕ್ತಿಗಾಗಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ, ರೆಸಾರ್ಟ್‍ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವ ಮೈತ್ರಿ ಪಕ್ಷದ 16 ಜನ ಶಾಸಕರ ಭಾವಚಿತ್ರವಿರುವ ಫ್ಲೆಕ್ಸ್‍ಗೆ ಚಪ್ಪಲಿ ಹಾರ ಹಾಕಿ, ಅಡಕೆ-ಎಲೆ ಜಗಿದು ಭಾವಚಿತ್ರಗಳ ಮೇಲೆ ಉಗಿಯುವ ಮೂಲಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ ಸೋಮವಾರ ವಿನೂತನವಾಗಿ ಛೀ… ಥೂ… ಚಳವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

    ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಎದುರಿನ ಪಿಬಿ ರಸ್ತೆಯಲ್ಲಿ ಜಮಾಯಿಸಿದ ರೈತ ಮುಖಂಡರು, ರಸ್ತೆ ವಿಭಜಕದ ಮಧ್ಯೆ ಇರುವ ವಿದ್ಯುತ್ ಕಂಬಕ್ಕೆ 16 ಜನ ಶಾಸಕರ ಭಾವಚಿತ್ರ ಇರುವ ಫ್ಲೆಕ್ಸ್ ಕಟ್ಟಿ, ಅದಕ್ಕೆ ಚಪ್ಪಲಿ ಹಾರ ಹಾಕಿ, ಅಡಕೆ-ಎಲೆ ಜಗಿದು ಭಾವಚಿತ್ರಗಳಿಗೆ ಕ್ಯಾಕರಿಸಿ ಉಗಿದು, ರಾಜಕೀಯ ದೊಂಬರಾಟ ನಡೆಸುತ್ತಿರುವ ಶಾಸಕರುಗಳ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಐದು ವರ್ಷಗಳ ಕಾಲ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆಂಬ ನಿರೀಕ್ಷೆಯಿಂದ ಮತದಾರರು, ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ, ಶಾಸಕರನ್ನು ಆಯ್ಕೆ ಮಾಡಿ, ವಿಧಾನಸೌಧಕ್ಕೆ ಕಳುಹಿಸಿರುತ್ತಾರೆ. ಆದರೆ, ಶಾಸಕರು ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಹಾಗೂ ಸಚಿವ ಸ್ಥಾನ ಪಡೆಯಲು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಜನರ ಹಿತಾಸಕ್ತಿಯನ್ನು ಮರೆತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ರಾಜೀನಾಮೆ ನೀಡಿ ರೆಸಾರ್ಟ್‍ಗಳಲ್ಲಿ ಮೋಜು ಮಾಡುತ್ತಿರುವ ಶಾಸಕರುಗಳಿಗೆ ಕನಿಷ್ಠ ಮಾನ, ಮರ್ಯಾದೆ, ಆತ್ಮಗೌರವ, ಆತ್ಮಸಾಕ್ಷಿ ಎಂಬುದು ಇದ್ದರೆ ತಮ್ಮ ಜವಾಬ್ದಾರಿಯನ್ನು ಅರಿತು, ರಾಜೀನಾಮೆ ವಾಪಾಸ್ ಪಡೆದು ಕ್ಷೇತ್ರಗಳಿಗೆ ತೆರಳಿ ಜನರ ಸಮಸ್ಯೆ ಬಗರಹರಿಸಲು ಮುಂದಾಗಬೇಕೆಂದು ಆಗ್ರಹಿಸಿದರು.

    ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಯಾವುದೇ ಪಕ್ಷಗಳ ಶಾಸಕರುಗಳಿಗೆ ಶಿಸ್ತು ಹಾಗೂ ಬದ್ಧತೆಯೇ ಇಲ್ಲವಾಗಿದೆ. ರಾಜ್ಯದಲ್ಲಿ ಮಳೆಯ ಅಭಾವ ಉಂಟಾಗಿ ಮತ್ತೆ ಬರ ಆವರಿಸುವ ಮುನ್ಸೂಚನೆ ಇದೆ. ಈ ಪರಿಸ್ಥಿತಿಯಲ್ಲಿ ಕ್ಷೇತ್ರದ ಜನರು, ರೈತಾಪಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಶಾಸಕರು ವಿಮಾನ ಹಾರಾಟ, ಐಷಾರಾಮಿ ಹೋಟೆಲ್, ರೆಸಾರ್ಟ್‍ಗಳಲ್ಲಿ ಕಾಲಹರಣ ಮಾಡುತ್ತಿರುವುದು ದೊಡ್ಡ ಹೈಡ್ರಾಮವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಜನರ ಸಮಸ್ಯೆ ಮರೆತು ರೆಸಾರ್ಟ್‍ನಲ್ಲಿ ಮೋಜು ಮಸ್ತಿ ಮಾಡುತ್ತಿರುವ ಶಾಸಕರುಗಳಿಂದಾಗಲಿ, ರಾಜಕೀಯ ನಾಯಕರಿಂದಾಗಲೀ ರಾಜ್ಯ ಹಾಗೂ ಅವರವ ಕ್ಷೇತ್ರಗಳ ಅಭಿವೃದ್ಧಿ ಅಸಾಧ್ಯವಾಗಿದೆ. ಮೂರೂ ಪಕ್ಷಗಳ ಜನ ಪ್ರತಿನಿಧಿಗಳು ತಮ್ಮ ಕರ್ತವ್ಯವವನ್ನೇ ಮರೆತು, ರಾಜೀನಾಮೆ ನೀಡಿ, ಜನರ ಭಾವನೆಗಳೊಂದಿಗೆ ಚೆಲ್ಲಾಟ ಆಡುತ್ತಿರುವುದರಿಂದ ಕರ್ನಾಟಕವು ಇಡೀ ದೇಶದ ಮುಂದೆ ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಮತದಾರರ ಆಶಯಗಳನ್ನು ಸಚಿವರು, ಶಾಸಕರು, ಮೂರೂ ರಾಜಕೀಯ ಪಕ್ಷಗಳೂ ಸಂಪೂರ್ಣವಾಗಿ ಧಿಕ್ಕರಿಸಿ ವರ್ತಿಸುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ 16 ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಯನ್ನು ಘೋಷಿಸಬೇಕು. ಚುನಾವಣೆಯಲ್ಲಿ ರೈತರ ಪರ ಕೆಲಸ ಮಾಡುವ ಪ್ರಾಮಾಣಿಕ ಬದ್ಧತೆ, ಕಾಳಜಿ ಇರುವಂತಹ ಯೋಗ್ಯರನ್ನು ಶಾಸಕರನ್ನಾಗಿ ಆಯ್ಕೆ ಮಾಡುವತ್ತ ರಾಜ್ಯದ ಜನತೆಗೂ ಗಮನ ಹರಿಸಬೇಕೆಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ದೊಡ್ಡೇರಿ ಬಸವರಾಜಪ್ಪ, ಚಿಕ್ಕನಹಳ್ಳಿ ಮಲ್ಲೇಶಪ್ಪ, ಚಿನ್ನಸಮುದ್ರ ಶೇಖರ ನಾಯ್ಕ, ಕಲೀಂವುಲ್ಲಾ, ಕಾಳೇಶ, ಗೋಶಾಲೆ ಬಸವರಾಜ, ಅಣ್ಣಪ್ಪ, ಚಂದ್ರಪ್ಪ, ರೇವಣಸಿದ್ದಪ್ಪ, ಮಂಜುನಾಥ, ಹನುಮೇಶ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link