ಕುಣಿಗಲ್
ಮಠದ ಜಮೀನು ಒತ್ತುವರಿ ಮಾಡಿಕೊಂಡಿರುವ ಕಿಡಿಗೇಡಿಗಳು ಸ್ವಾಮೀಜಿ ಮೇಲೆ ಹಲ್ಲೆ ನಡೆಸಿ ಮಠಕ್ಕೆ ಕಲ್ಲು ತೂರಿ ಹಾನಿ ಉಂಟು ಮಾಡಿರುವ ಘಟನೆ ತಾಲ್ಲೂಕಿನ ಅಲ್ಕೆರೆ ಸಿದ್ದಗಂಗಾ ಶಾಖಾ ಮಠದಲ್ಲಿ ಭಾನುವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ಸಿದ್ದಗಂಗಾ ಶಾಖಾ ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಒತ್ತುವರಿದಾರರಿಂದ ಹಲ್ಲೆಗೊಳಗಾಗಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಅಲ್ಕೆರೆ ಸಿದ್ದಗಂಗಾ ಮಠದ ಹೆಸರಿನಲ್ಲಿ 20 ಎಕರೆ ಜಮೀನು ಇದೆ. ಈ ಪೈಕಿ ಗ್ರಾಮಸ್ಥರ ಮನವಿ ಮೇರೆಗೆ ಲಿಂಗೈಕ್ಯ ಶಿವಕುಮಾರ ಮಹಾ ಸ್ವಾಮೀಜಿ ಅವರು ಗ್ರಾಮದ ಸರಕಾರಿ ಪ್ರೌಢಶಾಲೆಗೆ 2 ಎಕರೆ ಜಮೀನನ್ನು ಸಹ ದಾನವಾಗಿ ನೀಡಿದ್ದಾರೆ. ಉಳಿಕೆ ಜಮೀನಿನಲ್ಲಿ ಅಕ್ಕಪಕ್ಕದ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಅಲ್ಕೆರೆ ಸಿದ್ದಗಂಗಾ ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಸರ್ವೆ ಮಾಡಿಸಿ ಒತ್ತುವರಿ ತೆರವಿಗೆ ಮುಂದಾಗಿದ್ದರು.
ಈ ಸಂಬಂಧ ಸರ್ವೆ ಕಾರ್ಯವೂ ಮುಗಿದು ಒತ್ತವರಿ ತೆರವು ಮಾಡಿಕೊಡಲು ಒತ್ತುವರಿದಾರರಿಗೂ ತಿಳಿಸಲಾಗಿತ್ತು. ಭಾನುವಾರ ಸಂಜೆ ಮಠದ ಜಮೀನು ಹದ್ದುಬಸ್ತು ಮಾಡಿಕೊಳ್ಳಲು ಸ್ವಾಮೀಜಿ ಕೆಲಸ ಮಾಡಿಸುತ್ತಿದ್ದ ವೇಳೆ ಒತ್ತುವರಿದಾರರು ಏಕಾಏಕಿ ದಾಳಿ ಮಾಡಿ ಸ್ವಾಮೀಜಿ ಮೇಲೆ ಹಲ್ಲೆ ನಡೆಸಿ ಮಠದ ಮೇಲೆ ಕಲ್ಲು ತೂರಿ ಮಠದ ಕಿಟಕಿ ಗಾಜುಗಳಿಗೆ ಹಾನಿ ಮಾಡಿದ್ದಾರೆ. ಈ ವೇಳೆ ಮಠಕ್ಕೆ ಜಮೀನು ನೀಡಲು ಈ ಹಿಂದೆ ಸಹಕಾರ ನೀಡಿದ್ದ ದಿವಂಗತ ಪಟೇಲ್ ಗಂಗಪ್ಪ ಗೌಡ ಅವರ ಮಕ್ಕಳು ಮಠದ ಪರವಾಗಿ ನಿಂತು ಬೆಂಬಲ ನೀಡಿದ್ದಾರೆ.
ಸ್ವಾಮೀಜಿ ಮೇಲೆ ಹಲ್ಲೆ ನಡೆಸಿ ಮಠಕ್ಕೆ ಕಲ್ಲು ತೂರಿರುವ ಒತ್ತುವರಿದಾರರಾದ ಗ್ರಾಮದ ಶಿವಣ್ಣ, ಗಂಗಾಧರ್, ಕೆಂಪಯ್ಯ, ನಾರಾಯಣ್, ರಂಗಮ್ಮ, ರಾಮಣ್ಣ, ರಂಗಸ್ವಾಮಿ, ರಾಮಕೃಷ್ಣ ಎಂಬುವರ ಮೇಲೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ವಿಷಯ ತಿಳಿದು ಸೋಮವಾರ ಶಾಸಕ ಡಾ.ರಂಗನಾಥ್, ಡಿವೈಎಸ್ಪಿ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಸ್ವಾಮೀಜಿ ಅವರೊಂದಿಗೆ ಗ್ರಾಮಸ್ಥರ ಸಭೆ ನಡೆಸಿ ಒತ್ತವರಿಯಾಗಿರುವ ಮಠದ ಜಮೀನು ತೆರವು ಮಾಡಿಕೊಡಬೇಕೆಂದು ಸೂಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








