ಹೊನ್ನಾಳಿ:
ತಾಲೂಕಿನ ಬೇಲಿಮಲ್ಲೂರು ಗ್ರಾಮ ಪಂಚಾಯ್ತಿಯ ನೀರುಗಂಟಿ ಕೋಟೆಮಲ್ಲೂರಿನ ಎಸ್.ಜಿ. ಶಾಂತರಾಜ್ ಮೇಲೆ ಡಿ31ರಂದು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತೀವ್ರವಾಗಿ ಗಾಯಗೊಂಡಿರುವ ಎಸ್.ಜಿ. ಶಾಂತರಾಜ್ ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋಟೆಮಲ್ಲೂರಿನ ಮಂಜಪ್ಪ ಬುರಲಣ್ಣಾರ ಹಲ್ಲೆ ಮಾಡಿರುವ ವ್ಯಕ್ತಿ. ಕುಡಿಯುವ ನೀರು ಪೂರೈಕೆ ವಿದ್ಯುತ್ ಸ್ವಿಚ್‍ನ್ನು ಅನಧಿಕೃತವಾಗಿ ಈತ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಎಷ್ಟು ಬಾರಿ ಈತನಿಗೆ ತಿಳಿ ಹೇಳಿದರೂ ಈತ ತನ್ನ ಕೃತ್ಯವನ್ನು ನಿಲ್ಲಿಸಿರಲಿಲ್ಲ. ಸಿಟ್ಟಿಗೆದ್ದ ನೀರುಗಂಟಿ ಎಸ್.ಜಿ. ಶಾಂತರಾಜ್ ಕುಡಿಯುವ ನೀರು ಪೂರೈಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಈ ಘಟನೆಯಿಂದ ಕೆರಳಿದ ಮಂಜಪ್ಪ ಬುರಲಣ್ಣಾರ ಡಿ.31ರಂದು ನೀರುಗಂಟಿ ಎಸ್.ಜಿ. ಶಾಂತರಾಜ್ ಅವರನ್ನು ಮನಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾನೆ.
ಖಂಡನೆ: ಹಲ್ಲೆಯನ್ನು ನೀರುಗಂಟಿ ಸಂಘದ ಪದಾಧಿಕಾರಿಗಳು ಖಂಡಿಸಿದ್ದು, ಅಮಾಯಕ ಸಣ್ಣ ನೌಕರರ ಮೇಲೆ ಈ ರೀತಿ ಹಲ್ಲೆ ನಡೆಯುವುದರಿಂದ ನಿರ್ಭೀತಿಯಿಂದ ತಮ್ಮ ಕರ್ತವ್ಯ ನಿಭಾಯಿಸಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ನೀರುಗಂಟಿ ಕೋಟೆಮಲ್ಲೂರಿನ ಎಸ್.ಜಿ. ಶಾಂತರಾಜ್ ನೀಡಿದ ದೂರಿನ ಮೇರೆಗೆ ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ