ಪುರಸಭಾ ಸದಸ್ಯರ ಮೇಲೆ ಹಲ್ಲೆ ..!

ಚಿಕ್ಕನಾಯಕನಹಳ್ಳಿ

     ನನ್ನ ಮೇಲೆ ಹಲ್ಲೆ ನಡೆಸಿ ಹಲ್ಲು ಮುರಿದಿದ್ದಾರೆ, ನನಗೆ ಜೀವ ಭಯವಿದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೆ ನನ್ನ ಪ್ರಾಣ ರಕ್ಷಣೆ ಮಾಡಬೇಕೆಂದು ಪುರಸಭಾ ಸದಸ್ಯ ರೇಣುಕ್ ಪ್ರಸಾದ್ (ಶ್ಯಾಮ್) ಮನವಿ ಮಾಡಿದ್ದಾರೆ.

     ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯಲ್ಲಿ ಕೆಲವು ಮಹಿಳಾ ಸದಸ್ಯರ ಸಂಬಂಧಿಕರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯಾಧಿಕಾರಿಗಳು ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದೆ. ಈ ವಿಚಾರವಾಗಿಯೇ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಯಾವುದೇ ಕ್ಷಣದಲ್ಲಾದರೂ ನನ್ನನ್ನು ಕೊಲೆ ಮಾಡಬಹುದು. ಮಹಿಳಾ ಪುರಸಭಾ ಸದಸ್ಯರೊಬ್ಬರ ಪುತ್ರ ಆತನ ಸ್ನೇಹಿತರೊಡಗೂಡಿ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾನೆ.

    ಈ ಬಗ್ಗೆ ಪೊಲಿಸರಿಗೆ ದೂರು ನೀಡಿದರೂ ಪ್ರಕರಣ ದಾಖಲಿಸುತ್ತಿಲ್ಲ. ಪುರಸಭೆ ಮುಂಭಾಗದಲ್ಲಿದ್ದ ನಂದಿನಿ ಹಾಲಿನ ಕೇಂದ್ರದಲ್ಲಿ ಹಾಲು ತರಲು ಹೋದಾಗ ನನ್ನನ್ನು ಕರೆದು ಏಕಾಏಕಿ ದಾಳಿ ಮಾಡಿದ್ದಾರೆ. ದಾಳಿಯಿಂದಾಗಿ ನನ್ನ ಹಲ್ಲು ಮುರಿದಿದೆ, ಎದೆಯ ಉಸಿರಾಟಕ್ಕೆ ತೊಂದರೆಯಾಗಿ ಆಸ್ಪತ್ರೆ ಸೇರಿದ್ದೆ, ನನಗೆ ಹೊರಗಡೆ ಬರಲು ಜೀವಭಯವಿದೆ ಎಂದರು. ಚಿ.ನಾ.ಹಳ್ಳಿ ಪಟ್ಟಣದ 12ನೇ ವಾರ್ಡ್ ನ ಸದಸ್ಯನಾದ ನನ್ನ ಮೇಲೆ ಹಲ್ಲೆ ನಡೆದು ನಾಲ್ಕು ದಿನಗಳು ಕಳೆದರೂ ಇದುವರೆಗೂ ಪ್ರಕರಣ ದಾಖಲಾಗಿಲ್ಲ, ನನ್ನನ್ನು ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಹಲ್ಲೆ ಮಾಡಿದವರೆ ನನ್ನ ಕೊಲೆಗೆ ಸಂಚು ರೂಪಿಸುತ್ತಿದ್ದು, ಅಪಘಾತ ಮಾಡಿಸಬಹುದು, ಬೇರೆಯವರನ್ನು ಬಿಟ್ಟು ಮತ್ತೆ ಹಲ್ಲೆ ಮಾಡಿಸಬಹುದು, ಅಲ್ಲದೆ ಮಹಿಳಾ ಸದಸ್ಯರ ಮಗ ಮಹಿಳೆಯರಿಗೆ ಬಡ್ಡಿ ವ್ಯವಹಾರ ನೀಡುವುದು ಹೆಚ್ಚು ಆ ಮೂಲಕ ಮುಂದೊಂದು ದಿನಗಳಲ್ಲಿ ಮಹಿಳೆಯರಿಂದಲೂ ನನ್ನನ್ನು ಸರ್ವನಾಶ ಮಾಡಿಸಬಹುದು, ದೂರು ಕೊಟ್ಟು ಬಂದ ನಂತರವೂ ಆತನ ಸ್ನೇಹಿತನೊಬ್ಬ ಪೋನ್ ಮಾಡಿ, ಪಟ್ಟಣದ ಸರ್ಕಲ್ ಗೆ ಬಾ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಸುತ್ತಾನೆ, ಅವರ ಜೊತೆ 100ಮಂದಿ ರೌಡಿ ಪಟಲಾಂ ಇದ್ದಾರೆ, ನನಗೆ ಏನಾದರೂ ಆದರೆ ನನ್ನ, ಹೆಂಡತಿ ಮಕ್ಕಳ ಗತಿ ಏನು, ಪುರಸಭೆಯಲ್ಲಿನ ಆಡಳಿತ ನ್ಯಾಯಯುತವಾಗಿ, ಸಂವಿಧಾನಾತ್ಮಕವಾಗಿ ನಡೆಯಬೇಕು ಎನ್ನುವುದೇ ತಪ್ಪಾ ?. ಎಂದು ಪ್ರಶ್ನಿಸಿದರು.

    ಆರ್.ಟಿ.ಐ.ನಲ್ಲಿ ಮಾಹಿತಿ ಕೇಳಿದರೆ ಕಿರುಕುಳ: ಸರ್ಕಾರಿ ಜಾಗದ ಬಗ್ಗೆ ಪುರಸಭೆಯಲ್ಲಿನ ಫೈಲ್ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಮಹಿಳಾ ಪುರಸಭಾ ಸದಸ್ಯರ ಪತಿ, ನಾನು ಕೊಟ್ಟಿರುವ ದೂರನ್ನು ಹರಿದು ಹಾಕುತ್ತಾರೆ, ಎಂದರೆ ಪುರಸಭೆಯಲ್ಲಿ ಅವರ ಪ್ರಭಾವ ಎಷ್ಟಿದೆ, ಎ.ಜೆ ಆಡಿಟ್ ನಲ್ಲಿ ಹಲವಾರು ಅಬ್ಜಕ್ಷನ್ ಗಳಾಗಿವೆ, ಅದನ್ನು ನಾನು ಆರ್.ಟಿ.ಐ ನಲ್ಲಿ ಕೇಳಲು ಹೋದರೆ ನನಗೆ ಕಿರುಕುಳ ಕೊಡುತ್ತಾರೆ ಎಂದರು.

     ಪೊಲೀಸರ ಮೇಲೆ ಆರೋಪ: ಪೊಲಿಸ್ ಸಬ್ ಇನ್ಸ್ ಪೆಕ್ಟರ್ರವವರನ್ನು ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರೆ, ಪಿ.ಎಸ್.ಐ.ರವರು ನಿಮ್ಮ ಮೇಲೂ ಜಾತಿ ನಿಂದನೆ ಕೇಸ್ ಕೊಟ್ಟಿದ್ದಾರೆ ಯೋಚನೆ ಮಾಡಿ ಹೇಳಿ ಎಂದು ಪ್ರಕರಣದ ದಿಕ್ಕನ್ನು ತಿರುಗಿಸುತ್ತಿದ್ದಾರೆ ಹಾಗಾಗಿ ನನಗೆ ನ್ಯಾಯ, ಭದ್ರತೆ ಒದಗಿಸಬೇಕೆಂದು, ಪಿ.ಎಸ್.ಐ ಶಿವಪ್ಪರವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಬೆಂಗಳೂರಿನ ಐಜಿಪಿ ಹಾಗೂ ತುಮಕೂರಿನ ಎಸ್.ಪಿ ರವರಿಗೂ ಸ್ಪೀಡ್ ಪೋಸ್ಟ್ ಮಾಡಿದ್ದೇನೆ ಎಂದರು.ಚಿ.ನಾ.ಹಳ್ಳಿ ಪೊಲಿಸ್ ಠಾಣೆ ಪಂಚಾಯಿತಿ ಕಟ್ಟೆ ಆಗಿದೆ, ಗಿರೀಶ್ ಹಾಗೂ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದವರ ಮೇಲೆ ಪೊಲಿಸ್ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

    ಶ್ಯಾಮ್ ಪತ್ನಿ ಭಾರತಿ ಮಾತನಾಡಿ, ನನ್ನ ಪತಿ ಮೇಲೆ ಹಲ್ಲೆ ನಡೆದ ಘಟನೆ ಪೊಲಿಸ್ ನವರಿಗೆ ತಿಳಿಸಿದರೂ ಪೊಲಿಸ್ ನವರು ಪ್ರಕರಣ ದಾಖಲಿಸದಿರುವುದನ್ನು ನೋಡಿದರೆ ಕಾನೂನು ಏನಾಗಿದೆ ಎಂಬ ಪ್ರಶ್ನೆ ಎದುರಾಗುತ್ತದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link