ದಾವಣಗೆರೆ:
ಆಸ್ಟ್ರೇಲಿಯಾದ ಮೆಲ್ಬರ್ನ್ ನಗರದ ಬೆವ್ಯೂ ಹೋಟೆಲ್‍ನಲ್ಲಿ ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಜಗಜ್ಯೋತಿ ಶ್ರೀಬಸವೇಶ್ವರ ಅವರ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ವಿಶ್ವದ ಅಪರೂಪದ ದಾರ್ಶನಿಕ ಬಸವಣ್ಣನವರಾಗಿದ್ದು, ಅವರು ಸಮ ಸಮಾಜ ನೆಲೆಗೊಳಿಸಲು ಹೋರಾಡಿ ಅದರಲ್ಲಿ ಯಶಸ್ಸು ಕಂಡರು. ಕಾಯಕ, ದಾಸೋಹ, ಇಷ್ಟಲಿಂಗ ಪೂಜೆಯ ಮೂಲಕ ಲಿಂಗಾಯತ ಧರ್ಮದ ಉದಯಕ್ಕೆ ಕಾರಣರಾದರು ಎಂದು ಸ್ಮರಿಸಿದರು.
ಬಸವಣ್ಣನವರಂಥ ಮತ್ತೊಬ್ಬ ಸಮಾಜ ಸುಧಾರಕರನ್ನು ಕಾಣುವುದು ವಿರಳ. ಅವರ ತತ್ವಗಳಡಿಯಲ್ಲಿ ಜಗತ್ತು ಮುನ್ನಡೆದರೆ ಭಯೋತ್ಪಾದನೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತೀಯತೆ, ಲಿಂಗ ಅಸಮಾನತೆ ತನ್ನಷ್ಟಕ್ಕೆ ತಾನೇ ಸಮಾಧಿಯಾಗುವುದು ಎಂದರು.
ಸಾಹಿತಿ, ವಾಗ್ಮಿ ಚಟ್ನಳ್ಳಿ ಮಹೇಶ್ ಬಸವಣ್ಣನವರ ವಿಶ್ವಮಾನ್ಯ ತತ್ವಗಳ ಪರಿಚಯ ಮಾಡಿಕೊಟ್ಟರು. ಪ್ರವಾಸಿಗ ಜಗದೀಶ್ ಪ್ರತಿವರ್ಷ ಏರ್ಪಡಿಸಿ ಬೇರೆ ಬೇರೆ ದೇಶಗಳಲ್ಲಿ ಹೀಗೆ ಬಸವ ಜಯಂತಿ ಆಚರಿಸಲು ಪೂಜ್ಯರು ಅವಕಾಶ ಕಲ್ಪಿಸಿಕೊಡಬೇಕಾಗಿ ವಿನಂತಿಸಿಕೊಂಡರು.
ಶಿವಸಂಚಾರದ ಕೆ ದಕ್ಷಾಯಣಿ ಬಸವಣ್ಣನವರ ವಚನಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರವಾಸದ ವ್ಯವಸ್ಥಾಪಕ ಸುರೇಶ್ ಸ್ವಾಗತಿಸಿದರು. ಮತ್ತೋರ್ವ ಪ್ರವಾಸಿಗ ನಂಜನಗೌಡ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








