ಹೊನ್ನಾಳಿ:
ಹಿರೇಕಲ್ಮಠದ ಹಿಂದಿನ ಗುರುಗಳಾದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಈ ಭಾಗದಲ್ಲಿ ತಮ್ಮ ಅನನ್ಯ ಸೇವೆಯ ಮೂಲಕ ಜನಜಾಗೃತಿ ಉಂಟುಮಾಡಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಇಲ್ಲಿನ ಹಿರೇಕಲ್ಮಠದಲ್ಲಿ ಸೋಮವಾರ ಹಮ್ಮಿಕೊಂಡ ಅವರಾತ್ರಿ ಅಮಾವಾಸ್ಯೆ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಹಿರೇಕಲ್ಮಠದಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನ್ನ, ಜ್ಞಾನ ದಾಸೋಹ ನೀಡುವ ಮೂಲಕ ಆಶ್ರಯವನ್ನೂ ನೀಡಿ ತ್ರಿವಿಧ ದಾಸೋಹಿ ಎನಿಸಿಕೊಂಡಿದ್ದಾರೆ.
ದಶಕಗಳ ಹಿಂದೆಯೇ ಈ ಭಾಗದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಬಡವರಿಗೆ ಗಗನಕುಸುಮವಾಗಿದ್ದ ಶಿಕ್ಷಣವನ್ನು ಉಚಿತವಾಗಿ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿಯೇ ಈಗಿನ ಶ್ರೀಗಳಾಗಿರುವ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂದಿನ ಗುರುಗಳಾದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ರಾಜ್ಯಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರಿದ್ದಾರೆ.
ಅವರ ಸವಿನೆನಪಿಗಾಗಿ ಈಗಿನ ಶ್ರೀಗಳಾಗಿರುವ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಿರೇಕಲ್ಮಠದಲ್ಲಿ ಹಮ್ಮಿಕೊಳ್ಳುವ ಯಾವುದೇ ಕಾರ್ಯಕ್ರಮಗಳಿಗೆ ಭಕ್ತರು ಸರ್ವ ರೀತಿಯ ಸಹಕಾರ ನೀಡುತ್ತಿದ್ದಾರೆ. ಇದು ಹೀಗೆಯೇ ಮುಂದುವರೆಯಲಿ. ಭಕ್ತರನ್ನು, ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಲಿ ಎಂದು ಆಶಿಸಿದರು.
ಚನ್ನಪ್ಪ ಸ್ವಾಮಿಗಳ ಬೆಳ್ಳಿ ರಥದ ನಿರ್ಮಾಣಕ್ಕೆ ಅಗತ್ಯವಿರುವ ಧನಸಹಾಯವನ್ನು ತಾಲೂಕಿನ ಬೆನಕನಹಳ್ಳಿ ಗ್ರಾಮಸ್ಥರು ಭಕ್ತಿಪೂರ್ವಕವಾಗಿ ನೀಡಿದ್ದಾರೆ. ಸದ್ಯಕ್ಕೆ 2.15 ಲಕ್ಷ ರೂ.ಗಳನ್ನು ಗ್ರಾಮಸ್ಥರು ಸಂಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಾಧ್ಯವಾದರೆ ಇನ್ನೂ ಹೆಚ್ಚಿನ ಪ್ರಮಾಣದ ಭಕ್ತಿ ಕಾಣಿಕೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಧರ್ಮಸಭೆಯ ಸಾನಿಧ್ಯ ವಹಿಸಿದ್ದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಕ್ತರು ಸಮಯ ವ್ಯರ್ಥಮಾಡದೇ ಭಗವಂತನ ನೆರಳಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹಿಂದಿನ ಶ್ರೀಗಳು ಧಾರ್ಮಿಕ ಆಚರಣೆಗಳನ್ನು ಜಾರಿಗೆ ತಂದು ನಿರಂತರವಾಗಿ ಭಕ್ತರಿಗೆ ಪೂಜಾ ಕೈಂಕರ್ಯ, ಧರ್ಮಸಭೆಗಳು ಸೇರಿದಂತೆ ಹತ್ತು ಹಲವು ಕಾರ್ಯಗಳನ್ನು ಮಾಡಿದ್ದರು. ಹಿರೇಕಲ್ಮಠದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳೂ ಭಕ್ತರ ಮತ್ತು ಲೋಕ ಕಲ್ಯಾಣಕ್ಕಾಗಿಯೇ ಇವೆ ಎಂದು ಹೇಳಿದರು.
ಮಾರ್ಚ್ 12ರಂದು ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಪುಣ್ಯಸ್ಮರಣೆ, 18ರಂದು ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತೃತೀಯ ವರ್ಷದ ಪುಣ್ಯಸ್ಮರಣೆ ಹಾಗೂ ಬೆಳ್ಳಿ ರಥ ಲೋಕಾರ್ಪಣೆ ಸಮಾರಂಭಗಳನ್ನು ಶ್ರೀಶೈಲ ಮತ್ತು ಕಾಶಿ ಜಗದ್ಗುರುಗಳ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆಂಗಲಹಳ್ಳಿ ಕೆ.ಎಚ್. ಷಣ್ಮುಖಪ್ಪ ಬೆಳ್ಳಿ ರಥದ ನಿರ್ಮಾಣಕ್ಕೆ 1 ಕೆಜಿ ಬೆಳ್ಳಿ ದಾನ ನೀಡಿ ಮಾತನಾಡಿದರು.ರೈತ ಸಂಘದ ನ್ಯಾಮತಿ ತಾಲೂಕು ಘಟಕದ ಅಧ್ಯಕ್ಷ ಬಿ.ಎಚ್. ಉಮೇಶ್, ಬೆನಕಯ್ಯಶಾಸ್ತ್ರೀ, ಚಂದ್ರಯ್ಯ ಮತ್ತಿತರರು ಮಾತನಾಡಿದರು.ತೀರ್ಥರಾಮೇಶ್ವರ ಸುಕ್ಷೇತ್ರದಲ್ಲಿ ಮೂರು ದಿನಗಳ ಕಾಲದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರ ಇಷ್ಟಲಿಂಗ ಮೌನ ಶಿವಯೋಗಾನುಷ್ಠಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬೆಳಗುತ್ತಿ ಗ್ರಾಮಸ್ಥರನ್ನು ಹಾಗೂ ಬೆಳ್ಳಿ ರಥದ ನಿರ್ಮಾಣಕ್ಕೆ 2.15 ಲಕ್ಷ ರೂ.ಗಳನ್ನು ನೀಡಿದ ಬೆನಕನಹಳ್ಳಿ ಗ್ರಾಮಸ್ಥರನ್ನು, ಕರ್ನಾಟಕ ಜಾನಪದ ಅಕಾಡೆಮಿಯ ರಾಜ್ಯ ಪ್ರಶಸ್ತಿ ಪುರಸ್ಕತ ರಾಣೇಬೆನ್ನೂರಿನ ವೀರಗಾಸೆ ಕಲಾವಿದ ಬಸವಣ್ಯಪ್ಪ ಅಟವಾಳಗಿ, ಅಮಾವಾಸ್ಯೆ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ ಶಿವಮೊಗ್ಗದ ಬೆನಕೇಶ್ವರ ರೈಸ್‍ಮಿಲ್ಸ್‍ನ ಬಾನಾಪುರದ ಮರುಳಪ್ಪ ಮತ್ತು ಮಕ್ಕಳನ್ನು ಸನ್ಮಾನಿಸಲಾಯಿತು.
ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಎಚ್.ಜಿ. ರುದ್ರೇಶ್, ಮಾಜಿ ಅಧ್ಯಕ್ಷ ಕೆ. ಕರೇಗೌಡ, ಶಿಕ್ಷಕ ಎ.ಜಿ. ಹನುಮಂತಪ್ಪ, ಪಿ. ವೀರಣ್ಣ, ಕುಮಾರಯ್ಯ, ಗಣೇಶ್, ಟಿ.ಜಿ. ಮಲ್ಲೇಶಪ್ಪ, ಚನ್ನಕಿರಣ ಪ್ರಶಸ್ತಿ ವಿಜೇತ ಬೆಳಗುತ್ತಿ ಹಣವಾಡದ ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.