ಸ್ವಚ್ಚತೆ ಕುರಿತು ಇನ್ನೂ ಮೂಡದ ಜಾಗೃತಿ

ಚಿತ್ರದುರ್ಗ:

     ಪ್ರತಿಯೊಬ್ಬರು ಕಡ್ಡಾಯವಾಗಿ ಸ್ಚಚ್ಚತೆಯನ್ನು ಕಾಪಾಡಬೇಕೆಂಬ ಉದ್ದೇಶದಿಂದ ಅನೇಕ ಕಾನೂನು ಕಾಯ್ದೆಗಳನ್ನು ಸರ್ಕಾರ ಜಾರಿಗೆ ತಂದರೂ ನಮ್ಮಲ್ಲಿ ಇನ್ನು ಸ್ವಚ್ಚತೆ ಬಗ್ಗೆ ಅಷ್ಟೊಂದು ಅರಿವಿಲ್ಲ ಎಂದು ನಗರಸಭೆ ಪೌರಾಯುಕ್ತ ಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.
ನಗರಾಭಿವೃದ್ದಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ತ.ರಾ.ಸು.ರಂಗಮಂದಿರದಲ್ಲಿ ಗುರುವಾರ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಸ್ವಚ್ಚ ಕ್ವಿಜ್- ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

       ನಾವುಗಳು ಇನ್ನು ಈಗ ಸ್ವಚ್ಚತೆ ಕಡೆಗೆ ಹೆಜ್ಜೆ ಹಾಕುತ್ತಿದ್ದೇವೆ. ಮುಂದುವರೆದ ದೇಶಗಳಲ್ಲಿ ಯಾಂತ್ರಿಕತೆಯನ್ನು ಬಳಸಿ ಸ್ವಚ್ಚತೆಯನ್ನು ಕಾಪಾಡಲಾಗುತ್ತಿದೆ. ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಳವಾಗಿರುವುದರಿಂದ ಇನ್ನು ಜನರಲ್ಲಿ ಸ್ವಚ್ಚತೆ ಕುರಿತು ಜಾಗೃತಿಯಿಲ್ಲ. ಕಾನೂನು ಹೇಳುವುದು ಸುಲಭ. ಆದರೆ ಪಾಲನೆ ಮಾಡುವುದು ಕಷ್ಟವಾಗುತ್ತದೆ ಎಂದು ತಿಳಿಸಿದರು.

      ಎಲ್ಲರೂ ಕಡ್ಡಾಯವಾಗಿ ಸ್ವಚ್ಚತೆಯನ್ನು ಕಾಪಾಡಿ ಎಂಬುದು ಈ ಕಾರ್ಯಕ್ರಮದ ಉದ್ದೇಶ. ಇನ್ನು ಬಯಲಿನಲ್ಲಿ ಮೂತ್ರ, ಶೌಚ ಮಾಡುವ ಪದ್ದತಿ ನಮ್ಮಲ್ಲಿ ಇರುವುದರಿಂದ ಪರಿಸರ ಕಲುಷಿತಗೊಳ್ಳುತ್ತಿದೆ. ನಗರದಲ್ಲಿ ಶೇ.30 ರಿಂದ 40 ರಷ್ಟು ಜನ. ಗ್ರಾಮೀಣ ಪ್ರದೇಶದಲ್ಲಿ ಶೇ.60 ರಷ್ಟು ಜನ ನಗರ ಪ್ರದೇಶದಲ್ಲಿ ವಾಸಿಸುತ್ತಿರುವುದರಿಂದ ಪೌರ ಕಾರ್ಮಿಕರ ಸಂಖ್ಯೆ ತುಂಬಾ ಕಡಿಮೆಯಿದೆ. ಎಲ್ಲದಕ್ಕೂ ನಗರಸಭೆಯನ್ನೇ ದೂಷಿಸುವಂತಾಗಿದೆ. ಬಯಲಿನಲ್ಲಿ ಮಲ, ಮೂತ್ರ ಮಾಡುವುದರಿಂದ ರೋಗ-ರುಜಿನಗಳು ಸುಲಭವಾಗಿ ಹರಡುತ್ತದೆ. ಹಾಗಾಗಿ ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಸ್ವಚ್ಚತೆ ಕುರಿತು ಇಂತಹ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

       ನಗರದಲ್ಲಿ ಸ್ಥಳೀಯ ಸ್ವಸಹಾಯ ಸಂಘಗಳನ್ನು ಬಳಸಿಕೊಂಡು ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಕರಪತ್ರ ವಿತರಣೆ, ಬೀದಿನಾಟಕ, ಮನೆ ಮನೆಗೆ ಬೆಳಗಿನ ವೇಳೆಯಲ್ಲಿ ನಗರಸಭೆ ವಾಹನಗಳನ್ನು ಕಳಿಸಿ ಹಸಿ ಕಸ, ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸ್ವಚ್ಚತೆಗೆ ಆದ್ಯತೆ ನೀಡಲಾಗುತ್ತಿದೆ. ಆದರೂ ಜನ ಮನೆಯ ಕಸವನ್ನು ತಂದು ಬೀದಿಗೆ ಸುರಿಯುವುದು ಇನ್ನು ನಿಂತಿಲ್ಲ. ನಗರಸಭೆಯೊಂದಿಗೆ ಸಾರ್ವಜನಿಕರು ಸ್ವಚ್ಚತೆಗೆ ಕೈಜೋಡಿಸುವಂತೆ ಮನವಿ ಮಾಡಿದರು.

      ಕಾರ್ಯಪಾಲಯ ಅಭಿಯಂತರ ಎಸ್.ರಾಜಶೇಖರ್ ಮಾತನಾಡಿ ನಗರ ಪ್ರದೇಶಗಳನ್ನು ಅಭಿವೃದ್ದಿಪಡಿಸಿ ಜನತೆಗೆ ಮೂಲಸೌಲಭ್ಯಗಳನ್ನು ಒದಗಿಸುವುದಕ್ಕಾಗಿಯೇ ನಗರಾಭಿವೃದ್ದಿ ಕೋಶವಿದೆ. ನ್ಯಾಯಾಧೀಶ ಯಲ್ಲಪ್ಪರೆಡ್ಡಿ ಕೇಂದ್ರ ಸರ್ಕಾರದ ವಿರುದ್ದ ಹೋರಾಡಿ ಸ್ವಚ್ಚತೆ ಕುರಿತ ಕಾಯ್ದೆ ಜಾರಿಗೆ ತರಲು ಶ್ರಮಿಸಿದರು. ತ್ಯಾಜ್ಯ ವಸ್ತುಗಳ ವಿಂಗಡಣೆ, ಮನೆ ಮನೆಗೆ ನಗರಸಭೆ ವಾಹನ ಹೋಗಿ ಕಸ ಸಂಗ್ರಹಿಸುವುದು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಸ್ಚಚ್ಚತೆ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ. ಈ ನಿಟ್ಟಿನಲ್ಲಿ ಸ್ವಚ್ಚ ಭಾರತಕ್ಕೆ ಕೈಜೋಡಿಸುವಂತೆ ಕೋರಿದರು.

        ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್ ಮಾತನಾಡುತ್ತ ಸ್ವಚ್ಚ ಭಾರತ ಕೇಂದ್ರ ಸರ್ಕಾರದ ಪ್ರಮುಖ ಯೋಜನೆ. ಸ್ವಚ್ಚ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವುದು ಕಾರ್ಯಕ್ರಮದ ಉದ್ದೇಶ. ಇದುವರೆವಿಗೂ ನಾಲ್ಕುವರೆ ಸಾವಿರ ಶೌಚಾಲಯ ನಿರ್ಮಿಸಲಾಗಿದೆ. ಒಂದು ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರ ಫಲಾನುಭವಿಗಳಿಗೆ ಹದಿನೈದು ಸಾವಿರ ರೂ.ಗಳನ್ನು ನೀಡಲಿದೆ. ಇದನ್ನು ಬಳಸಿಕೊಂಡು ಎಲ್ಲರೂ ಮನೆಗಳಲ್ಲಿ ಶೌಚಾಲಯಗಳನ್ನು ಕಟ್ಟಿಕೊಂಡು ಬಯಲುಮುಕ್ತ ಶೌಚವನ್ನಾಗಿ ಮಾಡಿ ಎಂದು ವಿನಂತಿಸಿದರು.ವಾಲ್ನಟ್ ನಾಲೆಡ್ಜ್ ಸೊಲೂಷನ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನ ಹರ್ಷ, ಸ್ವಾಮಿ ವೇದಿಕೆಯಲ್ಲಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap