ಡಯಾಲಿಸಿಸ್ ಕುರಿತು ಜಾಗೃತಿ ಕಾರ್ಯಕ್ರಮ

ಚಿತ್ರದುರ್ಗ:

      ಡಯಾಲಿಸಿಸ್ ಕಾಯಿಲೆಗೆ ತುತ್ತಾದವರಿಗೆ ಸಾಮಾಜಿಕ ಬೆಂಬಲ ಹಾಗೂ ಸಾಂತ್ವನದ ಮಾತುಗಳು ಬೇಕು. ಕಾಯಿಲೆಯಿಂದ ನರಳುವವರ ಸೇವೆ ಮಾಡಿದಾಗಲೇ ನಿಜವಾದ ಜೀನವ ಏನೆಂಬುದು ಗೊತ್ತಾಗುತ್ತದೆ ಎಂದು ಹಾಸ್ಯ ನಟ ನಾಗರಾಜ್ ಕೋಟಿ ಹೇಳಿದರು.

     ಬುರುಜನಹಟ್ಟಿಯ ಪರಶುರಾಂರವರು ಡಯಾಲಿಸಿಸ್ ಕಾಯಿಲೆ ಬಂದಿರುವ ರೋಗಿಗಳಿಗೆ ಪಿಂಚಣಿ ಸೌಲಭ್ಯಕ್ಕಾಗಿ ಒತ್ತಾಯಿಸಿ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

      ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಕಾಯಿಲೆ ಬರುವುದು ಸಹಜ. ಕೆಲವರು ನಾನೇ ಶ್ರೇಷ್ಟ, ದೊಡ್ಡವನು, ಶ್ರೀಮಂತ, ಎಲ್ಲವನ್ನು ತಿಳಿದುಕೊಂಡಿರುವ ಸರ್ವಜ್ಞ ಎಂದು ಜಂಬ ಪಡುತ್ತಿರುತ್ತಾರೆ. ಕಾಯಿಲೆ ಬಂದಾಗಲೇ ಅಂತಹವರಿಗೆ ಕಷ್ಟ ಏನೆಂಬುದು ಅರಿವಿಗೆ ಬರುತ್ತದೆ. ಭಗವಂತ ನೋವು-ನಲಿವು ಎರಡನ್ನು ಕೊಡುತ್ತಾನೆ. ಎಲ್ಲವನ್ನು ಸಮಾನವಾಗಿ ಸ್ವೀಕರಿಸಬೇಕು. ಒಬ್ಬರ ಮೇಲೆ ಮತ್ತೊಬ್ಬರು ಪೈಪೋಟಿ ಮಾಡಿಕೊಂಡು ಬದುಕುವುದರಿಂದ ಮನುಷ್ಯ ಸಂಪಾದನೆ ಹಿಂದೆ ಬಿದ್ದಿರುವುದರಿಂದ ಆರೋಗ್ಯ ಕಡೆ ಯಾರು ಗಮನ ಕೊಡುತ್ತಿಲ್ಲದಿರುವುದು ವಿಷಾದದ ಸಂಗತಿ ಎಂದು ನೋವಿನಿಂದ ನುಡಿದರು.

     ಡಯಾಲಿಸಿಸ್ ರೋಗಿಗಳಿಗೆ ತಿಂಗಳಿಗೆ ಕನಿಷ್ಟ ಹತ್ತು ಸಾವಿರ ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ಸರ್ಕಾರ ಉಚಿತವಾಗಿ ಎಲ್ಲಾ ಆರೋಗ್ಯ ಸೇವೆಗಳನ್ನು ಒದಗಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಸೌಲಭ್ಯ ಪಡೆದುಕೊಳ್ಳಲು ಹೋದಾಗ ಅನೇಕ ಷರತ್ತುಗಳನ್ನು ವಿಧಿಸುವುದರಿಂದ ಅನೇಕರಿಗೆ ಸರ್ಕಾರದ ಸವಲತ್ತುಗಳು ದೊರಕುತ್ತಿಲ್ಲ. ಅಪಘಾತದಲ್ಲಿ ಗಾಯಗೊಂಡವರು ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದರೆ ಜನ ನೋಡಿಕೊಂಡು ಸುಮ್ಮನೆ ಹೋಗುತ್ತಾರೆ. ಇನ್ನು ಕೆಲವರು ಮೊಬೈಲ್‍ನಲ್ಲಿ ಸೆರೆಹಿಡಿದುಕೊಂಡು ವಾಟ್ಸ್‍ಪ್‍ಗೆ ಕಳಿಸುತ್ತಾರೆ. ಇದೆಂತ ಹೀನ ಕೃತ್ಯ ಎಂದು ಬೇಸರ ವ್ಯಕ್ತಪಡಿಸಿದರು.

      ಮನೆಗಳನ್ನು ಕಟ್ಟುವ ಬದಲು ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕು. ಸಾಂತ್ವನದಿಂದ ಶೇ.50 ರಷ್ಟು ಕಾಯಿಲೆಯನ್ನು ಗುಣಪಡಿಸಬಹುದು. ಒತ್ತಡ ಆತಂಕದಿಂದ ಎಲ್ಲರಿಗೂ ರಕ್ತದೊತ್ತಡ, ಸಕ್ಕರೆ ಕಾಯಿಲೆ ಬರುತ್ತಿರುವುದರಿಂದ ಬದುಕನ್ನು ಹಗುರವಾಗಿ ತೆಗೆದುಕೊಳ್ಳಿ. ಬಾರವಾಗಿ ತೆಗೆದುಕೊಳ್ಳಲು ಹೋಗಬೇಡಿ ಎಂದು ಡಯಾಲಿಸಿಸ್ ರೋಗಿಗಳಿಗೆ ಆತ್ಮಸ್ಥೈರ್ಯದ ಮಾತುಗಳನ್ನಾಡಿದರು.

      ಒಂದು ಕುಟುಂಬದಲ್ಲಿ ಒಬ್ಬರಾದರೂ ಸಕ್ಕರೆ ಕಾಯಿಲೆ, ರಕ್ತದೊತ್ತಡವಿರುವವರು ಸಿಗುತ್ತಾರೆ. ಇನ್ನು ಹತ್ತು ವರ್ಷದಲ್ಲಿ ಮನೆಗಿಬ್ಬರು ಮಾನಸಿಕ ರೋಗಿಗಳಾಗುತ್ತಾರೆ ಎನ್ನುವುದು ಸಂಶೋಧನೆಯಿಂದ ಗೊತ್ತಾಗಿದೆ.ಚಿಕ್ಕವರು, ದೊಡ್ಡವರು, ಬಡವ-ಶ್ರೀಮಂತ ಎನ್ನುವ ತಾರತಮ್ಯವಿಲ್ಲದೆ ಎಲ್ಲರನ್ನು ಸಮಾನವಾಗಿ ನೋಡುವ ಬುದ್ದಿ ಬೆಳೆಸಿಕೊಳ್ಳಿ ಎಂದು ಜನತೆಗೆ ಕರೆ ನೀಡಿದರು.

      ಸುದ್ದಿಗಿಡುಗ ಪತ್ರಿಕೆ ಸಂಪಾದಕ ಶ.ಮಂಜುನಾಥ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಬುರುಜನಹಟ್ಟಿಯ ಪರಶುರಾಂ ಡಯಾಲಿಸಿಸ್ ಕಾಯಿಲೆಗೆ ತುತ್ತಾದವರು ಚಿಕಿತ್ಸೆ ಪಡೆದುಕೊಳ್ಳುವುದು ತುಂಬಾ ಕಷ್ಟವೆನ್ನುವುದನ್ನು ಗಮನಿಸಿ ಪಿಂಚಣಿ ಸೌಲಭ್ಯಕ್ಕಾಗಿ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯಾಗಲಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಲಿ, ಆರೋಗ್ಯ ಇಲಾಖೆಯವರಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಯಾರು ಪಾಲ್ಗೊಳ್ಳದೆ ನಿರ್ಲಕ್ಷೆ ವಹಿಸಿರುವುದಕ್ಕೆ ಧಿಕ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

      ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬಸವರಮಾನಂದಸ್ವಾಮಿ ಮಾತನಾಡಿ ಆಧುನಿಕ ಯುಗದಲ್ಲಿ ಸೇವಿಸುವ ಪ್ರಸಾದದಿಂದ ಮನುಷ್ಯನಿಗೆ ನಾನಾ ರೀತಿಯ ಕಾಯಿಲೆಗಳು ದಾಳಿ ಮಾಡುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದರಿಂದ ಒಂದಲ್ಲ ಒಂದು ರೀತಿಯ ಕಾಯಿಲೆಗೆ ಮಾನವ ತುತ್ತಾಗುತ್ತಿದ್ದಾನೆ. ಕಾಯಿಲೆ ವಾಸಿ ಮಾಡುವ ಆಯಾಮ ಅಡುಗೆ ಮನೆಯಲ್ಲಿಯೇ ಇದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಸುಲಭವಾಗಿ ಸಿಗುವ ನುಗ್ಗೆಸೊಪ್ಪು, ನವಣೆ, ಆರ್ಕ ಇವುಗಳನ್ನು ಯಾರು ಬಳುಸುವುದಿಲ್ಲ. ಕಾಯಿಲೆಗೆ ಜಾತಿ, ಮತ, ಧರ್ಮ ಯಾವುದೂ ಇಲ್ಲ. ಅದಕ್ಕಾಗಿ ಪ್ರತಿಯೊಬ್ಬರು ಇತಮಿತವಾಗಿ ಆಹಾರ ಸೇವಿಸಿ ರೋಗ ಬಾರದಂತೆ ಎಚ್ಚರ ವಹಿಸಿ ಎಂದು ಹೇಳಿದರು.

      ಬಸವಣ್ಣ ಸೇರಿದಂತೆ ಅನೇಕ ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವ ಕೊಟ್ಟವರು. ಪ್ರಸಾದದ ಪ್ರತಿಯೊಂದು ಕಣದಲ್ಲೂ ರೋಗ ನಿರೋಧಕ ಶಕ್ತಿಯಿದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ ಚೆನ್ನಾಗಿ ನೀರು ಕುಡಿಯಿರಿ ಎಂದು ತಿಳಿಸಿದರು.ವಾಸವಿ ಲ್ಯಾಬ್‍ನ ಡಾ.ಶ್ರೀನಿವಾಸಶೆಟ್ಟಿ ಮಾತನಾಡುತ್ತ ಸಕ್ಕರೆ ಕಾಯಿಲೆ ಇರುವವರು ಕಡ್ಡಾಯವಾಗಿ ಇನ್ಸುಲಿನ್ ಇಂಜೆಕ್ಷನ್ ಮಾಡಿಸಿಕೊಳ್ಳಲೇಬೇಕು. ಮಾತ್ರೆಗಿಂತ ಇನ್ಸುಲಿನ್ ಮುಖ್ಯ. ಎಲ್ಲಾ ಜೀವಕೋಶಗಳಿಗೂ ಇನ್ಸುಲಿನ್ ಶಕ್ತಿ ತುಂಬುತ್ತದೆ. ಅತಿಯಾದ ಮಾತ್ರೆ ಸೇವನೆಯಿಂದಲೂ ಕಿಡ್ನಿ ವೈಫಲ್ಯವಾಗಿ ಜೀವನವಿಡಿ ಸಮಸ್ಯೆಯಿಂದ ಬಳಲಬೇಕಾಗುತ್ತದೆ ಎಂದು ಎಚ್ಚರಿಸಿದರು.

       ಡಯಾಲಿಸಿಸ್ ರೋಗಿಗಳಿಗೆ ತಿಂಗಳಿಗೆ ಒಂದು ಯೂನಿಟ್ ರಕ್ತ ಬೇಕು. ಅದಕ್ಕಾಗಿ ರಕ್ತದಾನಿಗಳು ಮುಂದೆ ಬರಬೇಕು ಎಂದು ವಿನಂತಿಸಿದ ಡಾ.ಶ್ರೀನಿವಾಸಶೆಟ್ಟಿ ಪ್ರತಿಯೊಬ್ಬರು ಹಿಮೋಗ್ಲೋಬಿನ್ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಮೂತ್ರದಲ್ಲಿನ ಪ್ರೋಟೀನ್ ಟೆಸ್ಟ್ ಮಾಡಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದರು.ಡಯಾಲಿಸಿಸ್ ಖಾಯಿಲೆಗೆ ತುತ್ತಾಗಿರುವ ಬಾಲಕ ತರುಣ್, ಬುರುಜನಹಟ್ಟಿಯ ಚಿನ್ನಪ್ಪ ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap