ಚಳ್ಳಕೆರೆ
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ಸ್ಥಾಪನೆಗೆ ಸಹಾಯ ಧನ ಹಾಗೂ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ಹನಿ ನೀರಾವರಿ ಯೋಜನೆ ಮತ್ತು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಹಣ್ಣುಗಳ ಬೆಳೆಯನ್ನು ಬೆಳೆಯಲು ಆರ್ಥಿಕ ನೆರವು ನೀಡಲಾಗುವುದು ಎಂದು ಹಿರಿಯ ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ ತಿಳಿಸಿದ್ಧಾರೆ.
ಈ ಬಗ್ಗೆ ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಮಂಗಳವಾರ ಗ್ರಾಮದ ಜನರಿಗೆ ತೋಟಗಾರಿಗೆ ಬೆಳೆಗಳಿಗೆ ನೀಡುವ ಸಬ್ಸಿಡಿ ಸೇರಿದಂತೆ ಹಲವಾರು ಸೌಲಭ್ಯಗಳ ಬಗ್ಗೆ ಮಾಹಿತಿಗಳ ಕರ ಪತ್ರವನ್ನು ಗ್ರಾಮದ ಜನರಿಗೆ ವಿತರಿಸಿ ಮಾತನಾಡಿದರು. 2018-19ನೇ ಸಾಲಿನ ಎಸ್ಸಿ, ಎಸ್ಟಿ, ಅತಿ ಸಣ್ಣ, ಮಹಿಳೆ ಮತ್ತು ಅಂಗಕವಿಲ ರೈತರಿಗೆ ಈ ಯೋಜನೆಯಡಿ ಸೌಲಭ್ಯವನ್ನು ನೀಡಲಾಗುವುದು. ವಿಶೇಷವಾಗಿ ತೋಟಗಾರಿಕಾ ಬೆಳೆಗಳಾದ ದಾಳಿಂಬೆ, ಬಾಳೆ, ಹೈಬ್ರಿಡ್ ಮತ್ತು ಹೂ ಬೆಳೆಯಲು ಪ್ರದೇಶ ವಿಸ್ತರಣೆ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುವುದು.
ಈ ಯೋಜನೆಯಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವವರು ತಮ್ಮ ಜಮೀನ ದಾಖಲಾತಿ, ಆಧಾರ ಕಾರ್ಡ್, ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ ಹಾಗೂ ಪಹಣಿಯನ್ನು ಮೇ-31ರ ಒಳಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ. ಅದ್ದರಿಂದ ತೋಟಗಾರಿಕೆ ಬೆಳೆಗಳ ಆಶ್ರಯ ಪಡೆದ ಎಲ್ಲಾ ರೈತರು ತಮ್ಮ ಎಲ್ಲಾ ವಿವರಗಳ ಅರ್ಜಿಯನ್ನು ಮೇ-31ರೊಳಗೆ ತಪ್ಪದೆ ಕಚೇರಿಗೆ ಕಳುಹಿಸಿಕೊಡುವಂತೆ ಅವರು ಮನವಿ ಮಾಡಿದ್ಧಾರೆ. ಇದೇ ಮೊದಲ ಬಾರಿಗೆ ರೈತರ ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ಸ್ಥಾಪನೆಗೆ ಹಣ ನೀಡಲು ಇಲಾಖೆ ಮುಂದಾಗಿದ್ದು, ರೈತರು ಈ ಸೌಲಭ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ ಮನವಿ ಮಾಡಿದ್ಧಾರೆ.
ಕಳೆದ ಕೆಲವು ವರ್ಷಗಳ ಮಳೆ ವೈಪಲ್ಯದ ಹಿನ್ನೆಲೆಯಲ್ಲಿ ಈ ಭಾಗದ ಪ್ರಧಾನ ಬೆಳೆಯಾದ ಶೇಂಗಾ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯದೇ ರೈತರು ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದು, ತೋಟಗಾರಿಕೆ ಬೆಳೆಗಳಲ್ಲಿ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಲು ಅವಕಾಶವಿದ್ದು, ತಾಲ್ಲೂಕಿನ ರೈತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ರೈತರು ತಮ್ಮ ವ್ಯಾಪ್ತಿಯಲ್ಲಿ ಲಭ್ಯವಿರುವ ಕಡಿಮೆ ಪ್ರಮಾಣದ ನೀರಿನಲ್ಲಿ ಉತ್ತಮ ಲಾಭದ ಬೆಳೆಯನ್ನು ಬೆಳೆಯಲು ಅವಕಾಶವಿದ್ದು, ಕಚೇರಿಯಲ್ಲಿ ಮತ್ತಷ್ಟು ವಿವರಗಳನ್ನು ಪಡೆಯುವಂತೆ ಅವರು ತಿಳಿಸಿದ್ಧಾರೆ.
ಸಣ್ಣ, ಅತಿ ಸಣ್ಣ ರೈತರು ಕೇವಲ ಶೇಂಗಾ ಬೆಳೆಯನ್ನೇ ನಂಬಿ ಕೂರುವ ಬದಲು ವರ್ಷವೀಡಿ ಆದಾಯವನ್ನು ತಂದುಕೊಡುವ ತೋಟಗಾರಿಕೆ ಬೆಳೆಯನ್ನು ಬೆಳೆಯಲು ರೈತರು ಹೆಚ್ಚು ಆಸಕ್ತಿ ತೋರುವಂತೆ ತಿಳಿಸಿದ್ದು, ತೋಟಗಾರಿಕೆ ಇಲಾಖೆಯಲ್ಲೂ ಸಹ ರೈತರ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವಂತಹ ಹಲವಾರು ಸೌಲಭ್ಯ, ಯೋಜನೆಗಳಿವೆ ಎಂದಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
