ತುಮಕೂರು
ಯಾವುದೇ ರೋಗದಿಂದ ಮನುಷ್ಯ ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ತಿಳುವಳಿಕೆ ಹೊಂದಬೇಕು. ವಿಜ್ಞಾನಿಗಳು ತದ್ರೂಪಿ ಮನುಷ್ಯನನ್ನು ಸೃಷ್ಠಿ ಮಾಡುವ ಚೈತನ್ಯ ಹೊಂದಿದ್ದರೂ ಕೊರೊನಾ ವೈರಸ್ ನಿಯಂತ್ರಣಕ್ಕೆ ಔಷಧಿ ಕಂಡು ಹಿಡಿಯು ಸಾಧ್ಯವಾಗಿಲ್ಲ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಸಭಾಪತಿ ಎಸ್.ನಾಗಣ್ಣನವರು ಹೇಳಿದರು.
ನಗರದ ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕೇಂದ್ರ ಕಚೇರಿಯಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಎನ್.ಟಿ.ಇ.ಪಿ, ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚೆಗೆ 92 ವರ್ಷದ ವೃದ್ಧರು ಕೊರೊನಾ ಪಾಸಿಟೀವ್ ಕಾನಿಸಿಕೊಂಡು ನಂತರ ನೆಗೆಟೀವ್ ಬಂದು ಚೇತರಿಸಿಕೊಂಡ ಮಾಹಿತಿ ಇದೆ. ನಮ್ಮ ವಂಶವಾಹಿನಿಗಳು ಯಾವ ರೋಗಗಳನ್ನು ಯಾವ ರೀತಿ ತಡೆಯುತ್ತವೆ ಎಂದು ಅಂದಾಜು ಮಾಡಲಾಗುವುದಿಲ್ಲ ಎಂದ ಅವರು, ಪ್ರಕೃತಿ ನಮ್ಮನ್ನು ಹೇಗೆ ಯಾಮಾರಿಸುತ್ತದೆ ಅಥವಾ ಪ್ರಕೃತಿಯ ಮಹತ್ವ ತಿಳಿಯದೆ ನಾವು ಏನೆಲ್ಲಾ ಮಾಡಿದರೆ ಅದು ತಿರುಗು ಬಾಣವಾಗುತ್ತದೆ. ಹೀಗಾಗಿ, ಮುಂದೆ ವೈರಾಣು ರೋಗಗಳು ಯಾವ ರೀತಿ ಹರಡುತ್ತವೆಂದು ಹೇಳಲಾಗುವುದಿಲ್ಲ ಎಂದು ಹೇಳಿದರು.
ರೋಗರುಜಿನ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ರಕ್ತದ ಅಗತ್ಯ ಹೆಚ್ಚಾಗಿರುತ್ತದೆ. ರಕ್ತ ಮತ್ತು ನೀರನ್ನು ಕೃತಕವಾಗಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ರಕ್ತವನ್ನು ದಾನಿಗಳಿಂದಲೇ ಪಡೆಯಬೇಕು. ರಕ್ತದಾನ ಶ್ರೇಷ್ಠವಾದ ದಾನ. ಅರ್ಹ ದಾನಿಗಳು ರಕ್ತದಾನ ಮಾಡಿ ಸಹಕರಿಸುವಂತೆ ಮನವಿ ಮಾಡಿದರು.
ಮಹಾಮಾರಿ ಕೊರೊನಾ ಹರಡುತ್ತಿರುವ ಈ ಸಂದರ್ಭದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಯಾರನ್ನು ಮುಟ್ಟಿದರೆ ಏನಾಗುವುದೋ ಎಂಬ ಆತಂಕ ಪರಿಸ್ಥಿತಿ ಇದೆ ಹೀಗಾಗಿ ಪ್ರತಿಯೊಬ್ಬರ ಜೀವನವೂ ಅಯೋಮಯವಾಗಿದೆ.
1896ರಲ್ಲಿ ಪ್ಲೇಗ್ ಹರಡಿ ಇದೇ ರೀತಿಯ ಆತಂಕ ಸ್ಥಿತಿ ಉಂಟು ಮಾಡಿತ್ತು. ಆಗ ಕೊಲ್ಕತ್ತಾದಲ್ಲಿ ಸ್ವಾಮಿ ವಿವೇಕಾನಂದರು ಪ್ಲೇಗ್ ರೋಗಿಗಳಿಗೆ ಶುಶ್ರೂಷೆ ಮಾಡಿದ್ದರು. ಸ್ವಚ್ಚತೆ ಕಾಪಾಡಿಕೊಳ್ಳುವುದರಿಂದ ರೋಗಗಳನ್ನು ತಡೆಯಬಹುದು ಎಂದು ಅವರು ಆಗಲೇ ಹೇಳಿದ್ದರು. ಆ ಮಾತು ಈಗಲೂ ಪ್ರಸ್ತುತವಾಗಿದೆ. ಕೊರೊನಾ ರೋಗ ಹರಡದಂತೆ ತಡೆಯಲು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸ್ಯಾನಿಟೈಸರ್ನಲ್ಲಿ ಆಗಾಗ ಕೈತೊಳೆದುಕೊಳ್ಳಬೇಕು, ಮುಖ್ಯವಾಗಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದು ಎಸ್.ನಾಗಣ್ಣ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಟಿ.ನಾಗೇಂದ್ರಪ್ಪ ಮಾತನಾಡಿ, ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾದುದು. ಹಾಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು. ರಕ್ತದಾನ ಮಾಡುವುದರಿಂದ ಹಲವಾರು ಮಂದಿಯ ಜೀವ ಉಳಿಸಬಹುದು. ಅಪಘಾತವಾದ ಸಂದರ್ಭದಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯ ಜೀವ ಉಳಿಯಲು ರಕ್ತದ ಅವಶ್ಯತೆ ಎದುರಾಗುತ್ತದೆ. ಆ ಸಂದರ್ಭದಲ್ಲಿ ಸಾರ್ವಜನಿಕರಾಗಲೀ ಅಥವಾ ಅವರ ಸಂಬಂಧಿಕರಾಗಲಿ ಮುಂದೆ ಬಂದು ರಕ್ತದಾನ ಮಾಡಿದರೆ ಒಂದು ಜೀವ ಉಳಿಸಬಹುದು. ಇದನ್ನು ಯಾರೂ ಮರೆಯಬಾರದು ಎಂದರು.
ಮನುಷ್ಯನಿಗೆ ಆರೋಗ್ಯ, ಜೀವ ಮುಖ್ಯ. ಕೇವಲ ದುಡ್ಡಿನಿಂದ ಆರೋಗ್ಯ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಹ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು. ರಕ್ತದಾನ ಶಿಬಿರಗಳು ವ್ಯಕ್ತಿಗಳ ಪ್ರಾಣ ಉಳಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಶಿಬಿರಗಳಲ್ಲಿ ಸಂಗ್ರಹಿಸಿದ ರಕ್ತ ಸದುಪಯೋಗವಾಗಬೇಕು. ಯಾವುದೇ ಕಾರಣಕ್ಕೂ ದುರುಪಯೋಗಕ್ಕೆ ಅವಕಾಶ ನೀಡಬಾರದು ಎಂದರು. ರಕ್ತದಾನ ಶಿಬಿರ ಆಯೋಜಿಸುವಲ್ಲಿ ಆರೋಗ್ಯ ಇಲಾಖೆ, ರೆಡ್ಕ್ರಾಸ್ ಸಂಸ್ಥೆಯ ಜತೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಕಾರ್ಯ ಸಹ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ತುಮಕೂರು ರೆಡ್ಕ್ರಾಸ್ ಸಂಸ್ಥೆಯು ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸ ಡಾ.ಟಿ.ಎ.ವೀರಭದ್ರಯ್ಯ ಮಾತನಾಡಿ, ರಕ್ತದಾನಿಗಳ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು, 2004 ರಿಂದ ರಕ್ತದಾನಿಗಳನ್ನು ಗುರುತಿಸಿ ರಕ್ತದಾನ ಮಾಡಲು ಪೆÇ್ರೀತ್ಸಾಹಿಸಲಾಗುತ್ತಿದೆ ಎಂದರು. ರಕ್ತದಾನ ಮಾಡಲು ಆರೋಗ್ಯವಂತ ಜನರು ಹೆಚ್ಚು ಹೆಚ್ಚು ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು. ಜಿಲ್ಲಾಸ್ಪ್ರತ್ರೆಯಲ್ಲಿ ಈಗ ರಕ್ತದ ವಿವಿಧ ಭಾಗಗಳನ್ನು ಪ್ರತ್ಯೇಕಿಸುವ ಘಟಕ ಸ್ಥಾಪಿಸಲಾಗಿದೆ. ಈ ಹಿಂದೆ ಸೌಲಭ್ಯ ಇರಲಿಲ್ಲ ಎಂದ ಅವರು, ಕೊರೊನಾ ನಿಯಂತ್ರಣದಲ್ಲಿ ಜಿಲ್ಲಾಡಳಿತ ಅವಿರತವಾಗಿ ಶ್ರಮಿಸುತ್ತಿದೆ ಎಂದರು.
ಪ್ರಸ್ತುತ ಸಂದರ್ಭದಲ್ಲಿ ಕೊರೊನಾಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಬೇರೆ ರೋಗಿಗಳ ಬಗ್ಗೆ ನಿರ್ಲಕ್ಷ್ಯತೆ ಜಾಸ್ತಿಯಾಗುತ್ತಿದೆ ಎಂದು ವಿಷಾದಿಸಿದ ಅವರು, ಶೇಕಡ 97ರಷ್ಟು ಜನ ಸೋಂಕಿನಿಂದ ಚೇತರಿಸಿಕೊಂಡು ಮನೆಗೆ ಹೋಗುತ್ತಿದ್ದಾರೆ. ಆದರೆ ಕೇವಲ ಶೇ. 3 ರಷ್ಟು ಜನ ಮಾತ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.
ರಕ್ತದಾನ ಮಾಡಿ ಮಾತನಾಡಿದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಜಿ.ಕೆ. ಸನತ್ ಕುಮಾರ್, ರಕ್ತವನ್ನು ಆರೋಗ್ಯವಂತ ಮನುಷ್ಯರು ದಾನ ಮಾಡಬೇಕು. ಸುರಕ್ಷಿತ ರಕ್ತ ಜೀವ ರಕ್ಷಕ ಎಂಬುದನ್ನು ಯಾರೂ ಮರೆಯಬಾರದು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ಡಾ. ವೀಣಾ, ಡಾ. ಕೇಶವರಾಜ್, ಡಾ. ಮೋಹನದಾಸ್, ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಗದೀಶ್, ರೆಡ್ಕ್ರಾಸ್ ಸಂಸ್ಥೆಯ ಶಿವಕುಮಾರ್, ವೇಣುಗೋಪಾಲ್, ಸುಭಾಷಿಣಿ, ಉಮೇಶ್, ಸುರೇಂದ್ರಷಾ, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಲವು ಬಾರಿ ರಕ್ತದಾನ ಮಾಡಿದ ಲೋಕೇಶ್ ಜಿ.ಕೆ, ಕೆ. ಶ್ರೀನಿವಾಸ್, ಟಿ.ಎಸ್. ಭರತ್ಕುಮಾರ್ ಅಣೇಕಾರ್, ವಿಕ್ರಂಶೆಟ್ಟಿ, ಸಿ.ಎನ್. ಶಶಿಧರ್, ವೇಣುಗೋಪಾಲ್ ಹಾಗೂ ಆರೋಗ್ಯ ಸಹಾಯಕಿ ಪಂಕಜಾಕ್ಷಿ ಅವರನ್ನು ಗೌರವಿಸಲಾಯಿತು. ಜತೆಗೆ ಈ ಶಿಬಿರದಲ್ಲಿ 30ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು. ವಾಸವಿ ದೇವಸ್ಥಾನ ಚಾರಿಟಬಲ್ ಟ್ರಸ್ಟ್ ವತಿಯಿಂದ 8 ಸಾವಿರ ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








