ದತ್ತು ನೀತಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ

ತಿಪಟೂರು:

        ಆರ್ಯಬಾಲಿಕಾ ಸರ್ಕಾರಿ ಪ್ರಾಥಮಿಕ ಪಾಠಶಾಲೆ, ತಿಪಟೂರು ಇಲ್ಲಿ ಸ್ತ್ರೀಶಕ್ತಿ ಒಕ್ಕೂಟ ಹಾಗೂ ಗೊಂಚಲು ಗುಂಪಿನ ಮಹಿಳೆಯರಿಗೆ ಪೊಕ್ಸೊ ಕಾಯ್ದೆ, ಬಾಲ್ಯವಿವಾಹ ಹಾಗೂ ಹೊಸ ದತ್ತು ನೀತಿ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

          ಶ್ರೀಮತಿ. ವಾಸಂತಿ ಉಪ್ಪಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತುಮಕೂರು ಇವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತಂದೆ ತಾಯಿ ಇಲ್ಲದ ಮಕ್ಕಳಿಗೆ ಉತ್ತಮ ತಂದೆ-ತಾಯಿಯನ್ನು ಒದಗಿಸುವ ಕಾರ್ಯಕ್ರಮವೇ ದತ್ತು ಕಾರ್ಯಕ್ರಮವೆಂದು, ಮಕ್ಕಳಿಲ್ಲದ ತಂದೆ ತಾಯಿಗಳು ಮೊದಲು ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದು ಮಕ್ಕಳಾಗದಿದ್ದಲ್ಲಿ ಅಂತಹ ಪೋಷಕರು ಅಂಖಂ ವೆಬ್‍ಸೈಟ್‍ನಲ್ಲಿ ನೋಂದಾಯಿಸಿಕೊಳ್ಳುವಂತೆ, ನೋಂದಾಯಿಸಿಕೊಳ್ಳಲು ಅಗತ್ಯ ದಾಖಲೆಗಳ ಬಗ್ಗೆ ಹಾಗೂ ಕಾನೂನು ಬಾಹಿರವಾಗಿ ಬೇರೆಯವರ ಮಕ್ಕಳನ್ನು ತಂದು ಸಾಕಬಾರದೆಂಬ ಬಗ್ಗೆ ಮಾಹಿತಿಯನ್ನು ನೀಡಿದರು. ಮಕ್ಕಳ ಹಕ್ಕುಗಳು ಹಾಗೂ ರಕ್ಷಣೆ ಕುರಿತು ಪೋಷಕರ ಜವಾಬ್ದಾರಿಗಳನ್ನು ತಿಳಿಸಿದರು.

          ಶ್ರೀಮತಿ. ಕವಿತ, ಕಾನೂನು ಪರಿವೀಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತುಮಕೂರು ಇವರು ತಮ್ಮ ಉಪನ್ಯಾಸ ಕಾರ್ಯಕ್ರಮದಲ್ಲಿ ಪೊಕ್ಸೊ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿ ಪೊಕ್ಸೊ ಕಾಯ್ದೆಯ ಅನುಷ್ಟಾನ ಹಾಗೂ ಕಾಯ್ದೆಯಲ್ಲಿರುವ ಶಿಕ್ಷೆಗಳ ಕುರಿತು ಮಾಹಿತಿ ನೀಡಿದರು. ಪೊಕ್ಸೊ ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತ ಮಕ್ಕಳು ಸಂಕಷ್ಟದಲ್ಲಿದ್ದಾಗ ಕೂಡಲೇ ತಮ್ಮ ಕಛೇರಿಯನ್ನು ಅಥವಾ ಮಕ್ಕಳ ಸಹಾಯವಾಣಿ 1098ಗೆ ಕರೆಮಾಡಬೇಕೆಂದು ತಿಳಿಸಿದರು.

          ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಮನಸ್ಸು ಹಾಗೂ ಭವಿಷ್ಯ ಮುರುಟಿಹೋಗುವ ಸಾಧ್ಯತೆಯಿದ್ದು, ಮಕ್ಕಳು ಅದಕ್ಕೆ ಅವಕಾಶ ನೀಡದೇ ತಮ್ಮ ಮೇಲೆ ಯಾರಾದರೂ ದೌರ್ಜನ್ಯ ಮಾಡಲು ಮುಂದಾದಲ್ಲಿ ಮೊದಲ ಪ್ರಯತ್ನದಲ್ಲಿಯೇ ಅವರಿಗೆ ತಕ್ಕ ಪಾಠ ಕಲಿಸುವ ಧೈರ್ಯ ತೋರಬೇಕೆಂದು ಹೇಳಿದರು. ಪೋಷಕರು ಮಕ್ಕಳನ್ನು ಯಾವ ರೀತಿ ಬೆಳೆಸಬೇಕು, ತಂದೆ ತಾಯಿಗಳ ಜವಾಬ್ದಾರಿಗಳೇನು? ಪೊಕ್ಸೊ ಕಾಯ್ದೆಯಡಿಯಲ್ಲಿನ ಪ್ರಯೋಜನಗಳ ಬಗ್ಗೆ ಹಾಗೂ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.

           ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ. ಓಂಕಾರಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇವರು ಮಕ್ಕಳು ಒಳ್ಳೆಯ ವಾತಾವರಣದಲ್ಲಿ ಬೆಳೆಯಬೇಕು. ಯಾವುದೇ ಮಗು ಸಂಕಷ್ಟದಲ್ಲಿ ಸಿಲುಕಿದರೆ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡುವಂತೆ ಹಾಗೂ ಎಲ್ಲರೂ ಮಕ್ಕಳ ಸಹಾಯವಾಣಿಯ ನಂಬರ್‍ನ್ನು ತಿಳಿದಿರಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ. ವಾಸಂತಿ ಉಪ್ಪಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತುಮಕೂರು. ಶ್ರೀ. ಓಂಕಾರಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶ್ರೀಮತಿ ಕವಿತ, ಕಾನೂನು ಪರಿವೀಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತುಮಕೂರು ಹಾಗೂ ಅಂಗನವಾಡಿ ಮೇಲ್ವೀಚಾರಕಿಯರು, ಒಕ್ಕೂಟ ಹಾಗೂ ಗೊಂಚಲು ಗುಂಪಿನ 65 ಮಹಿಳೆಯರು ಭಾಗವಹಿಸಿದ್ದರು.

           ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ. ಪ್ರೇಮ, ಮೇಲ್ವಿಚಾರಕಿ, ಇವರು ಮಾಡಿದರು. ಕಾರ್ಯಕ್ರಮದಲ್ಲಿದ್ದ ಎಲ್ಲರನ್ನೂ ಸ್ವಾಗತಿಸಿದರು ಕಾರ್ಯಕ್ರಮದಲ್ಲಿದ್ದ ಎಲ್ಲರನ್ನೂ ಇವರು ವಂದನಾರ್ಪಣೆ ಮಾಡಿ ಮಧ್ಯಾಹ್ನದ ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap