ಶಿವಮೊಗ್ಗ
ಯಡಿಯೂರಪ್ಪನವರ ವಿರುದ್ಧ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆಡಿರುವ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ. ಪಕ್ಷ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಯತ್ನಾಳ್ ವಿರುದ್ಧ ಪಕ್ಷ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೊರೊನಾ ವೈರಸ್ ನಿಯಂತ್ರಣಕ್ಕೆ ಎಷ್ಟೆಲ್ಲಾ ಹೋರಾಡುತ್ತಿದ್ದಾರೆ. ಅವರ ವಿರುದ್ಧ ಹೇಳಿಕೆ ನೀಡುವ ಮುನ್ನ ಒಮ್ಮೆ ಯೋಚಿಸಬೇಕು. ಇಂಥ ಸಂದರ್ಭದಲ್ಲಿ ವಿವಾದಿತ ಹೇಳಿಕೆ ನೀಡುವ ಮೂಲಕ ನೆಗೆಟಿವ್ ಪ್ರಚಾರ ಪಡೆಯುತ್ತಿದ್ದಾರೆ. ಇವರ ಹದ್ದುಮೀರಿದ ಹೇಳಿಕೆಗಳನ್ನು ಯಾರೂ ಒಪ್ಪಲ್ಲ ಎಂದು ಯತ್ನಾಳ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಪಕ್ಷ ಯತ್ನಾಳ್ ಅವರನ್ನು ಕ್ಷಮಿಸಬಾರದು. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಈ ಬಗ್ಗೆ ತುರ್ತು ಗಮನ ಹರಿಸಿ ಇಂಥವರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕು. ಒಬ್ಬ ಶಾಸಕನಾಗಿ ಯಾವುದೇ ಹೇಳಿಕೆ ನೀಡುವ ಸ್ವಾತಂತ್ರ್ಯ ಇದೆ. ಆದರೆ, ಅದಕ್ಕೂ ಇತಿಮಿತಿ ಇದೆ. ನಾನೇ ಸೀನಿಯರ್ ಎಂದು ಹೇಳಿಕೊಳ್ಳುವ ಭ್ರಮೆಯಿಂದ ಯತ್ನಾಳ್ ಹೊರಬರಬೇಕು. ನಿಮಗಿಂತ ಸೀನಿಯರ್ ಗಳು ತುಂಬಾ ಜನ ಇದ್ದಾರೆ. ಯಡಿಯೂರಪ್ಪ ಸರ್ವಮಾನ್ಯ ಸಮೂಹ ನಾಯಕರು. ಯಡಿಯೂರಪ್ಪ ಅವರ ಹೆಸರಿಂದ ಶಾಸಕರಾದವರು ತುಂಬಾ ಜನರಿದ್ದಾರೆ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ಮುನ್ನ ಯೋಚಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
