ದಾವಣಗೆರೆ :
ಆಯುಷ್ ಚಿಕಿತ್ಸಾ ಪದ್ಧತಿಯನ್ನು ಮನೆ, ಮನೆಗೆ ಪರಿಚಯಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಬಹು ಮುಖ್ಯವಾಗಿದೆ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಅಭಿಪ್ರಾಯಪಟ್ಟರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿಯಲ್ಲಿ (ಎಸ್‍ಸಿಪಿ/ಟಿಎಸ್‍ಪಿ) ಪ.ಜಾತಿ ಮತ್ತು ಪಂಗಡದ ಆಶಾ ಕಾರ್ಯಕರ್ತೆಯರಿಗಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಆಯುಷ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುರಾತನ ಕಾಲದಲ್ಲಿ ನಮ್ಮಲ್ಲಿ ಹೆಚ್ಚು ಬಳಕೆಯಲ್ಲಿದ್ದ ಆರ್ಯುವೇದ (ಆಯುಷ್) ಚಿಕಿತ್ಸಾ ಪದ್ಧತಿಯ ಬಗ್ಗೆ ಈ ಕಾರ್ಯಾಗಾರದಲ್ಲಿ ಉಪಯುಕ್ತ ಮಾಹಿತಿ ಪಡೆದು, ನಿಮ್ಮ ಸುತ್ತಮುತ್ತಲಿನವರಲ್ಲಿ ಜಾಗೃತಿ ಮೂಡಿಸುವ ಮೂಲಕ ಮನೆ, ಮನೆಗೂ ತಲುಪಿಸಿದಾಗ ಮಾತ್ರ ನೀವು ಆಯುಷ್ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಕ್ಕೂ ಸಾರ್ಥಕತೆಯಾಗಲಿದೆ ಎಂದರು.
ಪಾಶ್ಚಿಮಾತ್ಯ ಸಂಸ್ಕøತಿಯಿಂದ ಬಂದಿರುವ ಅಲೋಪತಿ ಚಿಕಿತ್ಸಾ ಪದ್ಧತಿಯು ದೇಹಕ್ಕೆ ಸಕಾರಾತ್ಮಕ ಪರಿಣಾಮಗಳಿಗಿಂತ, ನಕಾರಾತ್ಮಕ ಪರಿಣಾಮಗಳೇ ಉಂಟು ಮಾಡಲಿದೆ. ಆದರೆ, ಯಾವುದೇ ಅಡ್ಡ ಪರಿಣಾಮ ಬೀರದಂತಹ ಆಯುರ್ವೇದ ಚಿಕಿತ್ಸಾ ಪದ್ಧತಿಯ ಬಗ್ಗೆ ಗ್ರಾಮೀಣ ಪ್ರದೇಶದ ಬಹುತೇಕರಿಗೆ ಅರಿವು ಇಲ್ಲವಾಗಿದೆ.
ಆದ್ದರಿಂದ ಆಯುಷ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿಯನ್ನು ಸರಿಯಾಗಿ ಅರ್ಥೈಸಿಕೊಂಡು, ಅದನ್ನು ನಿಮ್ಮ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಪ್ರಚಾರಪಡಿಸಬೇಕೆಂದು ಕಿವಿಮಾತು ಹೇಳಿದರು.
ಲೋಕಿಕೆರೆ ಕ್ಷೇತ್ರದ ಜಿ.ಪಂ ಸದಸ್ಯ ಕೆ.ಹೆಚ್.ಓಬಳೇಶಪ್ಪ ಮಾತನಾಡಿ, ಸರ್ಕಾರ ಆಶಾ ಕಾರ್ಯಕರ್ತೆಯರ ಅಭಿವೃದ್ಧಿಗೆ ಈ ಬಾರಿ ಬಜೆಟ್‍ನಲ್ಲಿ ಸಹಾಯಧನವನ್ನು ಹೆಚ್ಚಿಸಿದೆ. ಮಹಿಳೆಯರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯವಾಗಿದೆ. ಆದ್ದರಿಂದ ನೀವುಗಳು ಈ ಕಾರ್ಯಾಗಾರದ ಮುಖೇನ ನಿಮ್ಮ ಸೀಮಿತ ಪ್ರದೇಶದ ಜನರಿಗೆ ಈ ಆರ್ಯುವೇದ ಔಷಧಿಗಳು ಮತ್ತು ಚಿಕಿತ್ಸೆ ಕುರಿತು ಅರಿವು ಮೂಡಿಸಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಾಡಾ ಕ್ಷೇತ್ರದ ಜಿ.ಪಂ ಸದಸ್ಯೆ ಶೈಲಜಾ ಬಸವರಾಜ್, ಬ್ರಿಟಿಷರಿಂದ ನಮಗೆ ಅಲೋಪತಿ ಚಿಕಿತ್ಸೆಯ ಪರಿಚವಾಗಿದೆ. ಆದರೆ ಆಯುಷ್ ಚಿಕಿತ್ಸೆಯು ನಮ್ಮ ಭಾರತೀಯ ಮೂಲ ವೈದ್ಯಕೀಯ ಪದ್ಧತಿಯಾಗಿದೆ. ಈ ಕುರಿತು ಇಲ್ಲಿನ ಕಾರ್ಯಾಗಾರದಲ್ಲಿ ಮಾಹಿತಿ ಪಡೆದು, ಹಳ್ಳಿಗರಿಗೆ ಈ ಬಗ್ಗೆ ಮಾಹಿತಿ ನೀಡಿ ಅವರ ಉತ್ತಮ ಆರೋಗ್ಯಕ್ಕೆ ನೀವುಗಳು ಆಶಾದಾಯಕರಾಗಬೇಕೆಂದು ಸಲಹೆ ನೀಡಿದರು.
ಪ್ರಸ್ತುತ ಚಿಕ್ಕ ಪುಟ್ಟ ಖಾಯಿಲೆಗಳಿಗೂ ಅಲೋಪತಿ ಚಿಕಿತ್ಸೆಯಲ್ಲಿ ಸ್ಕ್ಯಾನಿಂಗ್, ಅನಗತ್ಯ ವಿವಿಧ ಪರೀಕ್ಷೆಗಳನ್ನು ಮಾಡಿಸುವುದಲ್ಲದೇ, ಆಪರೇಷನ್ ಸಹ ಮಾಡುಲಾಗುತ್ತಿದೆ. ಇಂತಹ ಚಿಕ್ಕಪುಟ್ಟ ಖಾಯಿಲೆಗಳ ವಾಸಿಗೆ ಮನೆಮದ್ದು ಆಗಿರುವ ಆರ್ಯುವೇದ ಚಿಕಿತ್ಸೆ ಕುರಿತು ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಭ ಮಾತನಾಡಿ, ಆಯುಷ್ ಇಲಾಖೆಯ ಈ ಕಾರ್ಯ ಯಶಸ್ವಿಯಾಗಲು ಆಶಾ ಕಾರ್ಯಕರ್ತೆಯರ ಪಾತ್ರ ಅವಶ್ಯಕವಾಗಿದೆ. ಇಲ್ಲಿ ತರಬೇತಿ ಪಡೆದು ತಮ್ಮ ಕ್ಷೇತ್ರದಲ್ಲಿನ ಜನರನ್ನು ಜಾಗೃತರನ್ನಾಗಿ ಮಾಡಿದಾಗ ಮಾತ್ರ ಈ ತರಬೇತಿ ಸಾರ್ಥಕವಾಗಲಿದೆ. ಇಲ್ಲವಾದಲ್ಲಿ ತರಬೇತಿ ವ್ಯರ್ಥವಾದಂತೆ ಆಗುತ್ತದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು.ಸಿದ್ದೇಶಿ ಮಾತನಾಡಿ, ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಆಶಾ ಕಾರ್ಯಕರ್ತೆಯರು ಕೊಂಡಿ ಇದ್ದಂತೆ.
ಆರ್ಯುವೇದ ಚಿಕಿತ್ಸೆಯ ಕುರಿತು ಜನರಲ್ಲಿ ಸಮರ್ಪಕ ಮಾಹಿತಿ ನೀಡಿದರೆ ಅದನ್ನು ಜನರು ಒಪ್ಪಿಕೊಳ್ಳಲಿದ್ದಾರೆ. ಆಯುಷ್ ವೈದ್ಯಕೀಯ ಪದ್ದತಿಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೇಂದ್ರದಲ್ಲಿ ಆಯುಷ್ ಅಧಿಕಾರಿ ಶ್ರೀಪಾದ್‍ನಾಯ್ಕ್ ಇವರನ್ನು ನೇಮಿಸಿದೆ. ಎಲ್ಲಾ ರಾಜ್ಯಗಳು ಸಹ ಆಯುಷ್ ಇಲಾಖೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಹಾಯ ಮಾಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಿದ್ದೇಶ್ ಬಿಸ್ನೇಹಳ್ಳಿ, ಡಾ. ಶಂಕರಗೌಡ, ಡಾ. ಸುಚಿತ್ರ ಎಸ್.ಎಸ್, ಡಾ. ಗೀರಿಶ್, ಡಾ. ರವಿರಾಜ್, ಡಾ. ಸೈಯದ್ ಸಂಶುದ್ದಿನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯ್‍ಕುಮಾರ್, ಆರ್‍ಸಿಎಚ್‍ಓ ಡಾ. ಈ. ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
