ಆಯುಷ್ಮಾನ್ ಭಾರತ್ ಬಗ್ಗೆ ತಿಳಿವಳಿಕೆ ಅಗತ್ಯ..!!

ತುಮಕೂರು

ವಿಶೇಷ ವರದಿ: ರಾಕೇಶ್ ವಿ 

      ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಮತ್ತು ಆಯುಷ್ಮಾನ್‍ಭಾರತ ಯೋಜನೆಯನ್ನು ಪ್ರಧಾನಿ ಮೋದಿಯವರು 2018ರ ಸೆಪ್ಟಂಬರ್ ತಿಂಗಳಿನಲ್ಲಿ ಚಾಲನೆ ನೀಡಿದ್ದರು. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಆರೋಗ್ಯ ಕರ್ನಾಟಕ ಎಂಬ ಯೋಜನೆಯನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆರಂಭಿಸಿ, ಅದನ್ನು ಕೇಂದ್ರ ಸರ್ಕಾರದ ಯೋಜನೆಯೊಂದಿಗೆ ಸೇರ್ಪಡೆಗೊಳಿಸಿ ಆಯುಷ್ಮಾನ್‍ಭಾರತ – ಆರೋಗ್ಯ ಕರ್ನಾಟಕ ಎಂದು ಜಾರಿ ಮಾಡಲಾಯಿತು.

      ಕೇಂದ್ರ ಮತ್ತು ರಾಜ್ಯ ಸರ್ಕಾರವು ಜನರ ಆರೋಗ್ಯ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿ ಮಾಡಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಿದೆ. ಆದರೆ ಇಂದಿನ ಸಾಕಷ್ಟು ಮಂದಿಗೆ ಈ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಇನ್ನೂ ಕೆಲ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೇ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ತಾಲ್ಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಬ್ಬ ರೋಗಿಯು ನೋಂದಾಯಿಸಿಕೊಂಡು ಚಿಕಿತ್ಸೆ ಪಡೆಯುವಾಗ ಆತನಿಗೆ ಬೇಕಾದ ಆರೋಗ್ಯ ಸೌಲಭ್ಯ ಇಲ್ಲ ಎಂದಾದಾಗ ಆತನನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಬೇಕು.

      ಆದರೆ ಜನರಿಗೆ ಮಾಹಿತಿ ಕೊರತೆಯಿಂದಲೋ ಅಥವಾ ಸರ್ಕಾರಿ ವೈದ್ಯರ ಬೇಜವಬ್ದಾರಿಯಿಂದಲೋ ಆ ರೋಗಿಯನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಅಲ್ಲಿ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದು ಯೋಜನೆ ವ್ಯಾಪ್ತಿಯಲ್ಲಿ ಚಿಕಿತ್ಸೆ ಪಡೆಯಲು ಮನವಿ ಮಾಡಿದರೆ ಈ ಬಗ್ಗೆ ಜಿಲ್ಲಾಸ್ಪತ್ರೆ ಮೂಲಕ ರೆಫರಲ್ ಸರ್ಟಿಫಿಕೇಟ್ ತಂದರೆ ಉಚಿತವಾಗುತ್ತದೆ. ಇಲ್ಲವಾದರೆ ಹಣ ಪಾವತಿ ಮಾಡಬೇಕಾಗುತ್ತದೆ ಎಂದು ತಿಳಿದುಬರುತ್ತದೆ. ಅಂದರೆ ಇಲ್ಲಿ ಜನರಿಗೆ ಆಯುಷ್ಮಾನ್ ಭಾರತ್ ನಮ್ಮ ಆರೋಗ್ಯ ಕರ್ನಾಟಕ ಯೋಜನೆಯ ಬಗ್ಗೆ ತಿಳಿವಳಿಕೆ ಇಲ್ಲ ಎಂಬುದು ಗ್ರಾಸವಾಗುತ್ತದೆ.

ಏನಿದು ಆಯುಷ್ಮಾನ್ ಭಾರತ್

        ಆಯುಷ್ಮಾನ್ ಭಾರತ್ ಅಥವಾ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಯೋಜನೆಯಾಗಿದೆ. ಸಾಮಾನ್ಯ ಕಾಯಿಲೆಗಳಿಂದ ಹೃದಯಾಘಾತ, ಕ್ಯಾನ್ಸರ್ ಸೇರಿದಂತೆ ಸಾವಿರಾರು ಆರೋಗ್ಯ ಸಮಸ್ಯೆಗೆ ಯೋಜನೆಯಡಿ ಚಿಕಿತ್ಸೆ ಪಡೆಯಬಹುದು. ವಿಶ್ವದಲ್ಲೇ ಅತಿ ದೊಡ್ಡ ಸರಕಾರಿ ಪ್ರಾಯೋಜಿತ ಆರೋಗ್ಯ ಯೋಜನೆ ಎಂಬ ಕೀರ್ತಿಗೆ ಆಯುಷ್ಮಾನ್ ಭಾರತ್ ಪಾತ್ರವಾಗಿದೆ.

ಆರೋಗ್ಯ ಕರ್ನಾಟಕ

     ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ 10 ಕೋಟಿ ಕುಟುಂಬಗಳ ಸುಮಾರು 50 ಕೋಟಿ ಜನ ಇದರ ಪ್ರಯೋಜನ ಪಡೆಯಬಹುದು. ಇದರಲ್ಲಿ ಪ್ರತಿ ಬಡ ಕುಟುಂಬಕ್ಕೆ (ಬಿಪಿಎಲ್) ವಾರ್ಷಿಕ 5 ಲಕ್ಷ ರೂ. ಮೊತ್ತದ ವೈದ್ಯಕೀಯ ಚಿಕಿತ್ಸಾ ವೆಚ್ಚ ಉಚಿತವಾಗಿದೆ. ಬಡತನದ ರೇಖೆಗಿಂತ ಮೇಲೆ ಇರುವ ಎಪಿಎಲ್ ಕುಟುಂಬಕ್ಕೆ, ಚಿಕಿತ್ಸಾ ವೆಚ್ಚದ (ಪ್ಯಾಕೇಜ್ ದರ) ಶೇ.30ರಷ್ಟು ನೆರವು, ವಾರ್ಷಿಕ ಗರಿಷ್ಠ 1.5 ಲಕ್ಷ ರೂ. ತನಕ ಸಿಗಲಿದೆ. ರಾಜ್ಯದ 387 ಸರಕಾರಿ ಆಸ್ಪತ್ರೆ ಹಾಗೂ 390 ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯಕ್ಕೆ ಈ ಯೋಜನೆ ಚಾಲ್ತಿಯಲ್ಲಿದೆ. ಇದಕ್ಕೆ ಸೇರ್ಪಡೆಯಾಗುತ್ತಿರುವ ಆಸ್ಪತ್ರೆಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.

ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆಯುವುದು ಹೇಗೆ ?

     ರೋಗಿಗಳಿಗೆ ಮೊದಲ ಸಲ ನೋಂದಣಿಯ ಅಗತ್ಯ ಇದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ವೆಬ್ ಪೋರ್ಟಲ್‍ನಲ್ಲಿ ಡಿಜಿಟಲ್ ವ್ಯವಸ್ಥೆಯಲ್ಲಿ ನೋಂದಣಿ ದಾಖಲಾಗುತ್ತದೆ. ಆಯುಷ್ಮಾನ್-ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸೇರ್ಪಡೆಯಾಗಿದ್ದಕ್ಕೆ ಎಬಿ-ಎಆರ್‍ಕೆ ಕಾರ್ಡ್ ಎಂಬ ಹೆಲ್ತ್ ಕಾರ್ಡ್, ವಿಶಿಷ್ಟ ಐಡಿ ಕೂಡ ನೀಡಲಾಗುತ್ತದೆ.

ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಲಭ್ಯ

      ಪ್ರಸ್ತುತ ರಾಜ್ಯದ 390 ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಯಾಗಿದ್ದು, ಸಂಖ್ಯೆ ಹೆಚ್ಚುತ್ತಿದೆ. ಈ ಆಸ್ಪತ್ರೆಗಳ ಪಟ್ಟಿಯನ್ನು, ಯಾವೆಲ್ಲ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದು ಎಂಬುದನ್ನೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ವೆಬ್‍ಸೈಟ್‍ನಲ್ಲಿ ಮಾಹಿತಿ ಪಡೆಯಬಹುದು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮುನ್ನ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಬೇಕು. ಯಾವೆಲ್ಲ ಸರಕಾರಿ-ಖಾಸಗಿ ಆಸ್ಪತ್ರೆಯಲ್ಲಿ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆ ಇದೆ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ.

ಯಾರಿಗೆ ಎಷ್ಟೆಷ್ಟು ಸೌಲಭ್ಯ ದೊರೆಯಲಿದೆ ?

        ಆಯುಷ್ಮಾನ್ ಭಾರತ್ ಯೋಜನೆಯಡಿ ರಾಜ್ಯದ 62 ಲಕ್ಷ ಬಿಪಿಎಲ್ ಕಾರ್ಡ್‍ದಾರರಿಗೆ ಚಿಕಿತ್ಸೆ ದೊರೆಯಲಿದೆ. ಇದರಲ್ಲಿ ಶೇ. 60ರಷ್ಟು ಹಣವನ್ನು ಕೇಂದ್ರ ಸರಕಾರ ನೀಡಲಿದ್ದರೆ, ಉಳಿದ ಶೇ. 40ರಷ್ಟನ್ನು ರಾಜ್ಯ ಸರಕಾರ ಭರಿಸಲಿದೆ. ರಾಜ್ಯದಲ್ಲಿ ಒಟ್ಟು 115 ಲಕ್ಷ ಬಿಪಿಎಲ್ ಕಾರ್ಡ್‍ದಾರರಿಗೆ ಆರೋಗ್ಯ ಯೋಜನೆ ಅನ್ವಯವಾಗಲಿದ್ದು, ಉಳಿದ 53 ಲಕ್ಷ ಬಿಪಿಎಲ್ ಕಾರ್ಡ್‍ದಾರರ ಪೂರ್ಣ ವೆಚ್ಚವನ್ನು ಸರಕಾರ ಭರಿಸಲಿದೆ. ಇದರಡಿ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ಹಾಗೂ ಎಪಿಎಲ್ ಕುಟುಂಬಗಳಿಗೆ ವಾರ್ಷಿಕ 1.50 ಲಕ್ಷ ರೂ. ವರೆಗಿನ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ.

     ಕರ್ನಾಟಕದಲ್ಲಿ ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಮತ್ತು ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಯೋಜನೆಗಳೆರಡನ್ನೂ ವಿಲೀನಗೊಳಿಸಲಾಗಿದೆ. ಹೀಗಾಗಿ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಎಂಬ ಹೆಸರಿನಲ್ಲಿ ಜಾರಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆ ಜಾರಿಯ ಉಸ್ತುವಾರಿ ವಹಿಸಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ 2018ರ ಅ.30ರಂದು ಈ ಸಂಬಂಧ ಒಪ್ಪಂದ ಮಾಡಿಕೊಂಡಿವೆ.

      ಆಯುಷ್ಮಾನ್ ಭಾರತ – ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲೆಯ ಪ್ರತಿಯೊಂದು ತಾಲ್ಲೂಕುಗಳಲ್ಲಿ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ತುಮಕೂರು ನಗರಕ್ಕೆ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆಯಲ್ಲಿ ಕೌಂಟರ್ ತೆರೆಯಲಾಗಿದೆ. ಈಗಾಗಲೇ ತುಮಕೂರು ನಗರದಲ್ಲಿ ಜೂನ್ 12ರ ವರೆಗೆ 19,610 ಕಾರ್ಡ್‍ಗಳನ್ನು ವಿತರಣೆ ಮಾಡಲಾಗಿದೆ. ಇಡೀ ಜಿಲ್ಲೆಯಲ್ಲಿ 1,28,298 ಕಾರ್ಡ್‍ಗಳನ್ನು ವಿತರಣೆ ಮಾಡಲಾಗಿದೆ. ಕಾರ್ಡ್ ಪಡೆದವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವುದಿಲ್ಲ ಎಂದಾದಾಗ ಮಾತ್ರ ಅವರಿಗೆ ಯೋಜನೆಯ ವ್ಯಾಪ್ತಿಯಲ್ಲಿನ ಖಾಸಗಿ ಆಸ್ಪತ್ರೆ ಅಥವಾ ಮೇಲ್ಮಟ್ಟದ ಸರ್ಕಾರಿ ಆಸ್ಪತ್ರೆಗೆ ರೆಫರಲ್ ಪತ್ರವನ್ನು ನೀಡಿ ಕಳುಹಿಸಲಾಗುತ್ತದೆ. ಅದರಲ್ಲಿ ಯಾವ ಕಾರಣಕ್ಕೆ ಚಿಕಿತ್ಸೆ ಲಭ್ಯವಿಲ್ಲ ಎಂಬುದನ್ನು ನಮೂದು ಮಾಡಿ ಕಳಿಸಬೇಕು.

ಡಾ.ಟಿ.ವೀರಭದ್ರಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕರು.

 
     ತುರುವೇಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ನಮ್ಮ ಸಂಬಂಧಿಕರನ್ನು ದಾಖಲಿಸಲಾಗಿತ್ತು. ಆತನಿಗೆ ಬೇಕಾದ ಚಿಕಿತ್ಸೆ ಅಲ್ಲಿ ಲಭ್ಯವಿರಲಿಲ್ಲ. ನಮಗೆ ಮಾಹಿತಿಯ ಕೊರತೆಯಿತ್ತು. ಅಲ್ಲಿನ ವೈದ್ಯರು ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಅಲ್ಲಿ ಮಾಹಿತಿ ಪಡೆದು ರೆಫರಲ್ ಪತ್ರಕ್ಕಾಗಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ಇಲ್ಲಿ ನೋಂದಣಿ ಆಗಿ ಚಿಕಿತ್ಸೆ ದೊರೆಯುವುದಿಲ್ಲ ಎಂದರೆ ಮಾತ್ರ ಖಾಸಗಿ ಆಸ್ಪತ್ರೆಗೆ ರೆಫರಲ್ ಪತ್ರವನ್ನು ನೀಡಿಕಳುಹಿಸಿ ಕೊಡಲಾಗುತ್ತದೆ ಎಂಬ ಮಾಹಿತಿ ಬಂತು. ಈ ಬಗ್ಗೆ ವೈದ್ಯರು ಸೇರಿದಂತೆ ಸರ್ಕಾರವು ಹೆಚ್ಚಿನ ಪ್ರಚಾರ ನೀಡುವ ಮೂಲಕ ಜನರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಬೇಕು.

ರಮೇಶ್‍ಕುಮಾರ್, ತುಮಕೂರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap