15ದಿನಗಳೊಳಗಾಗಿ ಆಯುಷ್ಮಾನ್ ಕಾರ್ಡ್ ಸಮಸ್ಯೆ ಪರಿಹಾರ..!

ಬೆಂಗಳೂರು

  ಬಡವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ದೊರಕಿಸುವಲ್ಲಿ ಸರ್ಕಾರದ ಆಯುಷ್ಮಾನ್ ಭಾರತ ಕಾರ್ಡ್ ವಿಫಲವಾಗಿರುವ ಕುರಿತು ವ್ಯಕ್ತವಾಗುತ್ತಿರುವ ಭಾರೀ ಟೀಕೆಗಳ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸರ್ಕಾರ ಮುಂದಿನ ಹದಿನೈದಿಪ್ಪತ್ತು ದಿನಗಳಲ್ಲಿ ಈ ಲೋಪವನ್ನು ಸರಿಪಡಿಸುವುದಾಗಿ ಹೇಳಿದೆ.

  ವಿಕಾಸಸೌಧದಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಈ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಿದರಲ್ಲದೆ ಹಿಂದಿದ್ದ ಯಶಸ್ವಿನಿ ಮತ್ತಿತರ ಆರೋಗ್ಯ ಕಾರ್ಡುಗಳ ಮಾದರಿಯಲ್ಲಿ ಆಯುಷ್ಮಾನ್ ಭಾರತ ಕಾರ್ಡು ಉಪಯೋಗಕ್ಕೆ ಬರುತ್ತಿಲ್ಲ ಎಂಬ ಕೂಗನ್ನು ಸರಿಪಡಿಸುವುದಾಗಿ ನುಡಿದರು.

   ಯಶಸ್ವಿನಿ ಕಾರ್ಡು ಸೇರಿದಂತೆ ಈ ಹಿಂದೆ ಇದ್ದ ಹಲವು ಆರೋಗ್ಯ ಕಾರ್ಡುಗಳನ್ನು ಒಗ್ಗೂಡಿಸಿ ಕೇಂದ್ರ ಸರ್ಕಾರದ ನೆರವಿನ ಆಯುಷ್ಮಾನ್ ಭಾರತ ಕಾರ್ಡ್ ಅನ್ನು ತರಲಾಯಿತು.ತಮಗಿರುವ ಮಾಹಿತಿಯ ಪ್ರಕಾರ ಈ ಕಾರ್ಡಿನಿಂದ ಐದು ಲಕ್ಷ ಮಂದಿ ಚಿಕಿತ್ಸೆ ಪಡೆದಿದ್ದಾರೆ.ಇದಕ್ಕಾಗಿ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಸರ್ಕಾರ ವೆಚ್ಚ ಮಾಡಿದೆ ಎಂದರು.

   ಆದರೂ ಈ ಹಿಂದೆ ಯಶಸ್ವಿನಿಯಂತಹ ಒಂದು ಕಾರ್ಡನ್ನು ಹಿಡಿದುಕೊಂಡು ಹೋದರೂ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿದ್ದವು.ಆದರೆ ಈಗ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ಸ್ಪಷ್ಟವಾಗಿ ನಿರಾಕರಿಸುತ್ತಿವೆ ಎಂಬ ಆರೋಪಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ನುಡಿದರು.

   ಆಯುಷ್ಮಾನ್ ಭಾರತ ಯೋಜನೆಯಡಿ ರೋಗಿ ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು.ಒಂದು ವೇಳೆ ಅಲ್ಲಿ ಸೌಲಭ್ಯವಿಲ್ಲದಿದ್ದರೆ ಸದರಿ ಆಸ್ಪತ್ರೆಗಳಿಂದ ದಾಖಲೆ ಪಡೆದು ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕು.ಆದರೆ ಹಲವರು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ.ಇದರಿಂದ ಸಮಸ್ಯೆಯಾಗುತ್ತಿರುವುದು ನಿಜ.ಆದರೂ ಅಂತಿಮವಾಗಿ ಆರೋಗ್ಯದ ವಿಷಯದಲ್ಲಿ ರೋಗಿಗಳಿಗೆ ತಕ್ಷಣ ಚಿಕಿತ್ಸೆ ದೊರೆಯಬೇಕು ಎಂದು ವಿವರಿಸಿದರು.

   ಮಲೆನಾಡು ಭಾಗದಲ್ಲಿ ಮರಳಿ ಶುರುವಾಗಿರುವ ಮಂಗನ ಕಾಯಿಲೆ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಈ ವರ್ಷವೂ ಸಮಸ್ಯೆ ಕಂಡು ಬಂದಿರುವುದು ನಿಜ.ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅದರ ಸಮಸ್ಯೆ ಬಿಗಡಾಯಿಸಿಲ್ಲ ಎಂದರು.

    ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಸಕಾಲಿಕ ಚಿಕಿತ್ಸೆ ಲಭ್ಯವಾಗಬೇಕು ಎಂಬ ದೃಷ್ಟಿಯಿಂದ ಮುಂದಿನ ಬಜೆಟ್‍ನಲ್ಲಿ ಹಲವು ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ ಅವರು ಈ ಹಿಂದೆ ನಾನು ಆರೋಗ್ಯ ಸಚಿವನಾಗಿದ್ದಾಗ ಜಾರಿಗೆ ತಂದ 108 ಮಾದರಿಯಲ್ಲಿ ಪಿಂಕ್ ಬಸ್ ಯೋಜನೆಯೊಂದನ್ನು ಜಾರಿಗೊಳಿಸುವ ಉದ್ದೇಶವಿದೆ ಎಂದು ನುಡಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link