ತುಮಕೂರು :ವಿದ್ಯಾರ್ಥಿ ವೇತನಕ್ಕಾಗಿ ಬಿ.ಇಡಿ ವಿದ್ಯಾರ್ಥಿಗಳ ಅಲೆದಾಟ..!

 ತುಮಕೂರು :

     ಕಳೆದ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಮೆಟ್ರಿಕ್‍ನಂತರದ ವಿದ್ಯಾರ್ಥಿಗಳಿಗಾಗಿ ಜಾರಿಗೆ ಬಂದ ವಿದ್ಯಾಸಿರಿ ಯೋಜನೆಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಸರೆಯಾಗಿತ್ತು. ಈ ಯೋಜನೆಯು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಭರಿಸಿ ಉನ್ನತ ವಿದ್ಯಾಭ್ಯಾಸಗಳಿಗೆ ಅತ್ಯಂತ ಹೆಚ್ಚಿನ ಸಹಾಯಕಾರಿಯಾಗುವಲ್ಲಿ ಯಶಸ್ವಿ ಯೋಜನೆಯಾಗಿ ಹೊರಹೊಮ್ಮಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಯೋಜನೆಯಲ್ಲಿ ಪ್ರಸಕ್ತ ಸರ್ಕಾರ ವಿವಿಧ ತಿದ್ದುಪಡಿಗಳನ್ನು ಮಾಡಿದಂತೆ ಕಂಡುಬಂದಿದ್ದು, ಈ ತಿದ್ದುಪಡಿಗಳು ಬಿಇಡಿ ಮತ್ತು ಡಿಇಡಿ ವಿದ್ಯಾರ್ಥಿಗಳಿಗೆ ಸಂಕಷ್ಟವನ್ನು ತಂದೊಡ್ಡಿವೆ.

     ವೇತನಕ್ಕೆ ಅರ್ಜಿ ಸಲ್ಲಿಸಲು ಡಿ.ಎಡ್ ಮತ್ತು ಬಿ.ಎಡ್ ವಿದ್ಯಾರ್ಥಿಗಳಿಂದ ಅಂತಿಮ ದಿನಾಂಕವನ್ನು ಮುಂದೂಡುವ ಬಗ್ಗೆ ಹಾಗೂ ಬಾಕಿ ಇರುವ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸುವ ಬಗ್ಗೆ ರಾಜ್ಯ ಸರ್ಕಾರವು ಒಬಿಸಿ ಬಡ ವಿದ್ಯಾರ್ಥಿಗಳಿಗೆ ವಿದಾಭ್ಯಾಸಕ್ಕೆ ಅನುಕೂಲವಾಗುವ ರೀತಿಯಲ್ಲಿ ವಿದ್ಯಾಸಿರಿ ವಿದ್ಯಾರ್ಥಿ ವೇತನದ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಆದರೆ ದುರಂತವೆಂದರೆ ಪ್ರಸ್ತುತ ರಾಜ್ಯ ಸರ್ಕಾರ ಬಂದಾಗಿನಿಂದ ಈ ಯೋಜನೆಗೆ ಮುಸುಕು ಕವಿದಂತಾಗಿದೆ. ಈ ಯೋಜನೆಯಲ್ಲಿ ಅನೇಕ ತಿದ್ದುಪಡಿಗಳನ್ನು ಕಂಡು ಬಹುತೇಕ ಸ್ಥಗಿತಗೊಂಡಂತಾಗಿದೆ.

2019-20ನೇ ಸಾಲಿನ ಬಿಇಡಿ ವಿದ್ಯಾರ್ಥಿಗಳಿಗೆ ಅರ್ಜಿ ತಡೆ..!

      ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ವಿದ್ಯಾಸಿರಿ ವಿದ್ಯಾರ್ಥಿ ವೇತನವು ಇಲ್ಲಿರವರೆಗೂ ಅಂದರೆ 2018-19ನೇ ಸಾಲಿನ ವರೆಗೂ ಬಿಇಡಿ ವಿದ್ಯಾರ್ಥಿಗಳು ವಿದ್ಯಾಸಿರಿ ವೇತನ ಪಡೆಯಲು ಅವಕಾಶವಿದ್ದು, ಪ್ರಸ್ತುತ 2019-20ನೇ ಸಾಲಿನ ಬಿಇಡಿ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಗೆ ಅರ್ಜಿ ಸಲ್ಲಿಕೆ ಅವಕಾಶವನ್ನು ತಡೆ ಹಿಡಿಯಲಾಗಿದೆ.

     ಪದವಿಯಿಂದ ನೇರವಾಗಿ ಬಿಇಡಿ ಮಾಡುವ ವಿದ್ಯಾರ್ಥಿಗಳಿಗೂ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿ ಪ್ರಸಕ್ತ ವರ್ಷದಲ್ಲಿ ಬಿಇಡಿ ಮಾಡುವ ವಿದ್ಯಾರ್ಥಿಗಳಿಗೂ ಅರ್ಜಿಗಳು ಸಲ್ಲಿಕೆಯಾಗುತ್ತಿಲ್ಲ. ಈ ಕುರಿತು ಪ್ರಶ್ನಿಸಿದರೆ ವಿದ್ಯಾರ್ಥಿಗಳೇ ತಪ್ಪಿತಸ್ಥರೆನ್ನುವಂತೆ ಸಮಜಾಯಿಷಿ ಹೇಳುತ್ತಾರೆ ಅಧಿಕಾರಿಗಳು.

     ಇದರಿಂದ ಪ್ರಸಕ್ತ ವರ್ಷದ ಬಿಇಡಿ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ ಪಾವತಿಯಲ್ಲಿ ಪೂರ್ಣ ಪ್ರಮಾಣದ ಹಣವನ್ನು ಭರಿಸುವಂತಾಗಿದ್ದು, ಅತ್ಯಂತ ಕಡು ಬಡ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದ ಶುಲ್ಕುವನ್ನು ಭರಿಸಲಾಗದೆ ತತ್ತರಿಸುವಂತಾಗಿದೆ. ಕೂಡಲೇ ವಿದ್ಯಾಸಿರಿ ಯೋಜನೆಯನ್ನು ಯಥಾಸ್ಥಿತಿ ಚಾಲ್ತಿಗೊಳಿಸಿ ಅರ್ಜಿ ಸಲ್ಲಿಸಲು ದಿನಾಂಕ ನಿಗದಿ ಪಡಿಸಿ ಅರ್ಜಿಗಳನ್ನು ಪಡೆಯುವಂತಾಗಬೇಕು ಎನ್ನುವುದು ಜಿಲ್ಲೆಯ ಬಿಇಡಿ ಮತ್ತು ಡಿಇಡಿ ವಿದ್ಯಾರ್ಥಿಗಳ ಒಕ್ಕೊರಲಿನ ಆಗ್ರಹವಾಗಿದೆ.

ಮುಖ್ಯಮಂತ್ರಿ ಒಳಗೊಂಡಂತೆ ಯಾವ ಇಲಾಖೆಗಳೂ ಸ್ಪಂದಿಸುತ್ತಿಲ್ಲ..!

   ರಾಜ್ಯ ಸರ್ಕಾರವು ಇತ್ತೀಚೆಗೆ ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆಹ್ವಾನಿಸಿ ನಂತರ ಕೂಡಲೇ ಸ್ಥಗಿತಗೊಳಿಸಿದ್ದು, ಇದು ವಿದ್ಯಾರ್ಥಿ ವಿರೋಧಿ ನೀತಿ ಆಗಿದ್ದು, ಜಿಲ್ಲೆಯ ಡಿ.ಎಡ್ ಮತ್ತು ಬಿ.ಎಡ್ ವಿದ್ಯಾರ್ಥಿಗಳ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಕಳೆದ ಹದಿನೈದು ದಿನಗಳಿಂದ ಪ್ರಯತ್ನ ಪಟ್ಟರೂ ಸಹ ಅರ್ಜಿಯನ್ನು ಸ್ವೀಕರಿಸುತ್ತಿಲ್ಲ. ಜೊತೆಗೆ ಅಂತಿಮ ದಿನಾಂಕವು ಸಹ ಮುಗಿದು ಹೋಗಿರುತ್ತದೆ.

    ಈ ಕುರಿತು ಜಿಲ್ಲೆಯ ವಿವಿಧ ಬಿಎಡ್ ಕಾಲೇಜುಗಳ ವಿದ್ಯಾಥಿಗಳ ತಂಡವೊಂದು ಹಿಂದುಳಿದ ವರ್ಗಗಳ ಇಲಾಖೆ, ಜಿಲ್ಲಾಧಿಕಾರಿಗಳ ಇಲಾಖೆ, ಶಾಸಕರು ಹಾಗೂ ಮುಖ್ಯಮಂತ್ರಿಗಳಿಗೆ ಅರ್ಜಿಯನ್ನು ಸಲ್ಲಿಸಿದ್ದರೂ ಸಫಲವಾಗದೆ. ಇಲಾಖೆಗಳಲ್ಲಿ ಅಧಿಕಾರಿಗಳು ತಲೆಯಲ್ಲಾಡಿಸಿ ಕಳುಹಿಸಿದ್ದಾರೆ.

     ಇದರಿಂದ ಸಾವಿರಾರು ಸಂಖ್ಯೆಯ ಬಡ ಪ್ರತಿಭಾವಂತ ಒಬಿಸಿ ಪದವಿ ವಿದ್ಯಾರ್ಥಿಗಳಿಗೆ ಅನ್ಯಾಯವಾದೆ. ಈ ಯೋಜನೆಯನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿಲ್ಲ. ಇದು ವಿದ್ಯಾರ್ಥಿಗಳ ನೋವಿಗೆ ಕಾರಣವಾಗಿದ್ದು, ನೊಂದ ವಿದ್ಯಾರ್ಥಿಗಳು ಹಣ ಕಟ್ಟಲಾಗದೆ ತಮ್ಮ ಓದನ್ನು ಸ್ಥಗಿತಗೊಳಿಸುವ ಯೋಚನೆಗೆ ಬಂದಿದ್ದಾರೆ.

      ಸರ್ಕಾರ ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ಯೋಜನೆಯನ್ನು ಪುನಃ ಚಾಲ್ತಿಗೊಳಿಸಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಸಂಬಂಧಪಟ್ಟ ಸ್ಥಳೀಯ ಇಲಾಖೆಗಳು ಒತ್ತಾಯ ಹಾಕಬೇಕು. ಮತ್ತು ಬಾಕಿ ಇರುವ ವಿದ್ಯಾರ್ಥಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು.

      ಈ ಸಮಸ್ಯೆಯನ್ನು ಸ್ಥಳೀಯ ಮಟ್ಟದಲ್ಲಿ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಇದು ಇಡೀ ರಾಜ್ಯದ ಸಮಸ್ಯೆಯಾಗಿದ್ದು, ಬಿಇಡಿ ವಿದ್ಯಾರ್ಥಿಗಳು ಕಳೆದ ವಾರ ಕಚೇರಿಗೆ ಈ ಕುರಿತು ದೂರು ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯನ್ನು ಪರಿಶೀಲಿಸಿ ಮುಖ್ಯ ಕಚೇರಿಗೆ ತ್ವರಿತವಾಗಿ ಕಳುಹಿಸಿಕೊಡುವ ಪ್ರಯತ್ನ ಮಾಡುತ್ತೇವೆ.ಈ ವರ್ಷದಿಂದ ಸಮಸ್ಯೆ ಉಂಟಾಗಿದ್ದು ವಿದ್ಯಾರ್ಥಿಗಳಿಗೆ ಸಮಸ್ಯೆ ಮುಕ್ತಗೊಳಿಸಿ ಪುನಃ ಅರ್ಜಿ ಸಲ್ಲಿಸುವಂತೆ ದಿನಾಂಕ ವನ್ನು ವಿಳಂಬ ಮಾಡುವ ಕುರಿತು ಕಚೇರಿಗೆ ಮನವಿ ಮಾಡುತ್ತೇವೆ. ಜಿಲ್ಲಾ ಇಲಾಖೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ.  

ಡಾ. ಆರ್ ಸುಬ್ರಾನಾಯಕ್,ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಇಲಾಖೆ

   ಸುಮಾರು ಹತ್ತಾರು ಸಲ ಅರ್ಜಿ ಸಲ್ಲಿಸಲು ಹೋಗಿ ನಿರಾಶೆಯಿಂದ ವಾಪಸ್ ಬಂದಿದ್ದೇನೆ. 2019-20ರ ಸಾಲಿನ ಬಿಇಡಿ ವಿದ್ಯಾರ್ಥಿಗಳಿಗೆ ಈ ಯೋಜನೆ ಫಲಿಸಿಲ್ಲ. ಇಲಾಖೆಗಳಿಗೆ ಈ ಕುರಿತು ಅರ್ಜಿದರೂ, ನಾವು ಸಲ್ಲಿಸಿದ ಅರ್ಜಿಗಳು ಇಲಾಖೆಯ ಯಾವುದೋ ಮೂಲೆಯಲ್ಲಿ ಧೂಳಿಡಿದು ಕುಂತಿವೆ. ಇದರಿಂದ ನಮಗೆ ಬಹಳಷ್ಟು ಅನ್ಯಾಯವಾಗಿದ್ದು, ಓದು ಬೇಡಾ ಏನು ಬೇಡ ಎನಿಸಿದೆ. ಕೂಡಲೇ ಸರ್ಕಾರ ನಮಗೆ ನ್ಯಾಯ ಒದಗಿಸಿಕೊಡಬೇಕು.

 ನೊಂದ ವಿದ್ಯಾರ್ಥಿಗಳು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap