ದಾವಣಗೆರೆ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಅವರು ನನ್ನನ್ನೂ ಸಹ ಸಭೆಗೆ ಆಹ್ವಾನಿಸಿದ್ದಾರೆ. ಹೀಗಾಗಿ ಇಂದಿನ ಸಭೆಯಲ್ಲಿ ವರಿಷ್ಟರೊಂದಿಗೆ ದಾವಣಗೆರೆ ಟಿಕೆಟ್ ವಿಚಾರದ ಬಗ್ಗೆ ಚರ್ಚಿಸುತ್ತೇವೆ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೆಸರು ಇನ್ನೂ ಅಂತಿಮವಾಗಿಲ್ಲ್ಲ. ಏ.4ರ ವರೆಗೂ ಕಾಂಗ್ರೆಸ್‍ನಲ್ಲಿ ಟಿಕೆಟ್ ಹಂಚಿಕೆಯಾಗಲಿದ್ದು, ಬಿ-ಫಾರ್‍ಂ ಕೈಗೆ ಬಂದಾದ ಮೇಲೆಯೇ ಅಭ್ಯರ್ಥಿ ಯಾರೆಂಬುದು ಗೊತ್ತಾಗಲಿದೆ ಎಂದರು.
ಹೈಕಮಾಂಡ್ ಹ್ಞೂಂ ಅಂದ್ರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೂ ಸಹ ನಿಲ್ಲುತ್ತೇನೆ. ಕಾಂಗ್ರೆಸ್ ವರಿಷ್ಟರು ನನಗೆ ಮಾತನಾಡಿದ ಪ್ರಕಾರ 3 ಸಲ ನಾನು ಸೋತಿರುವ ಕಾರಣಕ್ಕೆ ಪಕ್ಷದ ಟಿಕೆಟನ್ನು ಯಜಮಾನ(ಶಾಮನೂರು ಶಿವಶಂಕರಪ್ಪ)ನರಿಗೆ ನೀಡಬೇಕೆಂಬ ಆಲೋಚನೆ ಇದೆ ಎಂದಿದ್ದಾರೆ. ಆದರೆ, ಅಪ್ಪಾರು (ಎಸ್ಸೆಸ್) ಆರೋಗ್ಯ ಹಾಗೂ ಕುಟುಂಬದ ಕಾರಣ ನೀಡಿ ಸ್ಪರ್ಧಿಸುವುದಿಲ್ಲ ಎನ್ನುತ್ತಿದ್ದಾರೆ ಎಂದು ಹೇಳಿದರು.
ತಾವು ಚುನಾವಣೆಗೆ ಸ್ಪರ್ಧಿಸುವುದರಿಂದ ಹಿಂದೆ ಸರಿದಿಲ್ಲ. ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ರಾಜ್ಯ ನಾಯಕರೊಂದಿಗೆ ಈ ಬಗ್ಗೆ ಚರ್ಚಿಸುತ್ತೇನೆ. ಟಿಕೆಟ್ ವಿಚಾರವಾಗಿ ಇನ್ನೂ ಸಭೆಯೇ ನಡೆದಿಲ್ಲ. ಮೊದಲ ಸುತ್ತಿನಲ್ಲಿ ಚರ್ಚೆಯಾಗಿದೆಯಷ್ಟೇ. ಏನೂ ಅಂತಿಮವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಅವರು ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್ ಅವರನ್ನು ಕರೆಸಿಕೊಂಡಿರುವ ವಿಚಾರ ನನಗೆ ತಿಳಿದಿಲ್ಲ. ಎಲ್ಲರೂ ಸೇರಿಕೊಂಡು ಕಾಂಗ್ರೆಸ್‍ಗೆ ದುಡಿಯಬೇಕು. ತೇಜಸ್ವಿ ಪಟೇಲ್ ನಿಂತರೆ ನಾವು ದುಡಿಯಬೇಕು. ನಾವು ನಿಂತರೆ ತೇಜಸ್ವಿ ದುಡಿಯಬೇಕು. ಇನ್ನುಳಿದ ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲರೂ ಸೇರಿಕೊಂಡು ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು. ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದಷ್ಟೇ ನಮ್ಮ ಗುರಿಯಾಗಿದೆ ಎಂದರು.
ಸುದ್ದಿಗಾರರೊಂದಿಗೆ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ದಾವಣಗೆರೆ ಕ್ಷೇತ್ರದ ಟಿಕೆಟ್‍ನ್ನು ಯಾರಿಗೇ ನೀಡಿದರೂ ಸಹ ನಾವು ಕೆಲಸ ಮಾಡುತ್ತೇವೆ ಎಂಬುದಾಗಿ ಸ್ಪಷ್ಟವಾಗಿ ಮುಖಂಡರಿಗೆ ತಿಳಿಸಿದ್ದೇವೆ. ಯಾರಿಗೆ ಟಿಕೆಟ್ ನೀಡಬೇಕೆಂದು ನಾನು ಹೇಳಿಲ್ಲ. ಯಾರ ಹೆಸರನ್ನೂ ಹೈಕಮಾಂಡ್‍ಗೂ ಸೂಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆಗೆ ಎಚ್.ಬಿ.ಮಂಜಪ್ಪ, ಜಿಪಂ ಸದಸ್ಯ ತೇಜಸ್ವಿ ಪಟೇಲ್ ಹೆಸರು ಕೇಳಿ ಬರುತ್ತಿವೆಯಂತೆ. ತೇಜಸ್ವಿ ಪಟೇಲ್‍ಗೆ ಕೆಪಿಸಿಸಿ ನಾಯಕರು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆಂದು ಗೊತ್ತಾಗಿದೆ. ಕಾಂಗ್ರೆಸ್ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ನಾವು ಕೆಲಸ ಮಾಡಬೇಕು. ಮಾಡುತ್ತೇವೆ ಎಂದು ಹೇಳಿದರು.
ಇನ್ನೂ ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಹೆಚ್.ಬಿ.ಮಂಜಪ್ಪ, ನಮ್ಮ ಜಿಲ್ಲೆಯ ಅಭ್ಯರ್ಥಿಯಾಗಿ ಶಾಮನೂರು ಶಿವಶಂಕರಪ್ಪ, ಇಲ್ಲವೆ ಎಸ್.ಎಸ್.ಮಲ್ಲಿಕಾರ್ಜುನ್ ಆಗಬೇಕೆಂಬುದು ಪ್ರತಿಯೊಬ್ಬ ಕಾರ್ಯಕರ್ತರ ಒತ್ತಾಯವಾಗಿದೆ. ಆದರೆ ಅವರು ಕಾರಣಾಂತರದಿಂದ ಬೇಡ ಎಂದು ನನ್ನ ಹೆಸರನ್ನು ಸೂಚಿಸಿದ್ದಾರೆಂದು ತಿಳಿಸಿದರು.
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಲಾಗಿದೆ. ಅವರೇ ಪಕ್ಷದ ಆಧಾರ ಸ್ತಂಭ. ಇವರ ನಿರ್ಣಯವೇ ಅಂತಿಮವಾಗಿದೆ. ಅವರ ಮಾತನ್ನು ನಾವು ಕಡೆಗಣಿಸುವುದಿಲ್ಲ ಎಂದು ಹೇಳಿದರು.