ಜನರ ಪರಿವರ್ತನೆಗೆ ಶ್ರಮಿಸಿದ ಜಗಜ್ಯೋತಿ ಬಸವಣ್ಣನವರ ಆದರ್ಶಗಳು ಎಂದಿಗೂ ಜೀವಂತ.

ಚಳ್ಳಕೆರೆ

      ಅಸಮಾನತೆ ಮತ್ತು ಅಜ್ಞಾನದಿಂದ ಕೂಡಿದ್ದ ಸಮಾಜದಲ್ಲಿ ವಚನಗಳ ಮೂಲಕ ಜ್ಞಾನದ ಬೆಳಕನ್ನು ನೀಡಿ ಎಲ್ಲಾ ಸಮುದಾಯದಲ್ಲೂ ಸಾಮರಸ್ಯತೆಯನ್ನು ಮೂಡಿಸಿ ಸಮಾನತೆಯನ್ನು ಉಂಟು ಮಾಡಿದ ಕೀರ್ತಿ ಜಗಜ್ಯೋತಿ ಬಸವೇಶ್ವರರದ್ದು ಎಂದು ಉಪಪ್ರಚಾರ್ಯ ಡಾ.ಜಿ.ವಿ.ರಾಜಣ್ಣ ತಿಳಿಸಿದರು.

       ಅವರು, ಗುರುವಾರ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಸವಣ್ಣನವರ ಸಾಧನೆಯ ಬಗ್ಗೆ ಉಪನ್ಯಾಸ ನೀಡುತ್ತಾ ಮಾತನಾಡಿದರು. ಜಗಜ್ಯೋತಿ ಬಸವೇಶ್ವರರು ಈ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವ ಅನೇಕ ವಿಚಾರಗಳ ಬಗ್ಗೆ ತಮ್ಮ ವಚನಗಳ ಮೂಲಕ ಬೆಳಕು ಚೆಲ್ಲಿ ಸಮಾಜದ ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದರು.

       12ನೇ ಶತಮಾನ ಮಾನವ ಸಮಾಜದ ಹಿತದೃಷ್ಠಿಯಿಂದ ಉತ್ತಮ ಪರ್ವಕಾಲವಾಗಿದ್ದು, ಇಲ್ಲಿಂದಲೇ ಧಾರ್ಮಿಕ ಪರಿವರ್ತನೆ ಯುಗ ಪ್ರಾರಂಭವಾಯಿತು. ಕಾರಣ, ಬಸವಣ್ಣನವರು ಎಲ್ಲಾ ಜಾತಿಯಲ್ಲಿಯೂ ಸಮಾಜನತೆಯನ್ನು ಕಾಣುವ ಮೂಲಕ ಎಲ್ಲಾ ವರ್ಗದ ಕೇಂದ್ರಬಿಂದುವಾಗಿದ್ದರು. ಅತಿ ಸುಲಭವಾಗಿ ವ್ಯಕ್ತಿ ಪರಿವರ್ತನೆಗೆ ಪ್ರೇರಣಾ ಶಕ್ತಿಯಾಗುವಂತಹ ವಚನಗಳ ರಚನೆಯಿಂದ ಎಲ್ಲರ ಮನಗೆಲ್ಲುವಲ್ಲಿ ಅವರು ಸಫಲರಾದರು. ಇಂದು ಬಸವಣ್ಣನವರು ನಮ್ಮೊಡನೆ ಇರದಿದ್ದರೂ ಸಹ ಅವರ ಧಾರ್ಮಿಕ ಚಿಂತನೆಗಳು ಸದಾಕಾಲ ನಮ್ಮನ್ನು ಸನ್ಮಾರ್ಗದಲ್ಲಿ ತೆಗೆದುಕೊಂಡುಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದರು.

       ದಿವ್ಯಸಾನಿಧ್ಯ ವಹಿಸಿದ್ದ ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿ ಆಶೀರ್ವಾಚನ ನೀಡಿ, ಇಂದು ನಾವೆಲ್ಲರೂ ವೈಭವದ ಬದುಕಿನತ್ತ ಹೆಜ್ಜೆ ಇಡುತ್ತಿದ್ದೇವೆ. ನಮ್ಮೆಲ್ಲರ ಇಂದಿನ ಜೀವನ ಉತ್ತಮ ಮಟ್ಟಕ್ಕೆ ಏರಲು ಪ್ರೇರಣಾ ಶಕ್ತಿಯಾವುದು ಎಂಬ ಬಗ್ಗೆ ಯಾರಿಗೂ ಚಿಂತನೆ ಇಲ್ಲ.

       ಕಾರಣ, ಧಾರ್ಮಿಕ ಪರಿವರ್ತನೆಯಲ್ಲಿ ಎಲ್ಲಾ ರೀತಿಯಿಂದಲೂ ಸಮರ್ಪಣೆ ಭಾವನೆಯಿಂದ ಸೇವೆ ಸಲ್ಲಿಸಿದ ಮಹಾನ್ ದಾರ್ಶನಿಕರಾದ ಜಗಜ್ಯೋತಿ ಬಸವೇಶ್ವರರ ಕಾರ್ಯಸಾಧನೆಯಿಂದ ನಾವೆಲ್ಲರೂ ಉತ್ತಮ ಮಾರ್ಗದಲ್ಲಿ ನಡೆಯುವ ಅವಕಾಶ ಒದಗಿದೆ. ಯಾವ ವ್ಯಕ್ತಿ ಧಾರ್ಮಿಕ ಪರ ಚಿಂತನೆಗಳಿಗೆ ಒತ್ತು ನೀಡುತ್ತಾನೋ, ಸಮಾಜದ ಒಳಿತನ್ನು ಬಯಸುತ್ತಾನೋ ಅಂತಹ ವ್ಯಕ್ತಿ ದೇಶದ ಆಸ್ತಿಯಾಗುತ್ತಾನೆ.

       ಅವನು ಸದಾ ಧರ್ಮ ಮತ್ತು ಅಭಿವೃದ್ಧಿ ಪರ ಚಿಂತನೆಗಳಿಗೆ ಆದ್ಯತೆ ನೀಡುತ್ತಾನೆ. ಆದರೆ, ಇಂದಿನ ದಿನಗಳಲ್ಲಿ ಈ ದೇಶದ ಸಮಗ್ರ ಅಭಿವೃದ್ಧಿಯ ಬಗ್ಗೆ ಚಿಂತಿಸುವ ವ್ಯಕ್ತಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ನಾವೆಲ್ಲರೂ ದೈವತ್ವವನ್ನು ನಂಬಿ ಬದುಕು ಸಾಗಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ವಿದ್ಯಾರ್ಥಿನಿಲಯದ ಅಧ್ಯಕ್ಷ ಡಾ.ಕೆ.ಎಂ.ಜಯಕುಮಾರ್ ವಹಿಸಿದ್ದರು. ಉಪಾಧ್ಯಕ್ಷ ಕೆ.ಎಂ.ಜಗದೀಶ್, ನಗರಸಭಾ ಸದಸ್ಯ ವಿಶುಕುಮಾರ್, ನಿರ್ದೇಶಕರಾದ ಎಸ್.ರೇವಣ್ಣ, ಸಿ.ಎಲ್.ವೀರಣ್ಣ, ಪ್ರಸನ್ನಕುಮಾರ್, ಡಿ.ಎಂ.ವೀರಭದ್ರಪ್ಪ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap