ಹುಳಿಯಾರು:
ಬಗರ್‍ಹುಕುಂ ಸಾಗುವಳಿದಾರರಿಗೆ ಅರ್ಜಿ ಸಲ್ಲಿಸಲು ಇನ್ನೂ ಮೂರು ತಿಂಗಳ ಕಾಲಾವಕಾಶ ನೀಡಿ, ಅನುಕೂಲ ಮಾಡಿಕೊಡಬೇಕು ಎಂದು ಹುಳಿಯಾರಿನ ದಲಿತ ಸಹಾಯವಾಣಿ ಅಧ್ಯಕ್ಷ ಹೊಸಹಳ್ಳಿ ಹನುಮಂತಯ್ಯ ಒತ್ತಾಯಿಸಿದರು.
ಈ ಹಿಂದಿನಿಂದಲೂ ಸರ್ಕಾರ ಆಗಾಗ ಬಗರ್ ಹುಕುಂ ಸಾಗುವಳಿದಾರರು ಅರ್ಜಿ ಹಾಕಲು ಅವಕಾಶ ಕಲ್ಪಿಸಿದ್ದರೆ ರೈತರು ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ತಾಲೂಕಿನ ಅನೇಕ ಮಂದಿ ಬಗರ್‍ಹುಕುಂ ಸಾಗುವಳಿದಾರರು ಇನ್ನೂ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಇರುವುದಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ಬಹಳ ವರ್ಷಗಳ ನಂತರ ಈಗ ನಮೂನೆ – 57 ರ ಅಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಸಾಗುವಳಿದಾರರು ಆನ್‍ಲೈನ್‍ನಲ್ಲಿ ಸಲ್ಲಿಸಬೇಕೆ ಅಥವಾ ಅರ್ಜಿ ನಮೂನೆಗಳಲ್ಲಿ ಸಲ್ಲಿಸಬೇಕೆ ಎಂಬ ಗೊಂದಲದಲ್ಲಿಯೇ ಕಾಲಹರಣವಾಗಿದೆ. ಹಾಗಾಗಿ ಅರ್ಜಿ ಸಲ್ಲಿಸದೆ ಉಳಿದಿರುವ ಸಾಗುವಳಿದಾರರಿಗೆ ಪುನಃ ಅರ್ಜಿ ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದರು.
ಕಳೆದ ಇಪ್ಪತ್ತು ವರ್ಷಗಳಿಂದ ಇಲ್ಲಿಯವರೆವಿಗೂ ಬಗರ್ ಹುಕುಂ ಸಾಗುವಳಿದಾರರಿಗೆ ಅರ್ಜಿ ಸಲ್ಲಿಸಿದ್ದರೂ ಕಾಲಕಾಲಕ್ಕೆ ಸಭೆ ನಡೆಸಿ ಅರ್ಹರಿಗೆ ಸಾಗುವಳಿ ಚೀಟಿ ಕೊಡದ ಕಾರಣ ಈಗ 17 ಸಾವಿರ ಸರ್ಜಿಗಳು ತಾಲೂಕಿನಲ್ಲಿದೆ. ಹಾಗಾಗಿ ಚುನಾವಣೆ ಮುಗಿದ ತಕ್ಷಣ ಅರ್ಜಿ ಪರಿಶೀಲಿಸಿ ಅರ್ಹರಿಗೆ ಭೂಮಿ ವಿತರಿಸುವ ಕಾರ್ಯ ಚುರುಕಿನಿಂದ ನಡೆಸುವಂತೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
