ಬಹು ಸಂಸ್ಕೃತಿಯ ಮೇಲೆ ದಾಳಿ: ಬರಗೂರು

ತುಮಕೂರು:

    ನಮ್ಮ ದೇಶದಲ್ಲಿಂದು ರಾಷ್ಟ್ರೀಯತೆ ಅಪಮೌಲ್ಯಗೊಳ್ಳುತ್ತಿದೆ. ಬಹು ಸಂಸ್ಕೃತಿಯ ಮೇಲೆ ದಾಳಿ ನಡೆಯುತಿದೆ ಎಂದು ಪ್ರಸಿದ್ಧ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.

     ನಗರದ ರವೀಂದ್ರ ಕಲಾನಿಕೇತನದಲ್ಲಿ ಲೇಖಕ, ಪತ್ರಕರ್ತ ಜಿ.ಇಂದ್ರಕುಮಾರ್ ಅವರ ಬಹುಜನ ಸಂಗ್ರಾಮ ಸಂಶೋಧನಾ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರಲ್ಲಿ ಸೈದ್ಧಾಂತಿಕ ಚಳವಳಿ ಇತ್ತು. ನೈಜ ಭಾರತ ನಿರ್ಮಾಣದ ಕನಸು ಇತ್ತು. ಆದರೆ ಈಗ ಅವೆಲ್ಲವೂ ಅಪಮೌಲ್ಯಗೊಂಡಿವೆ ಎಂದವರು ವಿಷಾದಿಸಿದರು.

     ಬರಹಗಾರರಲ್ಲಿ ವಿಮರ್ಶೆ ಮತ್ತು ಆತ್ಮವಿಮರ್ಶೆ ಎರಡೂ ಇರಬೇಕು. ಹೀಗಿದ್ದಾಗ ಮಾತ್ರವೇ ಉತ್ತಮ ಕೃತಿಗಳು ಹೊರಬರಲು ಸಾಧ್ಯ. ನಮ್ಮಲ್ಲಿ ಅನೇಕ ರೀತಿಯ ವಿಮರ್ಶಕರಿದ್ದಾರೆ. ಪ್ರತಿಭೆಯನ್ನೇ ಭ್ರೂಣಹತ್ಯೆ ಮಾಡಿದ ವಿಮರ್ಶಕರೂ ಇದ್ದಾರೆ. ಇವರೆಲ್ಲರೊಳಗೆ ಯಾರು ವಿಮರ್ಶೆ ಮತ್ತು ಆತ್ಮವಿಮರ್ಶೆ ಮಾಡಿಕೊಳ್ಳುತ್ತಾರೋ ಅವರು ಉತ್ತಮ ಲೇಖಕರಾಗಿ ಹೊರಹೊಮ್ಮುತ್ತಾರೆ ಎಂದರು.

     ಬಹುಜನ ಸಂಗ್ರಾಮ ಕೃತಿಯು ಈ ಹಿಂದೆ ತುಮಕೂರಿನ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ನೆನಪಿಸುತ್ತದೆ. ಬಹುಜನ ಎಂದರೆ ಬಹುತ್ವ. ಅನೇಕತೆ ಇದ್ದಲ್ಲಿ ಬಹುತ್ವ ಇರುತ್ತದೆ. ಯಾವತ್ತೂ ಸಹ ನಾವು ಏಕಮುಖಿಗಳಾಗಬಾರದು. ಸಮಾಜದಲ್ಲಿ ಸಮೂಹ ಪ್ರಜ್ಞೆ ಇರಬೇಕು. ಸಮುದಾಯ ಮತ್ತು ಸಂಘಟನೆಯ ಭಾಗವಾಗಿಯೇ ನಾಯಕತ್ವ ಹುಟ್ಟಿಕೊಳ್ಳಬೇಕು ಎಂದರು.

     ರಾಜಕೀಯ, ಧಾರ್ಮಿಕ, ಸಂಸ್ಕೃತಿ, ರಾಷ್ಟ್ರೀಯತೆಯಗಳೆಲ್ಲ ಅಪಮೌಲ್ಯೀಕರಣವಾಗಿ ಮಕ್ಕಳ ಮೇಲೆ ಅತ್ಯಾಚಾರ, ರೈತರ ಆತ್ಮಹತ್ಯೆ ಮೂಲಕ ಸ್ವಾತಂತ್ರ್ಯ ಇಂದು ಅಪಹಾಸ್ಯಕ್ಕೆ ಇಡಾಗುತ್ತಿದೆ. ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಧಾರ್ಮಿಕ ನ್ಯಾಯ ದೇಶದ ಧರ್ಮವಾಗಬೇಕು. ಗಾಂಧೀಜಿ ಹೇಳಿದ ಕೋಮು ಸಾಮರಸ್ಯದಿಂದ ಎಲ್ಲ ಧರ್ಮಗಳ ಹಿತರಕ್ಷಣೆಯಾಗುತ್ತದೆ ಎಂದರು.

     ಕಾರ್ಯಕ್ರಮದಲ್ಲಿ ಡಾ.ರವಿಕುಮಾರ್ ನೀಹಾ ಪುಸ್ತಕ ಪರಿಚಯಿಸಿದರು. ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ಡಾ.ಲೀಲಾಲೇಪಾಕ್ಷ್, ಬಾಬುರಾವ್ ಕುಂದಗೋಳ, ಸದಾಶಿವ, ವಿಜಯ ಮೋಹನ್ ಮತ್ತಿತರರು ವೇದಿಕೆಯಲ್ಲಿದ್ದರು. ಕೃತಿಕಾರ ಜಿ.ಇಂದ್ರಕುಮಾರ್ ಕೃತಿ ಬಿಡುಗಡೆಯ ಹಿನ್ನೆಲೆ ಕುರಿತು ಮಾತನಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link