ಲಂಚ ಸ್ವೀಕರಿಸಿದ್ದ ಸರ್ಕಾರಿ ಅಭಿಯೋಜಕಿಗೆ ಜಾಮೀನು ತಿರಸ್ಕಾರ

ತುಮಕೂರು:

     ಖುಲಾಸೆಯಾಗಿದ್ದ ಪ್ರಕರಣವೊಂದರಲ್ಲಿ ಮೇಲ್ಮನವಿ ಸಲ್ಲಿಸದೇ ಇರಲು ಲಂಚಕ್ಕೆ ಬೇಡಿಕೆ ಇಟ್ಟು 20 ಸಾವಿರ ರೂ.ಗಳ ಹಣ ಪಡೆದಿದ್ದ ಆರೋಪದ ಮೇರೆಗೆ ಎಸಿಬಿ ದಾಳಿಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ತಿಪಟೂರು ಜೆಎಂಎಫ್‍ಸಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕಿ ಪೂರ್ಣಿಮಾ ಅವರ ಜಾಮೀನು ಅರ್ಜಿಯನ್ನು ಇಲ್ಲಿನ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಜಾಗೊಳಿಸಿದೆ.

   ತಿಪಟೂರಿನಲ್ಲಿ ಏಪ್ರಿಲ್ 29 ರಂದು ಎಸಿಬಿ ಪೊಲೀಸರು ದಾಳಿ ನಡೆಸಿ ಅಭಿಯೋಜಕಿ ಪೂರ್ಣಿಮಾ ಹಾಗೂ ಶರಣಕುಮಾರ್ ಎಂಬುವರನ್ನು ವಶಕ್ಕೆ ಪಡೆದು ಮುಂದಿನ ಪ್ರಕ್ರಿಯೆ ಕೈಗೊಂಡಿದ್ದರು. ಇದಾದ ನಂತರ ಪೂರ್ಣಿಮಾ ಹಾಗೂ ಶರಣಕುಮಾರ್ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಾದ ವಿವಾದಗಳು ನಡೆದಿದ್ದವು.

    ಪೂರ್ಣಿಮಾ ಅವರು ಪ್ರಥಮ ಬಾರಿಗೆ ಚಿಕ್ಕಮಗಳೂರು ನ್ಯಾಯಾಲಯಕ್ಕೆ ಸರ್ಕಾರಿ ಅಭಿಯೋಜಕರಾಗಿ ಸೇರ್ಪಡೆಗೊಂಡಿದ್ದರು. ಆ ಸಂದರ್ಭದಲ್ಲಿ ಇವರ ಮೇಲೆ ಆರೋಪಗಳು ಎದುರಾಗಿದ್ದವು. ಅಲ್ಲಿನ ವಕೀಲರೇ ಇವರ ವಿರುದ್ಧ ದೂರು ನೀಡಿದ್ದರ ಮೇರೆಗೆ ಐಪಿಸಿ ಕಲಂ 307, 323 ಹಾಗೂ ಇತರೆ ಕಲಂಗಳ ಅಡಿಯಲ್ಲಿ ಕೇಸು ದಾಖಲಾಗಿತ್ತು. ಇದಲ್ಲದೆ, ಸರ್ಕಾರಿ ಅಭಿಯೋಜಕರಾಗಿ ಸೇರ್ಪಡೆಗೊಂಡ ಅವಧಿಯಲ್ಲಿ ಸಾಕಷ್ಟು ಅಭಿಯೋಜಕರ ನೇಮಕಾತಿ ಅಕ್ರಮಗಳಿಂದ ಕೂಡಿದೆ ಎಂದು ಆರೋಪಿಸಿ ಲೋಕಾಯುಕ್ತ ತನಿಖೆ ನಡೆದಿತ್ತು. ಇದರಲ್ಲಿಯೂ ಇವರು ಆರೋಪಿತರಾಗಿದ್ದಾರೆಂಬ ಮಾಹಿತಿಯನ್ನು ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

   ಪ್ರಕರಣದ ಗಂಭೀರತೆಯನ್ನು ಅರಿತ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ತಾರಕೇಶ್‍ಗೌಡ ಪಾಟೀಲ್ ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಹೀಗಾಗಿ ಲಂಚ ಸ್ವೀಕರಿಸಿದ್ದ ಆಪಾದನೆ ಮೇರೆಗೆ ಬಂಧನಕ್ಕೊಳಗಾಗಿರುವ ಇಬ್ಬರೂ ನ್ಯಾಯಾಂಗ ಬಂಧನದಲ್ಲಿಯೇ ಮುಂದುವರೆದಿದ್ದಾರೆ. ಹೆಚ್ಚಿನ ವಿವರಗಳಿಗೆ ಪಿಪಿ ಎನ್.ಬಸವರಾಜು (9902703879) ಇವರನ್ನು ಸಂಪರ್ಕಿಸುವುದು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap