ಬಾಕಿ ಕಮಿಷನ್ ನೀಡದಿದ್ದರೆ, ಪಡಿತರ ವಿತರಣೆ ಸ್ಥಗಿತ

ದಾವಣಗೆರೆ :

    ಇನ್ನೂ ಹದಿನೈದು ದಿನಗಳಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಬಾಕಿ ಇರುವ ಕಮಿಷನ್ ಹಣ ಬಿಡುಗಡೆ ಮಾಡದಿದ್ದರೆ, ಪಡಿತರ ವಿತರಣೆ ಸ್ಥಗಿತ ಗೊಳಿಸಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಎಚ್ಚರಿಸಿದ್ದಾರೆ.

      ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 4.17 ಕೋಟಿ ಜನರಿಗೆ 22 ಸಾವಿರ ನ್ಯಾಯಬೆಲೆ ಅಂಗಡಿಗಳ ಮೂಲಕ ಸರ್ಕಾರ ನೀಡುತ್ತಿರುವ ಪಡಿರವನ್ನು ವಿತರಿಸುತ್ತಿದ್ದೇವೆ. ಆದರೆ, ನಮಗೆ ಕಳೆದ 9 ತಿಂಗಳುಗಳಿಂದ ಅಂದಾಜು 35 ಕೋಟಿ ರೂ. ಕಮಿಷನ್ ನೀಡದೇ, ಹಾಗೆಯೇ ಉಳಿಸಿಕೊಂಡಿದೆ. ಹೀಗಾಗಿ ನಾವು ಜೀವನ ನಡೆಸುವುದು ಸಹ ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡರು.

      ಈಗಾಗಲೇ ರಾಜ್ಯ ಸರ್ಕಾರವು ಕರ್ನಾಟಕ ಆಹಾರ ನಾಗರೀಕ ಸರಬರಾಜು ನಿಗಮಕ್ಕೆ ನಮಗೆ ಬರಬೇಕಿದ್ದ ಕಮಿಷನ್ ಹಾಗೂ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಿದೆ. ಆದರೆ, ನಿಗಮವು ನಮಗೆ ಪಾವತಿ ಮಾಡಬೇಕಾಗಿರುವ ಹಣವನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ, ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಅನಗತ್ಯ ಕಿರುಕುಳ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಕಾರ್ಯದರ್ಶಿಗಳು ಹಾಗೂ ಆಯುಕ್ತರು ಈಗಾಗಲೇ ನಿಗಮದ ಅಧಿಕಾರಿಗಳಿಗೆ ಇನ್ನೂ ಮೂರು ದಿನಗಳಲ್ಲಿಯೇ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೀಡಬೇಕಾಗಿರುವ ಕಮಿಷನ್ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ನಿರ್ದೇಶನ ನೀಡಿದ್ದರೂ ಸಹ ಇದು ವರೆಗೂ ಕೆಎಸ್‍ಎಫ್‍ಸಿ ಅಧಿಕಾರಿಗಳು ಕಮಿಷನ್ ಬಿಡುಗಡೆ ಮಾಡಿಲ್ಲ. ಇದಕ್ಕೆ ಅಧಿಕಾರಿಗಳ ಮಧ್ಯೆ ಇರುವ ಸನ್ವಯತೆಯ ಕೊರತೆಯೇ ಕಾರಣವಾಗಿದೆ ಎಂದು ಆರೋಪಿಸಿದರು.

      ಸರ್ಕಾರಿ ನೌಕರರಿಗೆ 6ನೇ ಮತ್ತು 7ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಾಗ ಅಧಿಕಾರಿಗಳಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಆದರೆ, ನಮ್ಮಗಳ ಕಮಿಷನ್ ಹಣದ ಕಡತ ಬಂದ ತಕ್ಷಣವೇ ನೀತಿ ಸಂಹಿತೆ ಅಡ್ಡಿ ಬರುತ್ತದೆಯೇ ಎಂದು ಪ್ರಶ್ನಿಸಿದ ಕೃಷ್ಣಪ್ಪ, ಇನ್ನೂ 15 ದಿನಗಳಲ್ಲಿ ನಮಗೆ ಬರಬೇಕಾಗಿರುವ ಬಾಕಿ ಕಮಿಷನ್ ಹಣ ಬಿಡುಗಡೆ ಮಾಡದಿದ್ದರೆ, ನಾವು ಸಗಟು ಮಳಿಗೆಯಿಂದ ಪಡಿತರ ಎತ್ತದೇ, ವಿತರಣೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ಎಚ್ಚರಿಸಿದರು.

       ಸರ್ಕಾರದ ನಿರ್ದೇಶನದಂತೆ ಹೆಚ್ಚು ಪಡಿತರ ಚೀಟಿ ಹೊಂದಿರುವ ನ್ಯಾಯಬೆಲೆ ಅಂಗಡಿಗಳ ಕಾರ್ಡ್‍ಗಳನ್ನು 800ಕ್ಕೆ ಇಳಿಸಿ ಹಾಗೂ ಕಡಿಮೆ ಕಾರ್ಡ್ ಇರುವ ಅಂಗಡಿಗಳ ಕಾರ್ಡ್‍ಗಳನ್ನು 800ಕ್ಕೆ ಹೆಚ್ಚಿಸುವ ಮೂಲಕ ಏಕರೂಪ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಅಲ್ಲದೇ, ಪ್ರಸ್ತುತ ಕ್ವಿಂಟಾಲ್‍ಗೆ ನೀಡುತ್ತಿರುವ 100 ರೂ.ಗಳ ಕಮಿಷನ್ ಅನ್ನು 250ಕ್ಕೆ ಹೆಚ್ಚಿಸಿ, ದೇಶಾದ್ಯಂತ ಏಕರೂಪ ಕಮಿಷನ್ ಪದ್ಧತಿ ಜಾರಿಗೆ ತರಬೇಕು. ಸಗಟು ಮಳಿಗೆಗಳಲ್ಲಿ ಬಯೋಮೆಟ್ರಿಕ್ ಎಲೆಕ್ಟ್ರಾನಿಕ್ ಸ್ಕೇಲ್ ಅಳವಡಿಸಿ, ಅಂಗಡಿ ಮಾಲೀಕ ಥಂಬ್ ನೀಡಿದ ಬಳಿಕವೇ ಪಡಿತರ ಎತ್ತುವ ವ್ಯವಸ್ಥೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

      ಪಡಿತರ ಯೋಜನೆಯಲ್ಲಿ ನೀಡುತ್ತಿರುವ ಬೇಳೆಯು ಕಳಪೆ ಗುಣಮಟ್ಟದಿಂದ ಕೂಡಿದೇ, ಅಲ್ಲದೇ, ಬೇಳೆಯ ಪ್ಯಾಕೇಟ್‍ನ ತೂಕ ಸಹ ಕಡಿಮೆ ಇರುತ್ತದೆ. ಆದ್ದರಿಂದ ತೊಗರಿ ಬೇಳೆಯ ಬದಲು ಶೇಂಗಾ ಎಣ್ಣೆ, ಸಕ್ಕರೆ ಹಾಗೂ ಉಪ್ಪು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ.ರಾಮಚಂದ್ರ, ಕಾರ್ಯಾಧ್ಯಕ್ಷ ಡಿ.ತಮ್ಮಣ್ಣ, ಪದಾಧಿಕಾರಿ ಗಳಾದ ಕೆ.ಎಲ್.ರಾಮಚಂದ್ರ, ಸಿದ್ದಲಿಂಗಯ್ಯ, ಎನ್.ಓಮಣ್ಣ, ಎಂ.ಎನ್.ನಾಗರಾಜ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap