ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅರ್ಥಪೂರ್ಣವಾಗಿರಲಿ: ಬಿ.ಟಿ.ಕುಮಾರಸ್ವಾಮಿ

ದಾವಣಗೆರೆ

    ವಿಶ್ವ ಬಾಲಕಾರ್ಮಿಕರ ದಿನದ ಧ್ಯೇಯೋದ್ದೇಶ ಈಡೇರಿಕೆಗೆ ವಿವಿಧ ಇಲಾಖೆಗಳು ಕೈ ಜೋಡಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.

    ವಿಶ್ವ ಬಾಲಕಾರ್ಮಿಕರ ವಿರೋಧಿ ದಿನದ ಕುರಿತು ಚರ್ಚಿಸಲು ಸೋಮವಾರ ಜಿಲ್ಲಾಡಳಿತ ಕಚೇರಿಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೂನ್ 12 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಅಸಂಘಟಿತ ಕಾರ್ಮಿಕರು, ಕಾರ್ಮಿಕ ಮುಖಂಡರುಗಳು, ಹೋಟೇಲ್ ಮಾಲೀಕರು, ಇಟ್ಟಿಗೆ ಭಟ್ಟಿ ಮಾಲೀಕರು, ಗ್ಯಾರೇಜ್ ಹಾಗೂ ಮಂಡಕ್ಕಿ ಭಟ್ಟಿ ಮಾಲೀಕರನ್ನು ಕರೆಯಿಸಿ, ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಕುರಿತು ಜಾಗೃತಿ ಹಾಗೂ ತಮ್ಮ ಕೆಲಸದ ಸ್ಥಳಗಳಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಂಡು ಕಾರ್ಯನಿರ್ವಹಿಸಿದರೆ ಕಾನೂನಿನ ಪ್ರಕಾರ ಕೈಗೊಳ್ಳಲಾಗುವ ಕ್ರಮಗಳ ಕುರಿತು ಅರಿವು ಮೂಡಿಸಬೇಕೆಂದು ತಿಳಿಸಿದರು.

      ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಲಿದ್ದು, ಬೇಕಾದ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಬೇಕು. ಬಾಲಕಾರ್ಮಿಕತೆಗೆ ಆರ್ಥಿಕ ಪರಿಸ್ಥಿತಿ, ಅವರ ಸಾಮಾಜಿಕ ಸ್ಥಿತಿ ಮತ್ತು ಬಡತನ ಪ್ರಮುಖ ಕಾರಣವಾಗಿದ್ದು ಇಂತಹ ಬಾಲಕಾರ್ಮಿಕರು ಜಿಲ್ಲೆಯ ಯಾವ ಭಾಗದಲ್ಲಿ ಹೆಚ್ಚು ಕಂಡುಬರುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಅಂತಹ ವರ್ಗದ ಮನಃ ಪರಿವರ್ತಿಸಲು ಪ್ರಯತ್ನಿಸಬೇಕು. ಈ ಕಾರ್ಯಕ್ರಮದಿಂದ ನಾಲ್ಕಾರು ಕುಟುಂಬಗಳು ಪರಿವರ್ತನೆಯಾದರೆ ಕಾರ್ಯಕ್ರಮ ಆಯೋಜಿಸಿದ್ದಕ್ಕೂ ಸಾರ್ಥಕವಾಗಲಿದೆ. ಇದಕ್ಕೆ ಜಿಲ್ಲೆಯಲ್ಲಿ ಇರುವ ವಿವಿಧ ಕಾರ್ಮಿಕ ಸಂಘಗಳ ಸಹಾಯ ಪಡೆಯುವುದರ ಮೂಲಕ ಕಾರ್ಯಕ್ರಮ ರೂಪಿಸಿ ಎಂದರು.

      ಈ ವೇಳೆ ಕಾರ್ಯಕ್ರಮದ ಯೋಜನಾ ನಿರ್ದೇಶಕ ಪ್ರಸನ್ನ ಮಾತನಾಡಿ, ಕಳೆದ ಬಾರಿ ಆಯೋಜಿಸಿದಂತೆ ಕಾರ್ಯಕ್ರಮದ ದಿನದಂದು ಮಿಲ್ಲತ್ ಶಾಲಾ ಮಕ್ಕಳಿಂದ ಮಂಡಕ್ಕಿ ಭಟ್ಟಿ ಪ್ರದೇಶದಲ್ಲಿ ಜಾಥಾ ನಡೆಸಲಾಗುವುದು. ಹಾಗೂ ಅಂದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ನೀಡಲಾಗುವುದು.

      ಕಾರ್ಯಕ್ರಮದ ಐದು ದಿನಗಳ ಮುಂಚೆಯೇ ಬಾಲ ಕಾರ್ಮಿಕ ಪಿಡುಗಿನ ಬಗ್ಗೆ ಆಟೋಗಳ ಮೂಲಕ ಪ್ರಚಾರ ಮಾಡಿಸಲಾಗುವುದು ಹಾಗೂ ಮೂರು ಕಡೆ ಬೀದಿನಾಟಕ ಆಯೋಜಿಸಲಾಗುವುದು ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿಲ್ಲೆಯಲ್ಲಿ ಅಂದು ಜಾಥಾ ನಡೆಸುವ ಪ್ರಾರಂಭ ಸ್ಥಳದಿಂದ ಮುಕ್ತಾಯದ ಸ್ಥಳದವರೆಗೆ ಪೊಲೀಸ್ ಇಲಾಖೆಗೆ ಟ್ರಾಫಿಕ್ ಸಮಸ್ಯೆಯಾಗದಂತೆ ಕ್ರಮ ವಹಿಸಲು ಪತ್ರ ಬರೆಯಬೇಕು.

      ಶಿಕ್ಷಣ ಇಲಾಖೆಯು ಸಹ ಇದಕ್ಕೆ ಅಗತ್ಯ ಬೆಂಬಲ ಸೂಚಿಸಿ ಶಿಕ್ಷಕರು ಸಹ ಜಾಥಾದದಲ್ಲಿ ಭಾಗವಹಿಸಬೇಕು. ಜಿಲ್ಲೆಯ ಎಲ್ಲಾ ಪಿಡಿಒಗಳಿಗೆ ಬಾಲ ಕಾರ್ಮಿಕತೆ ಕುರಿತು ಒಂದು ಕಾರ್ಯಾಗಾರವನ್ನು ಏರ್ಪಡಿಸಿ ಅದರ ಅರಿವು ಹಾಗೂ ಅವರ ಅಧಿಕಾರ ಬಗ್ಗೆ ತಿಳಿಸಿಕೆಡಬೇಕು ಎಂದು ಕಾರ್ಮಿಕ ಅಧಿಕಾರಿ ಇಬ್ರಾಹಿಂ ಇವರಿಗೆ ಸಲಹೆ ನೀಡಿದಲ್ಲದೇ, ಕಾರ್ಯಕ್ರಮದಂದು ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಬಾಲಕಾರ್ಮಿಕತೆ ಕುರಿತು ಸಾಧಕ-ಬಾಧಕಗಳ ಬಗ್ಗೆ ಅರಿವು ಮೂಡಿಸಿ ಎಂದರು.

    ಜಿಲ್ಲೆಯಲ್ಲಿ ಮಾತ್ರವಲ್ಲದೇ ಹರಿಹರದಲ್ಲಿ ಸಹ ಬಾಲಕಾರ್ಮಿಕರು ಇಟ್ಟಿಗೆ ಭಟ್ಟಿಗಳಲ್ಲಿ ಹೆಚ್ಚು ಕಂಡುಬರುತ್ತಿದ್ದು ಹರಿಹರದಲ್ಲಿಯೂ ಒಂದು ಕಾರ್ಯಕ್ರಮ ಕೈಗೊಂಡು ಜಾಗೃತಿ ಮೂಡಿಸಬೇಕು ಎಂದರು. ಡಿ.ಎಚ್‍ಒ ಡಾ.ತ್ರಿಪುಲಾಂಭರವರು, ಅಂದಿನ ಕಾರ್ಯಕ್ರಮದಲ್ಲಿ ಬಾಲ ಕಾರ್ಮಿಕತೆಯಿಂದ ಮುಕ್ತಿ ಹೊಂದಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡವರನ್ನು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಮಾಡಿದರೆ ಒಳಿತು ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ(ಪ್ರಭಾರ), ಹೌದು ಇಂತಹ ಮಕ್ಕಳನ್ನು ಪ್ರೋತ್ಸಾಹಿಸಿ ಉತ್ತೇಜಿಸಿದರೆ ಇದರಿಂದ ಇತರರು ಬದಲಾಗಬಹುದು ಎಂದರು.

     ಸಭೆಯಲ್ಲಿ ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಜಾಕೀರ್ ಬಾಷಾ, ಕಾರ್ಮಿಕ ಅಧಿಕಾರಿ ಇಬ್ರಾಹಿಂ, ಜಿಲ್ಲಾ ಆಯುಷ್ ಅಧಿಕಾರಿ ಸಿದ್ದೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಸಭೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link