ಶಿರಾ
ಕರ್ನಾಟಕ ರಾಜ್ಯವನ್ನು ಮದ್ಯಪಾನ ಮುಕ್ತ ರಾಜ್ಯವನ್ನಾಗಿಸುವಂತೆ ಒತ್ತಾಯಿಸಿ ಬಾ ಬಾಪು 150ನೇ ವರ್ಷಾಚರಣೆಯ ಅಂಗವಾಗಿ ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಸಾವಿರಾರು ಮಹಿಳೆಯರ ನೇತೃತ್ವದಲ್ಲಿ ಬೆಂಗಳೂರು ಚಲೋ ಕಾಲ್ನಡಿಗೆ ಜಾಥಾವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ನವೋದಯ ಮಂಡಲದ ಕಾರ್ಯದರ್ಶಿ ಆರ್.ವಿ.ಪುಟ್ಟಕಾಮಣ್ಣ ತಿಳಿಸಿದರು.
ನಗರದ ನಿವೃತ್ತ ನೌಕರರ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹದಗೆಡುತ್ತಿರುವ ಸಮಾಜದ ಸ್ವಾಸ್ಥ್ಯ ಕಾಪಾಡಲು ಮತ್ತು ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಮದ್ಯ ನಿಷೇಧ ಆಂದೋಲನ ಕರ್ನಾಟಕದ ವತಿಯಿಂದ ಈ ಕಾಲ್ನಡಿಗೆ ಜಾಥಾ ನಡೆಯಲಿದೆ ಎಂದರು.
ಜ. 19 ರಂದು ಚಿತ್ರದುರ್ಗದಿಂದ ಈ ಜಾಥಾಕ್ಕೆ ಚಾಲನೆ ದೊರೆಯಲಿದ್ದು, ಜನವರಿ 30 ರಂದು ಬೆಂಗಳೂರು ತಲುಪಲಿದೆ. ಈ ನಡುವೆ 22 ರಂದು ತಾವರೆಕೆರೆಗೆ ಆಗಮಿಸುವ ಜಾಥಾ 23 ರಂದು ಶಿರಾ ನಗರಕ್ಕೆ ಆಗಮಿಸಲಿದ್ದು, ಸಾರ್ವಜನಿಕರು, ವಿವಿಧ ಸಂಘಸಂಸ್ಥೆಗಳು, ಮಹಿಳಾ ಸಂಘಗಳು ಈ ಜಾಥಾದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.
ಲಿಂಗೇಗೌಡ ಮಾತನಾಡಿ, ಇದೊಂದು ಜನಪರ ಕಾರ್ಯಕ್ರಮವಾಗಿದ್ದು, ಆಳುವ ಸರ್ಕಾರಗಳು ರಾಜ್ಯವನ್ನು ಮದ್ಯಪಾನ ಮುಕ್ತವಾಗಿ ಮಾಡಲೆಬೇಕು. ಗಣ ರಾಜ್ಯೋತ್ಸವದ ದಿನದಂದು ಸಿದ್ಧಗಂಗಾ ಮಠದಲ್ಲಿ ಬೃಹತ್ ಸಮಾವೇಶವಿದೆ. ರಾಜಕೀಯ ಮುಖಂಡರೂ ಸಮಾವೇಶದಲ್ಲಿ ಸೇರಲಿದ್ದಾರೆ. ಜ. 30 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮವೂ ಇದೆ ಎಂದರು.ಲಂಚ ಮುಕ್ತ ಕರ್ನಾಟಕ ವೇದಿಕೆಯ ಅಧ್ಯಕ್ಷ ರವಿಕೃಷ್ಣಾರೆಡ್ಡಿ, ನಿವೃತ್ತ ನೌಕರರ ಸಂಘದ ಲಿಂಗಣ್ಣ, ನವೋದಯ ಮಂಡಲದ ಲೋಕೇಶ್, ನಿವೃತ್ತ ಎಂಜಿನಿಯರ್ ಜಯರಾಮಯ್ಯ, ರಘುರಾಮ್, ಜೈರಾಮಯ್ಯ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ