ಬೆಂಗಳೂರು:
ಬೆಂಗಳೂರಿನಲ್ಲಿ ಮಹಾನಗರವನ್ನು ಎರಡು ದಿನಗಳಲ್ಲಿ ಗುಂಡಿ ಮುಕ್ತಗೊಳಿಸುವ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಬಿಬಿಎಂಪಿ ಆಡಳಿತ ವ್ಯವಸ್ಥೆಯ ಲೋಪದೋಷ ಹಾಗೂ ಗುಂಡಿ ಮುಚ್ಚುವ ಕಾಮಗಾರಿ ಪ್ರಗತಿ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರ ಸುದ್‍ದಿಗಾರರ ಜತೆ ಮಾತನಾಡಿದ ಅವರು, ಎರಡು ದಿನಗಳ ಒಳಗಾಗಿ ಗುಂಡಿ ಮುಚ್ಚಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಬಿಬಿಎಂಪಿ ಆಡಳಿತದ ಬಗ್ಗೆ ಹೈಕೋರ್ಟ್ ನ್ಯಾಯಾದೀಶರು ಲೋಪದೋಷವನ್ನು ಎತ್ತಿಹಿಡಿದು, ಕಟುವಾಗಿ ಸೂಚನೆ ನೀಡಿದ್ದಾರೆ. ಇಂತಿಷ್ಟು ದಿನದಲ್ಲಿ ರಸ್ತೆ ಗುಂಡಿ ಮುಚ್ಚಲು ಗಡುವು ನೀಡಿದ್ದು, ಈ ಕುರಿತ ಅರ್ಜಿ ಶನಿವಾರ ವಿಚಾರಣೆ ಬರಲಿದೆ. ಅಷ್ಟರೊಳಗೆ ಎಲ್ಲ ಗುಂಡಿಗಳನ್ನು ಮುಚ್ಚುವಂತೆ ಎಂಟು ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದು, ಇದರ ದಾಖಲೆಗಳನ್ನು ಬಿಬಿಎಂಪಿ ವೆಬ್‍ಸೈಟ್‍ನಲ್ಲಿಯೂ ಪ್ರಕಟಿಸುವಂತೆ ಸೂಚಿಸಲಾಗಿದೆ. ನಗರದ ಪ್ರತಿ ಬೀದಿಯ ರಸ್ತೆ ಗುಂಡಿ ಮುಚ್ಚಿರುವ ಕುರಿತು ಮಾಹಿತಿ ಹಾಕಲಾಗುತ್ತದೆ. ಇದೇ ದಾಖಲೆಯನ್ನು ಹೈಕೋರ್ಟ್‍ಗೂ ಸಲ್ಲಿಸಲಾಗುತ್ತಿದ್ದು, ದಾಖಲೆ ತಪ್ಪಿದ್ದರೆ ಸಾರ್ವಜನಿಕರು ಆಯಾ ವಲಯ ಜಂಟಿ ಆಯುಕ್ತರಿಗೆ ನೇರವಾಗಿ ಕರೆ ಮಾಡಿ ದೂರು ಸಲ್ಲಿಸಬಹುದು ಎಂದರು.
ಎರಡು ವರ್ಷಗಳಿಂದ ಟೆಂಡರ್ ಶ್ಯೂರ್ ಹಾಗೂ ವೈಟ್‍ಟಾಪಿಂಗ್ ಯೋಜನೆ ಪ್ರಗತಿಯಲ್ಲಿದ್ದು, ಈ ಎರಡು ಯೋಜನೆಗಳನ್ನು ಬೇಸಿಗೆ ಒಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. 100 ಕಿ.ಮೀ. ವ್ಯಾಪ್ತಿಯ ಈ ಯೋಜನೆಗೆ 945 ಕೋಟಿ ರು. ಅಂದಾಜಿನಲ್ಲಿ ಕೆಲಸ ಪ್ರಗತಿಯಲ್ಲಿದೆ. ಕೆಲ ರಸ್ತೆಗಳಲ್ಲಿ ಸಂಚಾರದ ಒತ್ತಡದಿಂದ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ವೈಟ್‍ಟಾಪಿಂಗ್ ಯೋಜನೆಗೆ ಅನುಮತಿ ಪಡೆಯುವ ಸಂಬಂಧ ಪೆÇಲೀಸರ ಅನುಮತಿ ಪಡೆಯುವ ಸಂಬಂಧ ಸಭೆ ನಡೆಸಲಾಗುವುದು. ಪ್ರಸ್ತುತ ಪ್ರಾರಂಭಿಸಿರುವ ಈ ಯೋಜನೆ ಬೇಸಿಗೆ ಆರಂಭಕ್ಕೆ ಮುನ್ನ ಪೂರ್ಣಗೊಳ್ಳಲಿದೆ ಎಂದರು.
ನಗರದಲ್ಲಿ ಪ್ರಸ್ತುತ 665 ಕೋಟಿ ರೂ ವೆಚ್ಚದಲ್ಲಿ 63 ಕಿ.ಮೀ. ರಸ್ತೆಯ ಎಂಟು ಪ್ಯಾಕೇಜ್‍ನ ಟೆಂಡರ್ ಕರೆಯಲಾಗಿದೆ. ಈ ಹಂತದಲ್ಲಿ 41 ರಸ್ತೆಗಳನ್ನು ವೈಟ್‍ಟಾಪಿಂಗ್ ಮಾಡಲಾಗುತ್ತದೆ. ತ್ಯಾಜ್ಯ ನಿರ್ವಹಣೆ ಸಂಬಂಧ ಎರಡು ವರ್ಷದಿಂದ ಟೆಂಡರ್ ಕರೆದಿರಲಿಲ್ಲ. ಇನ್ನೊಂದು ತಿಂಗಳೊಳಗಾಗಿ ಹೊಸದಾಗಿ ಟೆಂಡರ್ ಆಹ್ವಾನಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕಗಳನ್ನು ಪ್ರತಿ ವಲಯದಲ್ಲೂ 10 ತಿಂಗಳೊಳಗಾಗಿ ತೆರೆಯಲಾಗುವುದು. ಪ್ರತಿ ಬೀದಿಯಲ್ಲಿ ಎಲ್‍ಇಡಿ ಬಲ್ಬ್ ಅಳವಡಿಸುವ ಸಂಬಂಧ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಹೊಸದಾಗಿ ಟೆಂಡರ್ ಕರೆಯಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗುವುದು. 800 ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಈ ಯೋಜನೆಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ಇದರಿಂದ ಶೇ.80 ವಿದ್ಯುತ್ ಉಳಿತಾಯವಾಗಲಿದೆ. ಇದರ ನಿರ್ವಹಣೆಗೆ ಪ್ರತ್ಯೇಕ ನಿಯಂತ್ರಣ ಕೊಠಡಿ ಇರಲಿದ್ದು, ಪ್ರತಿ ಬೀದಿಯನ್ನು ನಿರ್ವಹಣೆ ಮಾಡುತ್ತಾರೆ ಎಂದರು.
ಗಾಂಧೀನಗರ ಹಾಗೂ ಸ್ವಾತಂತ್ರ್ಯ ಉದ್ಯಾನವನದಲ್ಲಿನ ಮಲ್ಟಿಪಾರ್ಕಿಂಗ್ ಕಾಮಗಾರಿಯನ್ನು ಶೀಘ್ರವೇ ಮುಗಿಸಲು ಸೂಚನೆ ನೀಡಿದ್ದು, ಜೆ.ಸಿ. ರಸ್ತೆಯಲ್ಲಿನ ಪಾರ್ಕಿಂಗ್‍ನ್ನು ಎರಡು ಮಹಡಿಗಳಿಗೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಬಿಬಿಎಂಪಿ ವಿಭಜನೆ ಮಾಡುವ ತೀರ್ಮಾನ ಸಂಪೂರ್ಣವಾಗಿಲ್ಲ. ಹೆಚ್ಚಿನಹೊರೆ ಆಯುಕ್ತರ ಒಬ್ಬರ ಮೇಲೇ ಬೀಳುತ್ತಿದೆ. ಬಿ.ಎಸ್ ಪಾಟೀಲ್ ವರದಿ ಪ್ರಕಾರ ಆಡಳಿತ ವಿಭಜನೆ ಮಾಡಲು ಸಲಹೆ ನೀಡಿದ್ದಾರೆ. ಈ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ. ಬಿಬಿಎಂಪಿ ಮಹಿಳಾ ಪೌರಕಾರ್ಮಿಕರು ಮೀಟು ಅಭಿಯಾನದಡಿ ಆರೋಪ ಮಾಡುವರು ನೇರವಾಗಿ ದೂರ ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ