ಬೆಂಗಳೂರಿಗೆ ಪ್ರತ್ಯೇಕ ಎಟಿಎಸ್ ರಚನೆ : ಬಸವರಾಜ ಬೊಮ್ಮಾಯಿ

ಬೆಂಗಳೂರು

      ರಾಜಧಾನಿ ಬೆಂಗಳೂರು ಉಗ್ರರ ನೆಲೆಯಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಾಹಿತಿ ನೀಡಿದ ಬೆನ್ನಲ್ಲೇ ಮಂಗಳವಾರ ನಗರದ ಕಮೀಷನರೇಟ್‌ನ ಹಿರಿಯ ಪೊಲೀಸ್ ಅಧಿಕಾರಿಗಳ ಪರಿಶೀಲನಾ ಸಭೆ ನಡೆಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿಗೆ ಸೀಮಿತವಾಗಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ವನ್ನು ಆರಂಭಿಸುವುದನ್ನು ಘೋಷಿಸಿದ್ದಾರೆ.

     ಬೆಂಗಳೂರನ್ನು ಉಗ್ರರು ಬಳಸಿಕೊಂಡು ೨೦ ರಿಂದ ೨೨ ಅಡುಗುತಾಣಗಳನ್ನು ಮಾಡಿಕೊಂಡಿದ್ದಾರೆ ಎನ್ನುವ ಎನ್‌ಐಎ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಎಟಿಎಸ್ ಅನ್ನು ಸ್ಥಾಪಿಸಲಾಗುವುದು ಅಲ್ಲದೇ ರಾಜ್ಯದ ಸೂಕ್ಷ್ಮ ಹಾಗೂ ಕರಾವಳಿ ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ನಗರದಲ್ಲಿ ನವೆಂಬರ್ ೧ ರಿಂದಲೇ ನಿಗ್ರಹ ದಳ ಕಾರ್ಯಾಚರಣೆ ನಡೆಸಲಿದ್ದು ರಾಷ್ಟ್ರೀಯ ತನಿಖಾ ದಳ ಸೇರಿದಂತೆ, ಕೇಂದ್ರದ ಪಡೆಗಳ ಜೊತೆ ಸಂಪರ್ಕ ಸಾಧಿಸಿ, ಉಗ್ರಗಾಮಿ ಚಟುವಟಿಕೆಗಳು ತಲೆಎತ್ತದಂತೆ, ಕ್ರಮ ಕೈಗೊಳ್ಳಬೇಕು, ನಿರಂತರ ಜನನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

    ಅಡಗುತಾಣಗಳ ಮಾಹಿತಿ ಹಿನ್ನೆಲೆಯಲ್ಲಿ ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾಲ್‌ಗಳು, ಮಾರುಕಟ್ಟೆ, ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಿ ಕಟ್ಟೆಚ್ಚರ ವಹಿಸಲಾಗಿದೆ.ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳ ಬಗ್ಗೆ ತೀವ್ರ ನಿಗಾವಹಿಸಲಾಗಿದೆ ಎಂದು ಹೇಳಿದರು.

    ಸಂಶಯಾಸ್ಪದವಾಗಿ ಯಾವುದೇ ವ್ಯಕ್ತಿ ಕಂಡುಬಂದರೂ, ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಬೇಕು. ಶಂಕಿತರ ಮೇಲೆ ಹದ್ದಿನ ಕಣ್ಣಿಡಬೇಕು ಎಂದು ನಗರ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಸೈಬರ್ ಸೆಲ್ (ಸಿಇಎನ್)ಆರಂಭ

    ನಗರದಲ್ಲಿ ಆನ್ ಲೈನ್ ವಹಿವಾಟು ಹೆಚ್ಚಿದಂತೆಲ್ಲಾ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ನಗರದಲ್ಲಿನ ಜನಸಂದಣಿ ಹೆಚ್ಚಿದಂತೆಲ್ಲಾ ಮಾದಕ ವಸ್ತುಗಳ ಜಾಲ ಹಾಗೂ ಆರ್ಥಿಕ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಗರದ ಎಲ್ಲಾ ೮ ಮಂದಿ ಡಿಸಿಪಿ ಕಚೇರಿಗಳ ವ್ಯಾಪ್ತಿಯಲ್ಲಿ ಸೈಬರ್ ಸೆಲ್ (ಸಿಇಎನ್) ಸ್ಥಾಪಿಸಿ, ಆರ್ಥಿಕ ಅಪರಾಧಗಳು, ಮಾದಕ ವಸ್ತುಗಳ ಜಾಲ ಹಾಗೂ ಆನ್ ಲೈನ್ ಅಪರಾಧಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

     ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಇದ್ದ ಒಂದು ಸೈಬರ್ ಸೆಲ್ ಅನ್ನು ಎಲ್ಲಾ ಡಿಸಿಪಿ ಕಚೇರಿಗಳಲ್ಲೂ ತೆರೆದು ಪ್ರತ್ಯೇಕ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಅದಕ್ಕೆ ಡಿಸಿಪಿಯವರು ಮುಖ್ಯಸ್ಥರಾಗಿರುತ್ತಾರೆ ಎಂದು ಹೇಳಿದರು.

ವಿಶೇಷ ದಾಳಿ

    ನಗರದಲ್ಲಿ ಗ್ಯಾಂಬ್ಲಿಂಗ್, ಬೆಟ್ಟಿಂಗ್, ಮಾದಕ ವಸ್ತುಗಳ ಜಾಲ ಹೆಚ್ಚುತ್ತಿದ್ದು, ಇವುಗಳ ಬಗ್ಗೆ ನಿಗಾವಹಿಸಬೇಕು. ಜನಸಾಮಾನ್ಯರು ಇಂತಹ ಕೃತ್ಯಗಳ ಬಗ್ಗೆ ದೂರು ನೀಡುವ ಮುನ್ನವೇ ಪೊಲೀಸರು ಎಚ್ಚೆತ್ತು ತಮ್ಮ ವ್ಯಾಪ್ತಿಯಲ್ಲಿನ ಕಾನೂನುಬಾಹಿರ ಅಪರಾಧ ಚಟುವಟಿಕೆಗಳನ್ನು ಮಟ್ಟಹಾಕಲು ಸೂಚನೆ ನೀಡಲಾಗಿದೆ ಎಂದರು.

   ಮಾದಕ ವಸ್ತುಗಳ ಜಾಲದ ಫ್ಲೆಂಡರ್‌ಗಳು ಡೀಲರ್‌ಗಳ ಬಗ್ಗೆ ಎಚ್ಚರ ವಹಿಸಬೇಕು. ಶಾಲಾ – ಕಾಲೇಜು, ಹಾಸ್ಟೆಲ್‌ಗಳು, ಯುವಕರು ಸೇರುವ ಪ್ರದೇಶಗಳ ಮೇಲೆ ವಿಶೇಷ ದಾಳಿ ನಡೆಸಿ, ಮಾದಕ ವಸ್ತು ನಿಗ್ರಹಕ್ಕೆ ಮುಲಾಜಿಲ್ಲದೆ, ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕಾಲಮಿತಿಯಲ್ಲಿ ಪತ್ತೆ

    ನಗರದಲ್ಲಿ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಅಪರಾಧಗಳ ಪತ್ತೆಗೆ ಕಾಲಮಿತಿ ಹಾಕಿಕೊಳ್ಳಬೇಕು. ಯಾವುದೇ ಅಪರಾಧ ಪ್ರಕರಣಗಳನ್ನಾಗಿ ತ್ವರಿತವಾಗಿ ಪತ್ತೆಹಚ್ಚಿ, ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸುವಂತೆ ಸೂಚಿಸಲಾಗಿದೆ ಎಂದರು.

    ನಗರದಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಭೇದಿಸಿ, ನಗರ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ, ನಗರದಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳು ಇದ್ದಾರೆ. ಕಾನೂನು ವಿರೋಧಿ ಚಟುವಟಿಕೆಗಳನ್ನು ಮಟ್ಟಹಾಕುವಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ನಗರದಲ್ಲಿ ಅಪರಾಧವೆಸಗಿ ಕೇವಲ ಎರಡೂವರೆ ಗಂಟೆಗಳ ಒಳಗೆ ಬೇರೊಂದು ರಾಜ್ಯಕ್ಕೆ ಪರಾರಿಯಾಗುವ ಅವಕಾಶವಿದೆ. ಅಂತಹ ಸಂದರ್ಭದಲ್ಲೂ ಜಾಗ್ರತೆ ವಹಿಸಿ, ಪರಿಶ್ರಮಪಟ್ಟು ಅಪರಾಧಗಳನ್ನು ಪತ್ತೆಹಚ್ಚುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಹೇಳಿದರು.

    ನಗರದಲ್ಲಿ ರೌಡಿ ನಿಗ್ರಹ ದಳವನ್ನು ಬಲಗೊಳಿಸಿ, ಎಲ್ಲಿಯೂ ರೌಡಿ ಚಟುವಟಿಕೆಗಳು ನಡೆಯದಂತೆ ಸೂಚನೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಸುಗಮಗೊಳಿಸುವುದರ ಜೊತೆಗೆ ನಗರವನ್ನು ಸುಂದರಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಪೊಲೀಸರ ಜೊತೆ ಜನಸಾಮಾನ್ಯರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

    ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಉಮೇಶ್ ಕುಮಾರ್, ಮುರುಗನ್, ಹೇಮಂತ್ ನಿಂಬಾಳ್ಕರ್, ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap