ಶಿರಾ
ತಮ್ಮದೇ ಆದ ಮಾತೃಭಾಷೆಯನ್ನು ಈವರೆಗೂ ಉಳಿಸಿಕೊಂಡು ಬರುತ್ತಾ ಎಲ್ಲಾ ಜಾತಿಗಳೊಂದಿಗೆ ತಮ್ಮನ್ನು ತಾವು ಗುರ್ತಿಸಿಕೊಳ್ಳಲು ಕ್ರಿಯಾಶೀಲ ಪ್ರಯತ್ನ ಮಾಡುತ್ತಾ ಬಂದ ಬಂಜಾರ ಸಮುದಾಯ ತನ್ನ ಆರ್ಥಿಕ ಸಂಕಷ್ಟದ ಬದುಕಿನಲ್ಲೂ ತಮ್ಮದೇ ಆದ ಹಲವು ಸಮಸ್ಯೆಗಳನ್ನು ಈಡೇರಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದು ಈ ಸಮುದಾದ ಸಾಂಸ್ಕತಿಕ ಪರಂಪರೆಯನ್ನು ಉಳಿಸುವ ಕೆಲಸ ಮೊದಲಾಗಬೇಕು ಎಂದು ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.
ನಗರದ ತಹಶೀಲ್ದಾರ್ ಕಛೇರಿಯಲ್ಲಿ ಸಂತ ಶ್ರೀ ಸೇವಾಲಾಲ್ ಜಯಂತೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೃಷಿ ಕಾಯಕದೊಟ್ಟಿಗೆ ಕೂಲಿಯನ್ನು ಮಾಡಿ ತಾಂಡಾಗಳಲ್ಲಿಯೇ ವಾಸಿಸುತ್ತಾ ಸಮಾಜದ ಮುಖ್ಯ ವಾಹಿನಿಗೆ ಬರಲು ಈ ಸಮಾಜ ಮುಂದಾಗಿದ್ದು ಸಮಾಜದ ಮೂಲ ಸಮಸ್ಯೆಗಳಿಗೆ ಸರ್ಕಾರಗಳು ಕೂಡಾ ಸ್ಪಂಧಿಸಬೇಕಿದೆ ಎಂದರು.
ಈಗಲೂ ನಮ್ಮ ಶಿರಾ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಬಂಜಾರ ಸಾಂಸ್ಕತಿಕ ನೆಲೆಗಟ್ಟು ಅಚ್ಚಳಿಯದೇ ಉಳಿದಿದ್ದು ಅವರ ಭಾಷೆ ಹಾಗೂ ಅವರ ನೆಲೆಗಟ್ಟನ್ನು ದಾಖಲಿಸುವ ಕೆಲಸಗಳಾಗಬೇಕು ಎಂದು ಶಾಸಕ ಸತ್ಯನಾರಾಯಣ್ ತಿಳಿಸಿದರು.ಮಾಜಿ ಶಾಸಕ ಶಿವಮೂರ್ತಿ ನಾಯ್ಕ ಮಾತನಾಡಿ ಹಟ್ಟಿ, ಹಾಡಿ, ತಾಂಡಾಗಳಲ್ಲಿ ವಾಸಿಸುವ ಲಂಬಾಣಿ, ಯಾದವ ಜನಾಂಗ, ಹಕ್ಕಿಪಿಕ್ಕಿ, ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಕೆಲಸ ಈ ಹಿಂದಿನ ಸರ್ಕಾರದಲ್ಲಿ ನಡೆದಿತ್ತು.
ಇಂತಹ ಹಟ್ಟಿ, ತಾಂಡಾಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಯಬೇಕಾದಲ್ಲಿ ಪೋಷಕರು ಮಕ್ಕಳನ್ನು ಶೈಕ್ಷಣಿಕವಾಗಿ ಪ್ರಗತಿಯತ್ತ ಕೊಂಡೊಯ್ಯಬೇಕು ಎಂದರು.ನಗರಸಭೆಯ ಅಧ್ಯಕ್ಷ ಅಮಾನುಲ್ಲಾಖಾನ್ ಮಾತನಾಡಿ ಆರ್ಥಿಕವಾಗಿ ಸಂಕಷ್ಟಕ್ಕೊಳಗಾದ ಸಮುದಾಯಗಳನ್ನು ಗುರ್ತಿಸುವ ಕೆಲಸವಾಗಬೇಕು. ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಮುಂದಾಗಬೇಕು. ಸಂತ ಸೇವಾಲಾಲ್ ಜಯಂತೋತ್ಸವ ಒಂದು ಸಮುದಾಯದ ಸಾಂಸ್ಕತಿಕ ಪರಂಪರೆಯನ್ನು ಉಳಿಸುವಂತಹ ಕೆಲಸವಾಗಿದೆ ಎಂದರು.
ತಾ.ಪಂ. ಸದಸ್ಯೆ ಶ್ರೀಮತಿ ಮಂಜುಳಾಬಾಯಿ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಶ್ರೀಮತಿ ಚಂಪಕಮಾಲ, ಶ್ರೀಮತಿ ಸರೋಜಾ ಎಸ್.ನಾಯ್ಕ, ತಾ.ಪಂ. ಸದಸ್ಯ ಮಲ್ಲಾನಾಯ್ಕ, ಶೇಷಾನಾಯ್ಕ, ಶ್ರೀ ಸೇವಾಲಾಲ್ ಲಂಬಾಣಿ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರಾನಾಯ್ಕ, ಗೌರವಾಧ್ಯಕ್ಷ ರಾವ್ಯಾನಾಯ್ಮ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಾನಾಯ್ಕ, ಖಜಾಂಚಿ ಮೀಟ್ಯಾನಾಯ್ಕ, ಸಂಘಟನಾ ಕಾರ್ಯದರ್ಶಿ ಭೀಮಾನಾಯ್ಕ, ದೇವ್ಲಾನಾಯ್ಕ, ಪರಶುರಾಮನಾಯ್ಕ, ನಾನ್ಯಾನಾಯ್ಕ, ಮೇಘ್ಯಾನಾಯ್ಕ, ನಗರಸಭಾ ಸದಸ್ಯೆ ರೇಣುಕಮ್ಮ, ಶಿರಾ ರವಿ, ಎಸ್.ಎಲ್.ಗೋವಿಂದರಾಜು ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ