ಜೇಬಿಗೆ ಕತ್ತರಿ ಹಾಕುತ್ತಿರುವ ಬ್ಯಾಂಕುಗಳು(ಭಾಗ-2)

ಖಾತೆಯಲ್ಲಿ ಹಣ ಕಡಿಮೆ ಇದ್ದರೂ ದಂಡ: ಚೆಕ್ ವಾಪಸ್ ಆದರೂ ಶುಲ್ಕ 
ತುಮಕೂರು
    ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವ್ಯವಹಾರ ಮಾಡುವವರು ಅಸಮಾಧಾನ ಹೊರ ಹಾಕಲು ಅನೇಕ ಕಾರಣಗಳಿವೆ. ಅಲ್ಲಿ ಸಮರ್ಪಕ ಉತ್ತರ ಸಿಗದೇ ಇರುವುದು, ಸಣ್ಣಪುಟ್ಟ ಕೆಲಸಗಳಿಗೂ, ಸೌಲಭ್ಯಗಳಿಗೂ ಶುಲ್ಕ ವಿಧಿಸುವುದು ಇವೆಲ್ಲವುಗಳಿಂದ ಕೆಲವರು ಅಸಮಧಾನಗೊಂಡಿದ್ದು, ವಿಧಿ ಇಲ್ಲ ಎಂಬಂತೆ ವ್ಯವಹಾರ ಮುಂದುವರೆಸುತ್ತಿದ್ದಾರೆ.
ಚಾಲ್ತಿ ಖಾತೆ: 
    ಚಾಲ್ತಿ ಖಾತೆಯನ್ನು ತೆರೆದವರು ಕನಿಷ್ಠ 10 ಸಾವಿರ ರೂಗಳನ್ನು ಖಾತೆಯಲ್ಲಿ ಇಡದೇ ಹೋದರೆ ಅದಕ್ಕೆ 590 ರೂಗಳನ್ನು ವೆಚ್ಚದ ರೂಪದಲ್ಲಿ ವಿಧಿಸಲಾಗುತ್ತದೆ. ಶೇ.18ರಷ್ಟು ಜಿಎಸ್‍ಟಿ ಒಳಗೊಂಡಿರುತ್ತದೆ. ಒಂದು ತಿಂಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಹಣವನ್ನು ಉಳಿತಾಯ ಖಾತೆಗೆ ಜಮಾ ಮಾಡಿ ಒಂದು ದಿನದ ನಂತರ ವಾಪಸ್ಸು ಪಡೆದುಕೊಂಡಲ್ಲಿ ಆ ತಿಂಗಳಲ್ಲಿ ಕನಿಷ್ಠ ನಿರ್ವಹಣೆಗೆ ಶುಲ್ಕವಾಗುವುದಿಲ್ಲ.
ಡಿಮ್ಯಾಂಡ್ ಡ್ರಾಫ್ಟ್‍ಗಳಿಗೆ ಹೆಚ್ಚಿದ ಶುಲ್ಕ
     ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾಯಿಸಬಹುದಾಗಿದೆ. ಕೆಲವೊಮ್ಮೆ ಹಣವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ನೀಡಲಾಗುತ್ತದೆ. ಅದಕ್ಕೆ ಈ ಮುಂಚೆ ಇದ್ದ s ಸೇವಾ ಶುಲ್ಕ ದುಪ್ಪಟ್ಟಾಗಿದೆ. 5000 ರೂ ವರೆಗಿನ ಡಿಮ್ಯಾಂಡ್ ಡ್ರಾಫ್ಟ್‍ಗೆ 29.5 ರೂ, 5000ರೂ ದಿಂದ 10,000 ವರೆಗೆ 59ರೂ, 10 ಸಾವಿರದಿಂದ 1 ಲಕ್ಷವರೆಗೆ ಡಿಡಿ ಪಡೆಯುವುದಾದರೆ ಒಂದು ಸಾವಿರಕ್ಕೆ 5.10 ಪೈಸೆ ಹಣ ಅಥವಾ ಕನಿಷ್ಠ 600ರೂ ಹಾಗೂ ಗರಿಷ್ಠ 2000 ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. 
ನೆಫ್ಟ್ ಅಥವಾ ಆರ್‍ಟಿಜಿಎಸ್‍ನಲ್ಲಿ ಗೊಂದಲ
     ಈ ಮುಂಚೆ ನೆಫ್ಟ್ ಹಾಗೂ ಆರ್‍ಟಿಜಿಎಸ್‍ನಲ್ಲಿ ಹಣವನ್ನು ಒಂದು ಖಾತೆಯಿಂದ ಇತರೆ ಖಾತೆಗೆ ಜಮಾವಣೆ ಮಾಡಬೇಕಾದರೆ ನಿರ್ದಿಷ್ಠ ಮೊತ್ತವನ್ನು ಭರಿಸಬೇಕಿತ್ತು. 2019ರ ಜುಲೈ 1 ರಿಂದ ಬದಲಾದ ಸೇವಾ ಶುಲ್ಕದ ಪಟ್ಟಿಯಲ್ಲಿ ನೀಡಿದಂತೆ ಆನ್‍ಲೈನ್ ಮೂಲಕ ಹಣ ವರ್ಗಾವಣೆ ಯಾವುದೇ ಶುಲ್ಕ ಭರಿಸಬೇಕಿಲ್ಲ. ಆದರೂ ಕೆಲವೊಂದು ಬ್ಯಾಂಕುಗಳು ಈ ರೀತಿಯ ಹಣ ವರ್ಗಾವಣೆಗೆ ಇನ್ನೂ ಸಹ ಶುಲ್ಕ ವಿಧಿಸುತ್ತಿರುವುದು ಕಂಡುಬರುತ್ತಿದೆ.
    ಈ ಬಗ್ಗೆ ಸಮರ್ಪಕ ಮಾಹಿತಿಯನ್ನೂ ನೀಡುವುದಿಲ್ಲ. ಈಗಾಗಲೇ ನೆಫ್ಟ್ ಹಾಗೂ ಆರ್‍ಟಿಜಿಎಸ್ ವ್ಯವಹಾರಗಳಿಗೆ ಶುಲ್ಕ ತೆಗೆದು ಹಾಕಲಾಗಿದೆ ಎಂದು ಬ್ಯಾಂಕುಗಳಿಗೆ ತಿಳಿಸಿದರೂ ಅದನ್ನು ಕೇಳಿಸಿಕೊಳ್ಳುವ ತಾಳ್ಮೆಯೂ ಅಲ್ಲಿರುವವರಿಗೆ ಇರುವುದಿಲ್ಲ. ಜುಲೈ 1 ರಿಂದ ವಾಸ್ತವವಾಗಿ ಇಂತಹ ವ್ಯವಹಾರಗಳಿಗೆ ಶುಲ್ಕ ವಿಧಿಸಬಾರದು. ಆದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿಯೂ ಕೆಲವು ಬ್ಯಾಂಕುಗಳು
ಇದಕ್ಕೆ ದರ ವಿಧಿಸುತ್ತಲೇ ಬಂದಿವೆ. ಇದನ್ನು ಪ್ರಶ್ನೆ ಮಾಡುವವರು ಯಾರು?
      ಒಂದು ವೇಳೆ ಬ್ಯಾಂಕಿನ ಮೂಲಕ  ಹಣ ವರ್ಗಾವಣೆ ಮಾಡುವುದಾದರೆ 10 ಸಾವಿರ ರೂಗಳ ವರೆಗೆ 2.36 ರೂ., 10,000 ರೂ.ಗಳಿಂದ 1 ಲಕ್ಷ ರೂ.ಗಳವರೆಗೆ 4.72 ರೂ., 1 ಲಕ್ಷ ರೂಗಳಿಂದ 2 ಲಕ್ಷದವರೆಗೆ 14.16 ರೂ., 2 ಲಕ್ಷ ರೂ.ಗಳಿಂದ 5ಲಕ್ಷ ರೂಗಳವರೆಗೆ ವರ್ಗಾವಣೆ ಮಾಡಿದರೆ 23.06 ರೂ., 5 ಲಕ್ಷಕ್ಕೂ ಮೇಲ್ಪಟ್ಟು ವರ್ಗಾವಣೆ ಮಾಡಿದರೆ 47 ರೂ. ಶುಲ್ಕ ಭರಿಸಬೇಕಾಗುತ್ತದೆ. (ಇದೆಲ್ಲದಕ್ಕೂ ಜಿಎಸ್‍ಟಿ ಒಳಗೊಂಡಿದೆ)
     ಇದು ಬ್ಯಾಂಕ್‍ಗಳಲ್ಲಿ ಸೇವಾ ಶುಲ್ಕದ ಬಗ್ಗೆ ಹಾಕಲಾದ ಚಾರ್ಟ್‍ನಲ್ಲಿರುವ ಮಾಹಿತಿ. ಆದರೆ ಜುಲೈ 5ರಂದು ಕೇಂದ್ರ ಸರ್ಕಾರದದ ಬಜೆಟ್‍ನಲ್ಲಿ ನೆಫ್ಟ್ ಹಾಗೂ ಆರ್‍ಟಿಜಿಎಸ್‍ನಲ್ಲಿ ಸೇವಾ ಶುಲ್ಕ ರದ್ದು ಮಾಡಲಾಗಿದೆ. ಇದಕ್ಕೆ ಯಾವುದೇ ರೀತಿಯ ಸೇವಾ ಶುಲ್ಕ ಅನ್ವಯಿಸುವುದಿಲ್ಲ ಎಂದು ಮಾಹಿತಿ ಇದೆ. ಇದು ಒಂದು ರೀತಿಯಲ್ಲಿ ಗೊಂದಲವನ್ನು ಸೃಷ್ಠಿ ಮಾಡಿದಂತಾಗಿದೆ. 
ಉಳಿತಾಯ ಖಾತೆ ಮುಚ್ಚಲು ಶುಲ್ಕ
     ಮೂಲಭೂತ ಹಾಗೂ ಸಣ್ಣ ಉಳಿತಾಯ ಖಾತೆಗಳನ್ನು ಹೊರತುಪಡಿಸಿ ಇತರೆ ಉಳಿತಾಯ ಖಾತೆಗಳನ್ನು ಮುಚ್ಚಬೇಕಾದರೆ ಖಾತೆ ತೆರದ 14 ದಿನಗಳೊಳಗೆ ಅದೇ ಖಾತೆಯನ್ನು ಮುಚ್ಚಿದರೆ ಯಾವುದೇ ಶುಲ್ಕ ಭರಿಸಬೇಕಿಲ್ಲ. 14ದಿನಗಳ ನಂತರದಿಂದ 6 ತಿಂಗಳ ಸಮಯದಲ್ಲಿ ಮುಚ್ಚಿದರೆ 590ರೂ ಸೇವಾ ಶುಲ್ಕ ಭರಿಸಬೇಕು. ಒಂದು ವೇಳೆ 6 ತಿಂಗಳ ನಂತರ ಒಂದು ವರ್ಷದ ಒಳಗೆ ಖಾತೆಯನ್ನು ಮುಚ್ಚುವುದಾದರೆ ಅದಕ್ಕೆ 1180 ರೂ ಭರಿಸಬೇಕಾಗುತ್ತದೆ. 
ಸುರಕ್ಷಿತ ಲಾಕರ್‍ಗಳಿಗೆ ತಗುಲುವ ವೆಚ್ಚ
      ನಮ್ಮ ಯಾವುದೇ ದಾಖಲಾತಿಗಳಾಗಿರಬಹುದು ಅಥವಾ ಒಡವೆಗಳಾಗಿರಬಹುದು. ಇನ್ನಾವುದೇ ಪ್ರಮುಖವಾದ ವಸ್ತುಗಳಾಗಿರಬಹುದು ಅವುಗಳನ್ನು ಬ್ಯಾಂಕ್‍ಗಳಲ್ಲಿನ ಸುರಕ್ಷಿತ ಲಾಕರ್‍ಗಳಲ್ಲಿ ಇಡಲು ನಿರ್ದಿಷ್ಠ ಮೊತ್ತವನ್ನು ನಿಗದಿ ಮಾಡಲಾಗಿದೆ. ಹೊಸ ಪಟ್ಟಿಯಂತೆ ಅದರ ಸೇವಾ ಶುಲ್ಕ ನೋಡುವುದಾದರೆ ಮೆಟ್ರೋನಗರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಒಂದು ವರ್ಷಕ್ಕೆ ಸಣ್ಣ ಲಾಕರ್‍ಗೆ 1770 ರೂ, ಮಧ್ಯಮ ಲಾಕರ್‍ಗೆ 354ರೂ, ದೊಡ್ಡ ಲಾಕರ್‍ಗೆ 7080, ಅತಿ ದೊಡ್ಡ ಲಾಕರ್‍ಗೆ 10,620 ಸೇವಾ ಶುಲ್ಕವಾಗುತ್ತದೆ. 
      ಅಲ್ಲದೆ ಒಂದು ವರ್ಷದಲ್ಲಿ 12 ಬಾರಿ ಉಚಿತವಾಗಿ ಈ ಲಾಕರ್‍ಗಳನ್ನು ವೀಕ್ಷಿಸಬಹುದು. ಅದರ ನಂತರ ಒಂದು ಬಾರಿ ವೀಕ್ಷಣೆಗೆ 1180 ನಂತೆ ವೆಚ್ಚ ಭರಿಸಬೇಕಾಗುತ್ತದೆ.  ಒಂದು ವೇಳೆ ಒಂದು ವರ್ಷದ ಸೇವಾವೆಚ್ಚ ಕಟ್ಟದೇ ಹೋದ ಪಕ್ಷದಲ್ಲಿ ಮೂರು ತಿಂಗಳಿಗೆ ಒಂದು ವರ್ಷದ ವೆಚ್ಚಕ್ಕೆ ಶೇ.10ರಷ್ಟು ಹಣ ಸಂದಾಯ ಮಾಡಬೇಕು. ಆರು ತಿಂಗಳಿಗೆ ಶೇ.20ರಷ್ಟು, ಒಂಭತ್ತು ತಿಂಗಳಿಗೆ ಶೇ.30 ರಷ್ಟು, ಹನ್ನೆರಡು ತಿಂಗಳಿಗೆ ಶೇ.40ರಷ್ಟು ವೆಚ್ಚ ಸಂದಾಯ ಮಾಡಬೇಕಾಗುತ್ತದೆ. 
     ಲಾಕರ್ ನೋಂದಣಿ ಮಾಡಿಸಿಕೊಳ್ಳಲು ಸಣ್ಣ ಮತ್ತು ಮಧ್ಯಮ ಲಾಕರ್‍ಗಳಿಗೆ 590ರೂ ಪಡೆದರೆ, ದೊಡ್ಡ ಮತ್ತು ಅತಿ ದೊಡ್ಡ ಲಾಕರ್‍ಗಳ ನೊಂದಣಿಗೆ 1180 ರೂ ಹಣವನ್ನು ನೀಡಬೇಕಾಗುತ್ತದೆ. ಒಂದು ವೇಳೆ ನೊಂದಣಿ ಮಾಡಿಸಿಕೊಂಡ ಲಾಕರ್‍ನ ಬೀಗ ಕಳೆದುಕೊಂಡಲ್ಲಿ ಅಥವಾ ವಾರ್ಷಿಕ ಬಾಡಿಗೆ ಕಟ್ಟದೇ ಹೋದಲ್ಲಿ ಲಾಕರ್ ತೆರೆಯಲು 1180ರೂಗಳ ಮೊತ್ತವನ್ನು ಸಲ್ಲಿಸಬೇಕಾಗುತ್ತದೆ. 
ಬ್ಯಾಂಕ್‍ಗೆ ನೀಡಿದ ಚೆಕ್ ವಾಪಸ್ಸಾದರೆ…
     ಯಾವುದೋ ಒಂದು ಖಾತೆಗೆ ಹಣ ಸಂದಾಯ ಮಾಡಬೇಕಿರುತ್ತದೆ. ಅದಕ್ಕೆ ಚೆಕ್ ಮೂಲಕವಾಗಿ ಹಣ ಸಂದಾಯ ಮಾಡಲು ನೀಡಿರುತ್ತಾರೆ. ಆದರೆ ಚೆಕ್ ನೀಡಿದ ವ್ಯಕ್ತಿಯ ಖಾತೆಯಲ್ಲಿ ನಿರ್ದಿಷ್ಠ ಮೊತ್ತ ಇರುವುದಿಲ್ಲ ಅಂತಹ ಸಮಯದಲ್ಲಿ ಉಳಿತಾಯ ಖಾತೆ ಜಾಗೂ ಚಾಲ್ತಿ ಖಾತೆ ಎರಡಕ್ಕೂ 590 ರೂ. ಶುಲ್ಕ ಭರಿಸಬೇಕು. ಒಂದು ವೇಳೆ ಸಹಿ ಸರಿಯಿಲ್ಲದ ಕಾರಣ ಅಥವಾ ದಿನಾಂಕ ತಪ್ಪಾಗಿ ನಮೂದು ಮಾಡಿರುವುದು, ಹೆಸರು ಸರಿಯಾಗಿ ಬರೆಯದೇ ಇರುವುದು ಸೇರಿದಂತೆ ಇನ್ನಿತರ ತಾಂತ್ರಿಕ ದೋಷಗಳು ಕಂಡು ಬಂದು ಚೆಕ್ ವಾಪಸ್ಸಾದರೆ ಅದಕ್ಕೆ 177 ರೂ ಶುಲ್ಕ ಭರಿಸಬೇಕು. ಹೀಗೆ ಸಣ್ಣಪುಟ್ಟ ತಾಂತ್ರಿಕ ದೋಷಗಳಿಗೂ ಶುಲ್ಕ ಭರಿಸಬೇಕಾದ ಪರಿಸ್ಥಿತಿ ಇದೆ. 
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap