ತುರುವೇಕೆರೆ
ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಅಧಿಕಾರಿಗಳು ರೈತರ ಸಾಲ ವಸೂಲಾತಿ ಕಾರ್ಯಕ್ರಮವನ್ನು ಕೈ ಬಿಡಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ ಒತ್ತಾಯಿಸಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ಮುಂಭಾಗ ಸೋಮವಾರ ರೈತರೊಂದಿಗೆ ಬ್ಯಾಂಕ್ ನೀತಿಯನ್ನು ವಿರೋಧಿಸಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಲಾಕ್ ಡೌನ್ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೂರು ತಿಂಗಳ ಕಾಲ ಸಾಲದ ಕಂತುಗಳನ್ನು ಪಾವತಿಯನ್ನು ಮುಂದೂಡಿವೆ. ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ತರಕಾರಿ ಸೇರಿದಂತೆ ಹಲವು ಬೆಳೆಗಳನ್ನು ನಾಶಪಡಿಸಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಜಿಲ್ಲೆಯ ಪ್ರಮುಖ ಬೆಳೆಯಾದ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದು ರೈತರು ಜೀವನ ನಡೆಸುವುದೇ ದುಸ್ತರವಾಗಿದೆ. ಇಂತಹ ಸಮಯದಲ್ಲಿ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸಿ ಕೊಬ್ಬರಿಗೆ 2000 ಸಹಾಯ ಧನ ನೀಡಬೇಕು. ಪಿಕಾರ್ಡ್ ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಾತಿ ನೆಪದಲ್ಲಿ ಮನೆ ಬಾಗಿಲಿಗೆ ತೆರಳಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಕೂಡಲೆ ಈ ಕ್ರಮವನ್ನು ನಿಲ್ಲಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ತಾಳಕೆರೆ ನಾಗರಾಜು, ಗುರುವಿನಮಠ ಚಿಕ್ಕೇಗೌಡ, ಮಲ್ಲಾಘಟ್ಟರವಿ, ರಾಮಲಿಂಗಯ್ಯ, ರಮೇಶ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








