ದಾವಣಗೆರೆ:
ಮಳೆಯ ಅಭಾವದಿಂದ ರಾಜ್ಯದಲ್ಲಿ ಈ ಬಾರಿಯೂ ಬರದ ಛಾಯೆ ಆವರಿಸಿದ್ದು, ಈಗ ಮನೆ ಮಾಡಿರುವ ಬರ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿರುವುದನ್ನು ಖಂಡಿಸಿ ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಮಂಡಳಿ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಕಾಮ್ರೇಡ್ ಪಂಪಾಪತಿ ಭವನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಎಸಿ ಕಚೇರಿ ತಲುಪಿತು. ಮೆರವಣಿಗೆಯ ಉದ್ದಕ್ಕೂ ಪ್ರತಿಭಟನಾಕಾರರು ಉಭಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸುತ್ತಾ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿ ಉಪವಿಭಾಗಾಧಿಕಾರಿಗಳ ಮೂಲಕ ಉಭಯ ಸರ್ಕಾರಗಳಿಗೂ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಜಿಲ್ಲಾ ಮಂಡಳಿ ಪ್ರಧಾನ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ, ರಾಜ್ಯದಲ್ಲಿ ಮಳೆಗಾಲದಲ್ಲಿಯೇ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯ ಅಭಾವದಿಂದ ರೈತರ ಕೃಷಿ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ. ಹೀಗಾಗಿ ರೈತರು, ಕೃಷಿ ಕೂಲಿ ಕಾರ್ಮಿಕರು ದುಡಿಯಲು ಉದ್ಯೋಗ ಇಲ್ಲದೇ, ಸಂಷಕ್ಟ ಅನುಭವಿಸುತ್ತಿದ್ದಾರೆ. ಆದರೆ, ಬರಗಾಲದ ಪರಿಸ್ಥಿತಿಯನ್ನು ನಿರ್ವಹಿಸಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಸಡ್ಡೆ ತೋರುವ ಮೂಲಕ ರೈತ, ಕಾರ್ಮಿಕ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೂನ್ ತಿಂಗಳಿನಲ್ಲೇ ಮುಂಗಾರು ಮಳೆ ಆರಂಭವಾಗಬೇಕಿತ್ತು. ಆದರೆ, ಜುಲೈ ತಿಂಗಳು ಮುಗಿಯುತ್ತಾ ಬಂದರೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗಿಲ್ಲ. ಹೀಗಾಗಿ ಸುಮಾರು 156ಕ್ಕೂ ಹೆಚ್ಚು ತಾಲೂಕುಗಳು ಬರಕ್ಕೆ ತುತ್ತಾಗಿವೆ. ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗದೇ, ಬರಿದಾಗಿವೆ. ಕಳೆದ 3-4 ವರ್ಷಗಳ ಕಾಲ ಸತತ ಬರಗಾಲದಿಂದ ತತ್ತರಿಸಿರುವ ಕರ್ನಾಟಕದಲ್ಲಿ ಈ ಬಾರಿಯೂ ಬರದ ಛಾಯೆ ಮುಂದುವರೆದಿದೆ. ಹೀಗಾಗಿ ರೈತರಲ್ಲಿ ಆತಂಕ ಮನೆ ಮಾಡಿದ್ದು, ರೈತರ ನೆರವಿಗೆ ಉಭಯ ಸರ್ಕಾರಗಳು ಸಹ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.
ಈಗಾಗಲೇ ರಾಜ್ಯದ 156 ತಾಲೂಕುಗಳಲ್ಲಿ ಬರಗಾಲವು ತಾಂಡವವಾಡುತ್ತಿದ್ದು, ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಜಾನುವಾರುಗಳ ರಕ್ಷಣೆಗೆ ಗೋ ಶಾಲೆ ಆರಂಭಿಸಿದ ಸರ್ಕಾರವು ಈಗಾಗಲೇ ಕೆಲವೆಡೆ ಗೋಶಾಲೆ ಮುಚ್ಚಿರುವುದರಿಂದ ಮೇವು ಬ್ಯಾಂಕ್‍ನಿಂದ ಹಣ ಕೊಟ್ಟು ಮೇವು ತಂದು ರಾಸುಗಳನ್ನು ಸಾಕದ ಪರಿಸ್ಥಿತಿಯಲ್ಲಿರುವ ರೈತರು ಜಾನವಾರುಗಳನ್ನು ಕಸಾಯಿ ಖಾನೆ ಹೊಡೆಯುವ, ಕಟುಕರಿಗೆ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರು, ರಾಜ್ಯದ ಆಡಳಿತರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ ಹಾಗೂ ವಿರೋಧ ಪಕ್ಷದಲ್ಲಿರುವ ಬಿಜೆಪಿ ಈ ಮೂರು ಪಕ್ಷಗಳು ರೈತ-ಕಾರ್ಮಿಕರ, ಜನರ ಹಿತಾಸಕ್ತಿಯನ್ನು ಮರೆತು ಅಧಿಕಾರದ ಲಾಲಸೆಗಾಗಿ ಪರಸ್ಪರ ಕೆಸರೆರೆಚಾಟದಲ್ಲಿ ನಿರತವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಳೆಯನ್ನೇ ಅವಲಂಭಿಸಿದ ರಾಜ್ಯದ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು ಸ್ಥಗಿತಗೊಂಡಿವೆ. ಈ ಪರಿಸ್ಥಿತಿಯಲ್ಲಿ ಸಮರೋಪಾದಿಯಲ್ಲಿ ಬರ ಪರಿಹಾರ ಕಾರ್ಯ ಕೈಗೊಳ್ಳಬೇಕಾದ ಕೇಂದ್ರ, ರಾಜ್ಯ ಸರ್ಕಾರಗಳು ತಮ್ಮ ಜವಾಬ್ಧಾರಿಯಿಂದ ನುಣುಚಿಕೊಳ್ಳುತ್ತಿವೆ . ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲವೆಂದು ಕೇಂದ್ರ ಇತ್ತ ಗಮನ ಹರಿಸುತ್ತಿಲ್ಲ. ಅತೃಪ್ತ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಖುರ್ಚಿ, ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರೆ, ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ ಪ್ರಯತ್ನಿಸುತ್ತಿದೆ.
ಹೀಗಾಗಿ ಈ ಮೂರು ಪಕ್ಷಗಳ ವರ್ತನೆಯಿಂದ ಜನರು ಭ್ರಮನಿರಸನಾಗಿದ್ದಾರೆ. ಈಗಲಾದರೂ ಎಚ್ಚೆತ್ತು ಆಡಳಿತರೂಢ ಕಾಂಗ್ರೆಸ್-ಜೆಡಿಎಸ್ ಹಾಗೂ ವಿರೋಧ ಪಕ್ಷವಾಗಿರುವ ಬಿಜೆಪಿ ಶಾಸಕರುಗಳು ತಮ್ಮಲ್ಲಿರುವ ರಾಜಕೀಯ ವೈಷಮ್ಯ, ವೈರುಧ್ಯಗಳನ್ನು ಬದಿಗಿಟ್ಟು ರೈತರ ಹಿತಾಸಕ್ತಿಗಾಗಿ ಸಮರೋಪಾದಿಯಲ್ಲಿ ಬರ ನಿರ್ವಹಣೆಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಮಂಡಳಿಯ ಆನಂದರಾಜ, ಆವರಗೆರೆ ಎಚ್.ಜಿ.ಉಮೇಶ, ಆವರಗೆರೆ ಚಂದ್ರು, ಆವರಗೆರೆ ವಾಸು, ಟಿ.ಎಸ್.ನಾಗರಾಜ, ರಂಗನಾಥ, ಎಂ.ಬಿ.ಶಾರದಮ್ಮ, ಎಚ್.ಪಿ.ಉಮಾಪತಿ, ಸಿ.ರಮೇಶ, ಎನ್.ಟಿ.ಬಸವರಾಜ, ಬಿ.ರೇವಣಸಿದ್ದಪ್ಪ, ಏಳುಕೋಟಿ, ರಂಗನಾಥ, ಸರೋಜಾ, ವಿ.ಲಕ್ಷ್ಮಣ, ಚಮನ್ ಸಾಬ್, ಬಸವರಾಜಪ್ಪ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
