ದಾವಣಗೆರೆ:
ಭವಿಷ್ಯತ್ತಿನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಅತ್ಯಂತ ಕಠಿಣ ಕಾನೂನುಗಳು ಅನುಷ್ಠಾನಗೊಳ್ಳುತ್ತಿದ್ದು, ಯಾವುದೇ ಅವ್ಯವಹಾರ, ಮೋಸ ಮಾಡಲು ಅವಕಾಶವೇ ಇರುವುದಿಲ್ಲ ಎಂದು ಬೆಂಗಳೂರಿನ ಸನ್ನದು ಲೆಕ್ಕ ಪರಿಶೋಧಕ ಸಿ.ಎ.ಗುರುರಾಜಾಚಾರ್ ಅಭಿಪ್ರಾಯಪಟ್ಟರು.
ನಗರದ ಎಂಬಿಎ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ತೆರಿಗೆ ಸಲಹೆಗಾರರ ಸಂಘ ಆಯೋಜಿಸಿದ ಜಿಎಸ್‍ಟಿ, ಆರ್‍ಸಿಎಂ ಮತ್ತು ಆದಾಯ ತೆರಿಗೆ, ಅಂತರ್ಜಾಲ ಲೆಕ್ಕ ಪರಿಶೋಧನೆ, ಸಮೀಕ್ಷೆ, ಆದಾಯ ತೆರಿಗೆ ಸಲ್ಲಿಸಲು ಹೊಸ ಫಾರಂಗಳ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬರುವ ದಿನಗಳಲ್ಲಿ ಜಿಎಸ್‍ಟಿ, ಆದಾಯ ತೆರಿಗೆ, ಲೆಕ್ಕ ಪರಿಶೋಧನೆ ಸೇರಿದಂತೆ ಎಲ್ಲಾ ಸೇವೆಗಳು ಡಿಜಿಟಲೀಕರಣಗೊಳ್ಳಲಿವೆ. ಜಿಎಸ್‍ಟಿ, ಆದಾಯ ತೆರಿಗೆ, ಲೆಕ್ಕ ಪರಿಶೋಧನೆ ಹೀಗೆ ಎಲ್ಲವೂ ಡಿಜಿಟಲೀಕರಣವಾಗುವುದರೊಂದಿಗೆ ಪಾರದರ್ಶಕ ವ್ಯವಸ್ಥೆಯೂ ಜಾರಿಗೆ ಬರಲಿದೆ. ಇದರಿಂದ ಯಾವುದೇ ರೀತಿಯಲ್ಲಿ ಅವ್ಯವಹಾರ, ಮೋಸ ಮಾಡಲು ಅವಕಾಶವೇ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತೆರಿಗೆ ಸಲ್ಲಿಸುವ ಉದ್ದಿಮೆದಾರರು, ವ್ಯಾಪಾರಸ್ಥರು, ಸಂಬಳದಾರರು ತಮ್ಮ ವೈಯಕ್ತಿಕ ವಹಿವಾಟುಗಳ ಆದಾಯ ತೆರಿಗೆಯನ್ನು ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ ಮಾತನಾಡಿ, ತೆರಿಗೆ ಸಲಹೆಗಾರರು ತಮ್ಮ ವ್ಯಾಪಾರಸ್ಥರ ಜಿಎಸ್‍ಟಿ ಮತ್ತು ಆದಾಯ ತೆರಿಗೆಗೆ ಸಂಬಂಧಿಸಿದ ವಹಿವಾಟನ್ನು ಸರಿಯಾಗಿ ಪರಿಶೀಲಿಸಿ ನಿಗದಿತ ನಮೂನೆಯ ಅರ್ಜಿಗಳನ್ನು ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಬೇಕಾಗಿದೆ. ಆದ್ದರಿಂದ ಉದ್ದಿಮೆದಾರರು, ವ್ಯಾಪಾರಸ್ಥರು, ಸಂಬಳದಾರರು ತೆರಿಗೆ ಸಲಹೆಗಾರರಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಜಿಎಸ್‍ಟಿ ಮಾಸಿಕ ವಹಿವಾಟು ಸಲ್ಲಿಸಲು ಪ್ರತಿ ತಿಂಗಳ 20ನೇ ತಾರೀಖು ಕೊನೆಯ ದಿನವೆಂದು ಅದೇ ದಿನ ಬರಬೇಡಿ. ಏಕೆಂದರೆ, ಪ್ರತಿ ತಿಂಗಳ 20ನೇ ತಾರೀಖಿನಂದೇ ಜಿಎಸ್‍ಟಿ ಮಾಸಿಕ ವಹಿವಾಟು ಸಲ್ಲಿಸಲು ಅಂತಿಮ ದಿನವಾಗುವುದರಿಂದ ದೇಶಾದ್ಯಂತ ಉದ್ದಿಮೆದಾರರು, ವ್ಯಾಪಾರಸ್ಥರು, ಸಂಬಳದಾರರು ವಹಿವಾಟು ಸಲ್ಲಿಸುವುದರಿಂದ ಸರ್ವರ್ ಡೌನ್ ಆಗಿ ತುಂಬಾ ತೊಂದರೆಯಾಗುತ್ತದೆ. ಪ್ರತಿ ತಿಂಗಳ 10 ನೇ ತಾರೀಕಿನಿಂದ 15ರೊಳಗೆ ಬಂದು ಮಾಸಿಕ ವಹಿವಾಟು ಸಲ್ಲಿಸಿ ಇಲ್ಲದಿದ್ದರೆ ಲೆಕ್ಕ ಪರಿಶೋಧಕರಿಗೆ ಒತ್ತಡ ಹೆಚ್ಚಲಿದೆ ಎಂದು ಹೇಳಿದರು.
ಬೆಂಗಳೂರಿನ ಸನ್ನದು ಲೆಕ್ಕ ಪರಿಶೋಧಕ ಸಿ.ಎ.ವೆಂಕಟರಮಣಿ ಜಿಎಸ್‍ಟಿ, ಆರ್‍ಸಿಎಂ ಮತ್ತು ಆದಾಯ ತೆರಿಗೆ ಅಂತರ್ಜಾಲ ಲೆಕ್ಕ ಪರಿಶೋಧನೆ, ಸಮೀಕ್ಷೆ, ಆದಾಯ ತೆರಿಗೆ ಕುರಿತು ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ಡಿ.ಎಂ.ರೇವಣಸಿದ್ದಯ್ಯ, ಗೌರವಾಧ್ಯಕ್ಷ ಬಿ.ಜಿ.ಬಸವರಾಜಪ್ಪ, ಉಪಾಧ್ಯಕ್ಷ ಹರಿಹರದ ಮಂಜುನಾಥ, ಖಜಾಂಚಿ ಜಗದೀಶ ಹಾಗೂ ಪದಾ„ಕಾರಿಗಳು ಭಾಗವಹಿಸಿದ್ದರು.
ಬಳ್ಳಾರಿ, ಕೂಡ್ಲಿಗಿ, ಸಿಂಧನೂರು, ಹುಬ್ಬಳ್ಳಿ, ಹೊಸಪೇಟೆ, ಬಾಗಲಕೋಟೆ, ಹಾವೇರಿ, ಗದಗ, ಬೆಂಗಳೂರು, ಹಾಸನ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ಹರಿಹರ ತಾಲೂ ಕಿನಿಂದ ತೆರಿಗೆ ಸಲಹೆಗಾರರು, ಲೆಕ್ಕ ಬರಹಗಾರರು ಭಾಗವಹಿಸಿ ಮಾಹಿತಿ ಪಡೆದರು. ಸಿ.ವಿನಯ್ ಸ್ವಾಗತಿಸಿದರೆ, ಬಿಜಿಬಿ ವಿನಯ್ ಕಾರ್ಯಕ್ರಮ ನಿರೂಪಿಸಿದರು. ಎಚ್.ಎಸ್.ಮಂಜುನಾಥ ವಂದಿಸಿದರು