ಬಸವ ಧರ್ಮವು ವೈದಿಕ ವ್ಯವಸ್ಥೆಗೆ ಪರ್ಯಾಯ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು

    ಜಡ್ಡುಗಟ್ಟಿದ ಸಮಾಜದಲ್ಲಿ ಸಮಾನತೆ ತರಲು ಬಸವಾದಿ ಶರಣರು ಸ್ಥಾಪಿಸಿದ ಬಸವ ಧರ್ಮವು ವೈದಿಕ ವ್ಯವಸ್ಥೆಗೆ ಪರ್ಯಾಯ ಧರ್ಮ ವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನಗಳು ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಾದಿಸಿದ್ದಾರೆ.

    ನಗರದಲ್ಲಿ ಅವರು ಶನಿವಾರ ಪ್ರೊ. ಎಸ್.ಜಿ. ಸಿದ್ದರಾಮಯ್ಯರವರ ಲಿಂಗಾಯಿತ ಕನ್ನಡ ವಚನ ಧರ್ಮ ಹಾಗೂ ವಚನ ಧರ್ಮ ಅರಿವಿನ ಬೆರೆಗು ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ ಬಸವ ಧರ್ಮ ಸ್ವತಂತ್ರ ಧರ್ಮವಾಗಿದ್ದು ವೈದಿಕ ವ್ಯವಸ್ಥೆಗೆ ಪರ್ಯಾಯವಾಗಿದೆ ಎಂದರು.

      ಜಗತ್ತಿನಲ್ಲಿ ಬಸವಾದಿ ಶರಣರು ಪ್ರಜಾಪ್ರಭುತ್ವದ ಬೀಜವನ್ನು ನೆಟ್ಟವರು. ಅಲ್ಲಿಯವರೆಗೂ ಇದರ ಪರಿಕಲ್ಪನೆಯೇ ಇರಲಿಲ್ಲ ಪ್ರಜಾಪ್ರಭುತ್ವಕ್ಕಾಗಿ ಬಸವಣ್ಣನವರ ಕಾಲದಲ್ಲಿ ದೊಡ್ಡ ಪ್ರಯತ್ನವೇ ನಡೆಯಿತು ಎಂದು ಹೇಳಿದರು.ಸಮಾಜದಲ್ಲಿನ ಇಂದಿನ ಸ್ಥಿತಿ ನೋಡಿದರೆ ಬಸವಣ್ಣನವರು ಇನ್ನಷ್ಟು ಕಾಲ ಬದುಕಬೇಕಾಗಿತ್ತು. ಆದರೆ ಸಮಾಜ ಸುಧಾರಕರು ಹೆಚ್ಚು ಕಾಲ ಬದುಕುವುದಿಲ್ಲ. ಬಸವಣ್ಣನವರು ಇನ್ನಷ್ಟು ಕಾಲ ಬದುಕಿದ್ದರೆ ಸಮಾಜಕ್ಕೆ ಕನ್ನಡ ನಾಡಿಗೆ ಇನ್ನಷ್ಟು ಕೊಡುಗೆ ನೀಡುತ್ತಿದ್ದರು ಎಂದು ಹೇಳಿದರು.

    ಜಗತ್ತಿನಲ್ಲಿ ಇನ್ನೂ ಗುಲಾಮಗಿರಿ ಮನೆ ಮಾಡಿಕೊಂಡಿದೆ. ಅದರಿಂದ ಹೊರ ಬರಲು ಸಾಧ್ಯವಾಗಿಲ್ಲ. ಗುಲಾಮಗಿರಿಯ ಬಂಧನಗಳಿಂದ ಹೊರ ಬರಬೇಕಾದರೆ ಈ ಪುಸ್ತಕಗಳನ್ನು ಅಧ್ಯಯನ ಮಾಡಬೇಕೆಂದು ಹೇಳಿದರು ಜಾತಿ ವ್ಯವಸ್ಥೆ ಜಡತ್ವದಿಂದ ಕೂಡಿದೆ. ಇದು ಬದಲಾವಣೆಯಾಗುವವರೆಗೂ ಜಾತಿ ವ್ಯವಸ್ಥೆ ಬದಲಾಗುವುದು ಸಾಧ್ಯವಿಲ್ಲ ಎಂದರು.

       ನಾನು ಮುಖ್ಯಮಂತ್ರಿಯಾಗಿದ್ದಾಗ ವೀರಶೈವ ಲಿಂಗಾಯಿತ ಧರ್ಮ ಎಂದು ಒಂದು ಗುಂಪು ಲಿಂಗಾಯಿತ ಪ್ರತ್ಯೇಕ ಧರ್ಮ ಎಂದು ಮತ್ತೊಂದು ಗುಂಪು ಮನವಿ ಸಲ್ಲಿಸಿತು. ಇದಕ್ಕಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ, ವರದಿ ಪಡೆದುಕೊಳ್ಳಲಾಯಿತು.ನಂತರ ಲಿಂಗಾಯಿತ ಧರ್ಮ ಎಂದು ಕೇಂದ್ರಕ್ಕೆ ಮಾನ್ಯತೆಗಾಗಿ ಕಳುಹಿಸಿ ಕೊಡಲಾಯಿತು. ಇದಕ್ಕಾಗಿ ಕೆಲವರು ನನ್ನನ್ನೇ ಖಳನಾಯಕನನ್ನಾಗಿ ಬಿಂಬಿಸಿದರು ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

     ಎರಡು ಗುಂಪಿನವರು ತಮ್ಮಲ್ಲಿರುವ ಗೊಂದಲ ಮತ್ತು ಸಂಶಯಗಳನ್ನು ನಿವಾರಿಸಿಕೊಳ್ಳಲು ಈ ಪುಸ್ತಕವನ್ನು ಓದಲೇಬೇಕು ಎಂದು ಅವರು ತಿಳಿಸಿದರು. ನಾನು ಮುಖ್ಯಮಂತ್ರಿಯಾಗುತ್ತಿದ್ದಂತೆ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪ್ರಮಾಣ ವಚನ ಸ್ವೀಕರಿಸುತ್ತಿದ್ದದ್ದು ತೋರಿಕೆಗೆ ಅಲ್ಲ. ಇದನ್ನೇ ಕೆಲವರು ಟೀಕೆ ಮಾಡಿದರು ಎಂದು ಹೇಳಿದರು.

     ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಹೆಚ್.ಎಂ. ಜಾಮದಾರ್ ಅವರು ಲಿಂಗಾಯಿತ ಧರ್ಮ ವಿಷಯದಲ್ಲಿ ಉಂಟಾಗಿರುವ ಗೊಂದಲ ಪರಿಹಾರಕ್ಕೆ ಪೇಜಾವರ ಮಠಾಧೀಶರು ನನ್ನ ಚರ್ಚೆಗೆ ಆಹ್ವಾನಿಸಿದ್ದಾರೆ. ಆದರೆ ನಾನು ಚರ್ಚೆ ಹೋಗುವುದಿಲ್ಲ. ಪೇಜಾವರ ಮಠಾಧೀಶರು ತಮ್ಮಲ್ಲಿರುವ ಗೊಂದಲ ಪರಿಹರಿಸಿಕೊಳ್ಳಲು ಇಂದು ಬಿಡುಗಡೆಯಾದ ಪುಸ್ತಕವನ್ನೇ ಕಳುಹಿಸಿ ಕೊಡುತ್ತೇನೆ ಎಂದು ಹೇಳಿದರು.

    ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಪೇಜಾವರ ಮಠಾಧೀಶರ ಆಶೀರ್ವಾದ ಪಡೆದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ಪ್ರಸ್ತಾಪಿಸದೆ ಬಸವ ಧರ್ಮ ಟೀಕೆ ಮಾಡುತ್ತಿರುವ ಅಂತಹ ಮಠಾಧೀಶರ ಕಾಲಿಗೆ ಬಿದ್ದು ಬಸವ ಧರ್ಮವನ್ನೇ ನಿರ್ನಾಮ ಮಾಡುತ್ತಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಪ್ನ ಬುಕ್ ಹೌಸ್ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link