ಆತ್ಮಸ್ಥೈರ್ಯ ತುಂಬುವ ಶಿಕ್ಷಣ ಇಂದಿನ ಅಗತ್ಯ

ದಾವಣಗೆರೆ:

      ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬವ ಶಿಕ್ಷಣದ ಅವಶ್ಯಕತೆ ಇದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಪ್ರತಿಪಾದಿಸಿದರು.

    ನಗರದ ವಿದ್ಯಾಸಾಗರ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಕ್ಕಳ ಮಂಟಪದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದಿನ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುತ್ತಿದ್ದರೂ ಮಾನಸಿಕ ಒತ್ತಡಕ್ಕೆ ಒಳಗಾಗಿ ಭಯ, ಗಾಬರಿ, ಖಿನ್ನತೆ ಹಾಗೂ ಆತಂಕಕ್ಕೆ ಒಳಗಾಗಿ ಸಹನೆ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಇಂಥಹ ಸಮಸ್ಯೆಗಳಿಂದ ಹೊರಬರಲು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಶಿಕ್ಷಣ ಇಂದಿನ ತುರ್ತಾಗಿದೆ ಎಂದರು.

     ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರು ನಿಂದಿಸಿದರು ಎಂಬ ಕಾರಣಕ್ಕೆ ಮನೆ, ಶಾಲೆ ಬಿಟ್ಟು ಹೋಗುವ ವಿದ್ಯಾರ್ಥಿಗಳನ್ನು ನೋಡುತ್ತಿದ್ದೇವೆ. ರ್ಯಾಂಕ್ ಬಂದರೂ ತಂದೆ-ತಾಯಿಗಳನ್ನು ನೋಡದ ಮಕ್ಕಳಿಗೂ ಸಹ ಕೊರತೆ ಇಲ್ಲ. ಶಾಲೆಯಲ್ಲಿ ರ್ಯಾಂಕ್ ಬಂದರೆ ಸಾಲದು, ಜೀವನದಲ್ಲಿ ರ್ಯಾಂಕ್ ಬರಬೇಕು. ಆಗ ಮಾತ್ರ ಕೀರ್ತಿವಂತರಾಗಲು ಸಾಧ್ಯ ಎಂದು ಹೇಳಿದರು.

      ಜೀವನದಲ್ಲಿ ಎಷ್ಟೆ ಕಷ್ಟಬಂದರೂ ಅದನ್ನು ಎದುರಿಸುವ ಹಾಗೂ ಮಾನವೀಯತೆಯ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರು ಜೀವನದಲ್ಲಿ ರ್ಯಾಂಕ್ ಪಡೆದು ಕೀರ್ತಿವಂತರಾದರು. ಅವರ ತತ್ವಗಳನ್ನು ಪಾಲಿಸಿ, ಮುಂದೆ ಬರಬೇಕು. ಶಿಕ್ಷಣದಲ್ಲಿ ರ್ಯಾಂಕ್ ಪಡೆದರೆ ಉದ್ಯೋಗ ದೊರೆಯುತ್ತದೆ. ಜೀವನದಲ್ಲಿ ರ್ಯಾಂಕ್ ಪಡೆದರೆ ಕೀರ್ತಿ ಬರುತ್ತದೆ ಎಂದರು.

      ಇತ್ತೀಚೆಗೆ ವಿದ್ಯಾವಂತರೇ ತಂದೆ-ತಾಯಿಂದರನ್ನು ಸರಿಯಾಗಿ ನೋಡುಕೊಳ್ಳುತ್ತಿಲ್ಲ. ಪಾಲಕರನ್ನು ವೃದ್ಧಾಶ್ರಮಕ್ಕೆ ಸೇರಿಸಿ, ಮನೆಯಲ್ಲಿ ನಾಯಿ, ಬೆಕ್ಕುಗಳನ್ನು ಸಾಕುತ್ತಾರೆ. ಅವುಗಳನ್ನು ಮುದ್ದಿನಿಂದ ನೋಡಿಕೊಳ್ಳುವುದು ಅತ್ಯಂತ ದುರಂತವಾಗಿದೆ. ನಮಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ವಯಸ್ಸಾದ ಪಾಲಕರಿಗೆ ಯಾವುದೇ ರೀತಿಯಲ್ಲಿ ನೋವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

     ಜೀವನದಲ್ಲಿ ಹಣಕ್ಕೆ ಬೆನ್ನು ಬೀಳದೇ, ಸದ್ಗುಣಗಳ ಬೆನ್ನು ಹತ್ತಬೇಕು. ಏಕೆಂದರೆ, ಹಣದ ಹಿಂದೆ ಬಿದ್ದರೆ, ಹೆಣವಾಗುತ್ತವೆ. ಸದ್ಗುಣಗಳ ಬೆನ್ನು ಹತ್ತಿದರೆ ಸುಜ್ಞಾನಿ, ಶರಣರಾಗುತ್ತೇವೆ, ಹಣ ಅಳಿದರೆ, ಗುಣ ಉಳಿಯುತ್ತದೆ ಎಂದ ಅವರು, ವಿದ್ಯಾಸಾಗರ ಶಾಲೆಯ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಸಹಕಾರಿಯಾಗುತ್ತದೆ. ಮುಂದೆ ಅವರು ಜೀವನದಲ್ಲಿ ಹೊಸತನ್ನು ಮಾಡಲು ಸ್ಪೂರ್ತಿಯಾಗುತ್ತದೆ ಎಂದರು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುದೇವ ವಿದ್ಯಾ ಸಮಿತಿ ಅಧ್ಯಕ್ಷ ಆರ್.ಭರತ್‍ಸಿಂಗ್ ವಹಿಸಿದ್ದರು. ಶ್ರೀಕ್ಷೇತ್ರ ಸಿಗಂದೂರು ಧರ್ಮದರ್ಶಿ ರಾಮಪ್ಪ, ಕೆನೆರಾ ಬ್ಯಾಂಕನ ಪ್ರಬಂಧಕ ವ್ಯಾಸ ಎನ್.ಪಾರ್ವರ್ತಿಕರ್, ಕೆ.ಎನ್.ಸ್ವಾಮಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap