ತುಮಕೂರು
ಬಸವಣ್ಣನ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಿದಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ತಿಳಿಸಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸರಳ ಬಸವ ಜಯಂತಿ ಆಚರಣೆ ಅಂಗವಾಗಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿಯೇ ಅನುಭವ ಮಂಟಪದಡಿ ಎಲ್ಲ ಜಾತಿ, ವರ್ಗದ ಜನರನ್ನು ಒಂದುಗೂಡಿ ಸಮಾನತೆಯ ಮೂಲಕ ವಿಶ್ವದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ ಯುಗ ಪುರುಷ ಜಗಜ್ಯೋತಿ ಬಸವಣ್ಣ. ಅವರ ವಚನಗಳ ಮೂಲಕ ಸಾಮಾಜಿಕ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿದ ಮಹಾನ್ ದಾರ್ಶನಿಕ. ಅವರ ತತ್ವ ಸಿದ್ಧಾಂತಗಳನ್ನು 12ನೇ ಶತಮಾನದಲ್ಲಿಯೇ ಅನುಷ್ಠಾನಗೊಳಿಸಿದರೆ, ದೇಶದಲ್ಲಿ ಜಾತಿ-ಬೇಧ, ಅಸಮಾನತೆ, ಗಂಡು-ಹೆಣ್ಣು ಎಂಬ ತಾರತ್ಯಮವೇ ಇರುತ್ತಿರಲಿಲ್ಲ ಎಂದು ತಿಳಿಸಿದರು.
ಸಂಶೋಧಕ ಡಿ.ಎನ್ ಯೋಗೇಶ್ ಮಾತನಾಡಿ ಸತ್ಯ ಮಾರ್ಗದಲ್ಲಿ ನಡೆದರೆ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ ಬರುತ್ತದೆ ಎಂಬುದನ್ನು ಬಸವಣ್ಣನ ವಚನಗಳ ಮೂಲಕ ಮನದಟ್ಟು ಮಾಡಿಕೊಳ್ಳಬೇಕು. ಅನುಭವ ಮಂಟಪ ಸ್ಥಾಪಿಸಿ ಎಲ್ಲರಿಗೂ ಮಾತನಾಡುವ ಅವಕಾಶವನ್ನು ಕಲ್ಪಿಸಿಕೊಟ್ಟವರು ಬಸವಣ್ಣನವರು. ಎಲ್ಲರೂ ಪಕ್ಷ ಭೇದ ಮರೆತು ಒಂದಾಗಿ ದೇಶ, ರಾಜ್ಯದ ಜನತೆಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸುಖೀ ರಾಜ್ಯವಾಗುವುದು ನಿಶ್ಚಿತ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್ ಕಾಮಾಕ್ಷಿ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಲಾವಿದ ದಿಬ್ಬೂರು ಮಂಜು ಅವರು ಬಸವಣ್ಣನ ವಚನ ಗೀತೆಗಳನ್ನು ಹಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ