ಚಿತ್ರದುರ್ಗ:
ಐತಿಹಾಸಿಕ ಚಿತ್ರದುರ್ಗ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವ ನೀರು ಹೈಟೆಕ್ ಶೌಚಾಲಯ, ಸಿಮೆಂಟ್ ರಸ್ತೆ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ಕೋಟೆ ಮುಂಭಾವಿರುವ ಹೋಟೆಲ್ ಮಯೂರ ಯಾತ್ರಿ ನಿವಾಸ್ ಸಮೀಪ ಶುಕ್ರವಾರ ಬೋರ್‍ವೆಲ್ ಉದ್ಘಾಟಿಸಿ ಮಾತನಾಡಿದ ಶಾಸಕರು. ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ಕೋಟೆ ವಾಯುವಿಹಾರಿಗಳ ಸಂಘದವರು ನನ್ನ ಗಮನಕ್ಕೆ ತಂದಿದ್ದರಿಂದ ಬೋರ್‍ವೆಲ್ ಕೊರೆಸಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಇಪ್ಪತ್ತರಿಂದ ಇಪ್ಪತ್ತೈದು ಬೋರ್‍ಗಳನ್ನು ಕೊರೆಸಿದ್ದೇನೆ. ಪ್ರವಾಸೋದ್ಯಮ ಇಲಾಖೆಯಿಂದ ಮೂರು ಕೋಟಿ ರೂ.ಬಿಡುಗಡೆಯಾಗಿದೆ. ಅದರಲ್ಲಿ ಕುಡಿಯುವ ನೀರು, ಶೌಚಾಲಯ, ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಬಳಸಲಾಗುವುದು.
ಹೊರ ಊರುಗಳಿಂದ ಬರುವ ಪ್ರವಾಸಿಗರು ಅದರಲ್ಲೂ ಮಹಿಳೆಯರಿಗೆ ಶೌಚಾಲಯದ ಅಭಾವವಿರುವುದರಿಂದ ಮಹಾರಾಣಿ ಕಾಲೇಜು ಹಿಂದೆ ಇರುವ ಜಾಗದಲ್ಲಿ ಪುರುಷರಿಗೆ ಹತ್ತು ಮಹಿಳೆಯರಿಗೆ ಹತ್ತು ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಈ ಸಂಬಂಧ ಪುರಾತತ್ವ, ಪ್ರವಾಸೋಧ್ಯಮ ಇಲಾಖೆ ಜೊತೆ ಚರ್ಚಿಸುತ್ತೇನೆಂದು ಹೇಳಿದರು.
ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಲಗೇಜ್ ಕೊಠಡಿ ನಿರ್ಮಾಣ ಮಾಡಲಾಗುವುದು. ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿ ಏನೆ ಮಾಡಬೇಕೆಂದರೂ ಪುರಾತತ್ವ ಇಲಾಖೆಯ ಕೆಲವು ನಿಬಂಧನೆಗಳಿವೆ ಎಲ್ಲವನ್ನು ಸರಿಪಡಿಸಿಕೊಂಡು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಪ್ಪ, ಉಪಾಧ್ಯಕ್ಷರುಗಳಾದ ಚನ್ನಬಸಪ್ಪ, ರಾಮಜ್ಜ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ನಿರ್ದೇಶಕರುಗಳಾದ ಕೂಬಾನಾಯ್ಕ, ಮಲ್ಲಿಕಾರ್ಜುನ, ಭದ್ರಣ್ಣ, ಶ್ರೀನಿವಾಸ್, ರತ್ನಮ್ಮ, ಲತ, ನರಸಿಂಹಪ್ಪ, ನಗರಸಭೆ ಸದಸ್ಯರುಗಳಾದ ಶ್ರೀನಿವಾಸ್, ಭಾಸ್ಕರ್, ವೆಂಕಟೇಶ್, ಹರೀಶ್, ಮಾಜಿ ಸದಸ್ಯ ಮಹೇಶ್, ಕೊಟ್ರೇಶ್‍ಶೆಟ್ಟಿ, ಗುತ್ತಿಗೆದಾರರುಗಳಾದ ವೈ.ಸತ್ಯಪ್ಪ, ಕುಮಾರ್, ತಾ.ಪಂ.ಮಾಜಿ ಸದಸ್ಯ ವೀರೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ