ತುಮಕೂರು
ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಕಲ್ಪಿಸಲಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ತಿಳಿಸಿದರು.
ಟೆಕ್ನೊ ಸ್ಪಾರ್ಕ್ ಇಂಡಸ್ಟ್ರೀಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‍ನಲ್ಲಿಂದು ನಡೆದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಕೈಗಾರಿಕೋದ್ಯಮಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ಕೈಗಾರಿಕಾ ವಲಯದಲ್ಲಿ ಮೂಲಸೌಕರ್ಯ ಸೃಷ್ಟಿಸುವುದು ಸರ್ಕಾರದ ಕರ್ತವ್ಯ, ಕೈಗಾರಿಕೆಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕಾದರೆ ಕೈಗಾರಿಗಳಿಗೆಗೂ ಜವಾಬ್ದಾರಿ ಇರಬೇಕಾಗುತ್ತದೆ. ಸರ್ಕಾರ ಪಾಪುಲರ್ ಯೋಜನೆ ಮಾಡಿದ ಹಾಗೆ ಎಲ್ಲಾ ಯೋಜನೆಗಳನ್ನು ಕೈಗಾರಿಕೆಗಳಿಗೆ ಮಾಡಿಕೊಡಲು ಆಗುವುದಿಲ್ಲ. ಏಕೆಂದರೆ ನಿಮ್ಮನ್ನು ನಾವು ಇಲ್ಲಿ ಕೆಐಡಿಬಿ ಮುಖಾಂತರ ಜಾಗ ಕೊಡಬೇಕಾದರೆ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ಸಿಗಲಿ ಎಂಬ ಆಸೆ ಇಟ್ಟುಕೊಂಡು ನಾವು ಈ ಕೆಲಸ ಮಾಡುತ್ತೇವೆ ಎಂದರು.
ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಸುವುದು ಹಾಗೂ ಸ್ಥಳೀಯ ಕಚ್ಚಾ ವಸ್ತುಗಳನ್ನು ಸಿದ್ಧವಸ್ತುಗಳನ್ನಾಗಿ ಮಾಡಿ ಮಾರ್ಕೆಟಿಂಗ್ ವ್ಯಾಲ್ಯು ಸಿಗಲಿ, ಈ ಭಾಗದ ಜನರಿಗೆ ಅನುಕೂಲವಾಗಲೆಂದು ಹಾಗೂ ನಿಮ್ಮ ಮೂಲಕ ನಗರ ಸೌಕರ್ಯ ಸೃಷ್ಟಿಸಿ ನಗರ ವಾತಾವರಣ ಬರಲಿ ಎನ್ನುವುದು ನಮ್ಮ ಆಕಾಂಕ್ಷೆಯಾಗಿದೆ. ಈ ಭಾಗದ ಮಕ್ಕಳಿಗೆ ಪರ್ಯಾಯ ಜೀವನೋಪಾಯ ಕಲ್ಪಿಸಲು ಚಿಂತಿಸಬೇಕು. ಕೈಗಾರಿಕೆಗಳಲ್ಲಿ ವಿದ್ಯುತ್, ನೀರಿನ ಸೌಲಭ್ಯ, ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಸಮಪರ್ಕವಾಗಿ ಕಲ್ಪಿಸಬೇಕು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಎತ್ತಿನಹೊಳೆ ಯೋಜನೆಯಡಿ ನೀರು ಇಲ್ಲಿಯವರೆಗೂ ಹಂಚಿಕೆಯಾಗದೇ ಚರ್ಚೆಯಲ್ಲಿಯೇ ಮುಂದುವರೆದಿದ್ದು, ಯಾವುದೇ ಪಾಸಿಟಿವ್ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದರು.
ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕ, ವಾಚ್‍ಮೆನ್‍ಗಳಿಗೆ ಸೇರಿದಂತೆ ಕೆಳಹಂತದವರಿಗೆ ವಸತಿ ವ್ಯವಸ್ಥೆ ಒದಗಿಸುವುದು ಮುಖ್ಯವಾಗಿರುತ್ತದೆ. ಕಾರ್ಮಿಕರಿಗೆ ತೊಂದರೆಯಾಗದಂತೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡಬೇಕು. ಕೈಗಾರಿಕೆಗಳಲ್ಲಿ ಸದ್ಯ ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಎಷ್ಟು ಜನರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು ಎಂಬುದರ ಬಗ್ಗೆ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಗಳ ಜೊತೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಿ, ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ ಒಂದು ಕಂಪನಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕಾದರೆ ಪ್ರಾರಂಭದಲ್ಲಿ ಕಷ್ಟಗಳು ಸಹಜ. ಎಲ್ಲಾ ಕೈಗಾರಿಕೆಗಳು ಬೆಳವಣಿಗೆಯಾಗುವುದೇ ಸರ್ಕಾರದ ಉದ್ದೇಶವಾಗಿದೆ ಎಂದರು.
ಕೊಳಚೆ ನೀರನ್ನು ಸಂಸ್ಕರಿಸಿದ ನಂತರ ಕೈಗಾರಿಕೆಗಳಿಗೆ ಪೂರೈಸಲು ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ. ಕೆಐಡಿಬಿ ಹಾಗೂ ಬೆಂಗಳೂರು ಜಲಮಂಡಳಿಯನ್ನು ಉಪಯೋಗಿಸಿಕೊಂಡು ಪೀಣ್ಯ, ಡಾಬಸ್‍ಪೇಟೆ, ಮಾಗಡಿ ಕಡೆ ಬೆಂಗಳೂರಿನ ನೀರನ್ನು ಪೂರೈಸಲು ನಿರ್ಧಾರ ಮಾಡಲಾಗಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿಗೂ ಟ್ರೆಟೇಡ್ ನೀರನ್ನು ಕೆರೆಗಳಿಗೆ ಪೂರೈಸಲಾಗುತ್ತಿದೆ. ಕಾಲುವೆ, ಡ್ಯಾಂಗಳನ್ನು ನಿರ್ಮಾಣ ಮಾಡಿ ನೀಡುವುದರ ಬದಲು ಟ್ರೀಟ್ ಮಾಡಿದ ವಾಟರ್ ಪೂರೈಸಿ ಎಂದು ಜನರಿಂದ ಬೇಡಿಕೆ ಬರುತ್ತಿದೆ.ಅದೇ ರೀತಿ ತುಮಕೂರಿನಲ್ಲಿರುವ ಹರಿದು ಹೋಗುವ ನೀರನ್ನು ಸಂಸ್ಕರಿಸಿ ಕೈಗಾರಿಕ ಪ್ರದೇಶಕ್ಕೆ ಪೂರೈಕೆ ಮಾಡಿ, ನೀರಿನ ಸಮಸ್ಯೆ ಪರಿಹರಿಸಬಹುದಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೋದ್ಯಮಿಗಳು ಹಲವಾರು ಬೇಡಿಕೆ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ವಸಂತನರಸಾಪುರ ಕೈಗಾರಿಕಾ ಪ್ರದೇಶವನ್ನು ಕೇಂದ್ರ ಸರ್ಕಾರದಿಂದ ನ್ಯಾಷನಲ್ ಇನ್ವಿಸ್ಟೆಮೆಂಟ್ ಮಾನ್ಯುಫ್ಯಾಕ್ಚರಿಂಗ್ ಝೋನ್ ಪ್ರಾಜೆಕ್ಟ ಎಂದು ಘೋಷಿಸಿದೆ. ಮುಂಬರುವ ವರ್ಷಗಳಲ್ಲಿ ದಕ್ಷಿಣ ಕರ್ನಾಟಕದಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗುತ್ತವೆ. ಇಲ್ಲಿನ ಕಾರ್ಮಿಕರಿಗೆ ಕುಡಿಯುವ ನೀರಿನ ಸಮಸ್ಯೆಯಿದ್ದು, ಶೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದರಲ್ಲದೇ ಸ್ಕಿಲ್ ಪಾರ್ಕ್ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ವಸಂತನರಸಾಪುರ ಕೈಗಾರಿಕಾ ಸಂಘದ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಕೈಗಾರಿಕೆಗಳಿಂದ ಹೊರ ಹೋಗುವ ಅಶುದ್ಧ ನೀರನ್ನು ಶುದ್ಧ ನೀರಾಗಿ ಪರಿವರ್ತಿಸಲು ಸಮಪರ್ಕವಾದ ವ್ಯವಸ್ಥೆ ಕಲ್ಪಿಸಬೇಕು. ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಕಿಲ್ ಟ್ರೈನಿಂಗ್ ಸೆಂಟರ್ ಸ್ಥಾಪಿಸಲು ಸ್ಥಳಾವಕಾಶವಿದ್ದು, ಸರ್ಕಾರ ಇದಕ್ಕೆ 5 ಕೋಟಿ ರೂ. ಹಣದ ಸಹಾಯ ನೀಡಿದಲ್ಲಿ ಸೆಂಟರ ಸ್ಥಾಪಿಸಿ, ಸ್ಥಳೀಯರಿಗೆ ತರಬೇತಿ ನೀಡಿ ಉದ್ಯೋಗ ನೀಡುತ್ತೇವೆ ಎಂದರಲ್ಲದೇ ಕೆಲಸ ಮಾಡುವ ಕಾರ್ಮಿಕರಿಗೆ ಅನುಕೂಲವಾಗುವಂತೆ ಸಮಪರ್ಕವಾದ ಆಸ್ಪತ್ರೆ ವ್ಯವಸ್ಥೆ ಮಾಡಿಕೊಡಬೇಕು.
ಟ್ರಕ್ ಟರ್ಮಿನಲ್ ಮಾಡಿಸಕೊಡಬೇಕು. ರೈಲು ಕಾಮಗಾರಿಯನ್ನು ಶ್ರೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ, ಅಗ್ನಿ ಶಾಮಕ ದಳ ವ್ಯವಸ್ಥೆ, ಕಾನ್ಫರೆನ್ಸ್ ಹಾಲ್, ಡಿಜಿಟಲ್ ಲೈಬ್ರರಿ ವ್ಯವಸ್ಥೆ ನಿರ್ಮಾಣ ಮಾಡಬೇಕೆಂದು ಸಚಿವರಿಗೆ ಮನವಿ ಮಾಡಿದರು.ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ, ಟೆಕ್ನೊ ಸ್ಪಾರ್ಕ್‍ನ ಮೋಹನ್ ಸುರೇಶ್, ವಸಂತನರಸಾಪುರ ಕೈಗಾರಿಕಾ ಪ್ರದೇಶದ ಉಪಾಧ್ಯಕ್ಷ ಜಿ.ವಿ ರಾಮಮೂರ್ತಿ, ಟಿಡಿಸಿಸಿಐ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಸಿ.ವಿ ಹರೀಶ್, ಜಂಟಿ ಕಾರ್ಯದರ್ಶಿ ಎಂ.ಸತ್ಯನಾರಾಯಣ್, ಜಿಲ್ಲಾ ಕೈಗಾರಿಕ ಕೇಂದ್ರದ ಜಂಟಿ ನಿರ್ದೇಶಕ ನಾಗೇಶ್, ಕೆಐಡಿಬಿಯಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ತಬ್ಸುಮ್ ಜಹೇರ್, ಡಿವೈಎಸ್‍ಪಿ ತಿಪ್ಪೇಸ್ವಾಮಿ, ಅಭಿವೃದ್ಧಿ ಅಧಿಕಾರಿ ಸುನೀಲ ಸೇರಿದಂತೆ ಮತ್ತಿತರು ಹಾಜರಿದ್ದರು. ಈ ಕಾರ್ಯಕ್ರಮಕ್ಕೂ ಮುನ್ನ ಉಪ ಪೊಲೀಸ್ ಠಾಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ