ಬಯಲು ಶೌಚ ಮುಕ್ತವಾಗಿಲ್ಲ ತುಮಕೂರು: ಎಸ್‍ಎಲ್‍ಎನ್ ನಗರದಲ್ಲಿ ಬಯಲೇ ಶೌಚಾಲಯ

ತುಮಕೂರು

    ಪ್ರತಿ ಊರು ಬಯಲು ಶೌಚಾಲಯ ಮುಕ್ತವಾಗಿರಬೇಕು, ಪ್ರತಿ ಕುಟುಂಬ ಕಡ್ಡಾಯವಾಗಿ ಶೌಚಾಲಯ ಹೊಂದಿರಬೇಕು ಎಂಬುದು ಸರ್ಕಾರದ ಆಶಯ. ಅದಕ್ಕಾಗಿ ಜನಜಾಗೃತಿ ಮೂಡಿಸಿ, ಶೌಚಾಲಯ ನಿರ್ಮಿಸಿಕೊಡುವ ಹಲವು ಕಾರ್ಯಕ್ರಮಗಳು ಜಾರಿಯಲ್ಲಿವೆ.. ಆದರೆ ಜಿಲ್ಲಾ ಕೇಂದ್ರ ತುಮಕೂರು ನಗರದ ಕ್ಯಾತ್ಸಂದ್ರದ ಎಸ್ ಎಲ್ ಎನ್ ನಗರದಲ್ಲಿ ಬಯಲು ಶೌಚಾಲಯ ಪದ್ದತಿ ಇನ್ನೂ ಉಳಿದಿದೆ. ಇಲ್ಲಿ ಸ್ವಚ್ಚ ಭಾರತ, ಸ್ವಚ್ಚ ತುಮಕೂರು ಘೋಷಣೆಗಳು ಆಚರಣೆಗೆ ಬಂದಿಲ್ಲ.

      ಎಸ್‍ಎಲ್‍ಎನ್ ನಗರದ ಹಲವು ಕುಟುಂಬಗಳಗೆ ಬಯಲೇ ಶೌಚಾಲಯ. ಇಲ್ಲಿನ ಎಷ್ಟೋ ಮನೆಗಳಲ್ಲಿ ಶೌಚಾಲಯವಿಲ್ಲ. ನಗರ ಪಾಲಿಕೆ ಈ ಬಡಾವಣೆಯಲ್ಲಿ ನಿರ್ಮಿಸಿದ್ದ ಸಾರ್ವಜನಿಕ ಶೌಚಾಲಯವನ್ನು ಇಲ್ಲಿನ ಜನ ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ, 15 ಸಾವಿರ ರೂ. ವಿದ್ಯುತ್ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡು, ನಿರ್ವಹಣೆ ಮಾಡಲಾಗುತ್ತಿಲ್ಲ ಎಂದು ಒಂದು ವರ್ಷದಿಂದ ಈ ಶೌಚಾಲಯ ಮುಚ್ಚಲಾಗಿದೆ. ಆಗಿನಿಂದ ಇಲ್ಲಿನ ಜನರಿಗೆ ಬಹಿರ್ದೆಸೆಗೆ ಬಯಲೇ ಗತಿಯಾಗಿದೆ. ಹೀಗಾಗಿ ಈ ಪ್ರದೇಶದ ಖಾಲಿ ಜಾಗಗಳು ಪಬ್ಲಿಕ್ ಟಾಯ್ಲೆಟ್‍ಗಳಾಗಿ ಗಬ್ಬು ನಾರುತ್ತಿವೆ.

     ಶೌಚಾಲಯವಿಲ್ಲದ್ದು ಹೆಣ್ಣು ಮಕ್ಕಳಿಗೆ ದೊಡ್ಡ ಸಮಸ್ಯೆಯಾಗಿದೆ. ಹಗಲು ವೇಳೆ ಶೌಚಕ್ಕೆ ಬಯಲಿಗೆ ಹೋಗಲಾಗದೆ, ಕತ್ತಲಾಗುವವರೆಗೂ ಕಾಯಬೇಕಾದ ಪರಿಸ್ಥಿತಿ, ಕತ್ತಲಲ್ಲೂ ಪುಂಡರ ಭಯ. ಇದು ಇಲ್ಲಿನ ಜನರ ನಿತ್ಯದ ಗೋಳು.

      ಪ್ರತಿ ಕುಟುಂಬಕ್ಕೂ ಶೌಚಾಲಯ ನಿರ್ಮಿಸಿಕೊಡುವ ಯೋಜನೆಗಳಿವೆ, ಆದರೆ ಸ್ವಂತ ಮನೆಯವರಿಗೆ ಮಾತ್ರ ಇಂತಹ ಯೋಜನೆಗಳಲ್ಲಿ ಶೌಚಾಲಯ ಕಟ್ಟಿಕೊಡಲು ಅವಕಾಶ. ಎಸ್‍ಎಲ್‍ಎನ್ ನಗರದಲ್ಲಿ ಸುಮಾರು 50-60 ವರ್ಷಗಳಿಂದ ವಾಸಮಾಡುತ್ತಿರುವ ಕುಟುಂಬದವರಿಗೆ ಹಕ್ಕು ಪತ್ರ ನೀಡಿಲ್ಲ. ಹೀಗಾಗಿ ಇವರು ತಮ್ಮ ಮನೆಗಳಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲಾಗುತ್ತಿಲ್ಲ. ಇಂತಹ ಸುಮಾರು 70-80 ಮನೆಗಳವರು ಶೌಚಾಲಯವಿಲ್ಲದೆ ಬಯಲನ್ನೇ ಆಶ್ರಯಿಸಿದ್ದಾರೆ.

       ನಗರಪಾಲಿಕೆ ತಕ್ಷಣ ಈ ಕುಟುಂಬದವರಿಗೆ ಮನೆ ಹಕ್ಕು ಪತ್ರ ನೀಡಿ ಶೌಚಾಲಯ ಕಟ್ಟಿಸಿಕೊಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಅಲ್ಲಿಯವರೆಗೆ, ಮುಚ್ಚಿರುವ ಸಾರ್ವಜನಿಕ ಶೌಚಾಲಯ ತೆರೆದು ಬಳಕೆಗೆ ಅನುವು ಮಾಡಿಕೊಡಬೇಕು ಎಂದು ನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ.

ಸಮುದಾಯ ಭವನ

      33 ಹಾಗೂ 34ನೇ ವಾರ್ಡ್ ವ್ಯಾಪ್ತಿಗೆ ಬರುವ ಎಸ್‍ಎಲ್‍ಎನ್ ನಗರ ಸಮಸ್ಯೆಗಳ ಕೂಪವಾಗಿದೆ. ಸ್ವಚ್ಚತೆ ಇಲ್ಲ. ಖಾಲಿ ಜಾಗಗಳು ತಿಪ್ಪೆಗಳಾಗಿವೆ. ಕೆಲ ರಸ್ತೆ, ಚರಂಡಿಗಳು ಕಸ ತುಂಬಿ ದುರ್ನಾತ ಬೀರುತ್ತಿವೆ. ನಿಯಮಿತವಾಗಿ ಕಸ ತೆಗೆದು ಸ್ವಚ್ಚಗೊಳಿಸುತ್ತಿಲ್ಲ ಎಂಬುದು ಸ್ಥಳೀಯರ ದೂರು.

       15 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಲಾದ ಅಂಬೇಡ್ಕರ್ ಸಮುದಾಯ ಭವನ ಪೂರ್ಣಗೊಳ್ಳದೆ ಹಾಳು ಬಿದ್ದಿದೆ. ಲಕ್ಷಾಂತರ ರೂ ವೆಚ್ಚ ಮಾಡಿ ಕಟ್ಟಿರುವ ಈ ಭವನ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಮೇಲ್ಛಾವಣಿ ಹಾಳಾಗಿದೆ. ಕಿಟಕಿ, ಬಾಗಿಲು ತುಕ್ಕುಹಿಡಿದಿವೆ. ಆವರಣದ ತುಂಬಾ ಮಲ ಮೂತ್ರದ ದುರ್ನಾತ ಹೊಡೆಯುತ್ತಿದೆ. ಸಾರ್ವಜನಿಕ ಹಣ ಇಲ್ಲಿ ನಿರರ್ಥಕವಾಗಿದೆ.

        ಸಮುದಾಯ ಭವನ ಪೂರ್ಣಗೊಳಿಸಿ ನಾಗರೀಕರ ಬಳಕೆಗೆ ಅನುವು ಮಾಡಿಕೊಡಿ ಎಂದು ಹಲವು ಬಾರಿ ನಗರ ಪಾಲಿಕೆಗೆ, ಶಾಸಕರಿಗೆ ಮನವಿ ಮಾಡಿದರೂ ಯಾರೊಬ್ಬರೂ ಗಮನಹರಿಸಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರ ಕೆ ಎಸ್ ರಾಜಪ್ಪರ ಪುತ್ರ ಸ್ಥಳೀಯ ಮುಖಂಡ ಕೆ ಆರ್ ಎಂ ಸುದರ್ಶನ್ ಹೇಳಿದರು.

        ದಲಿತರು, ಬಡವರು, ಕೂಲಿ ಕಾರ್ಮಿಕರೇ ಹೆಚಾಗಿ ವಾಸಿಸುವ ಎಸ್‍ಎಲ್‍ಎನ್ ನಗರದ ಅನೇಕ ಯುವಕರು ದುಶ್ಚಟದ ವ್ಯಸನಿಗಳಾಗಿದ್ದಾರೆ. ದುಡಿಯುವ ವಯಸ್ಸಿನಲ್ಲಿ ಮದ್ಯ, ಮಾದಕ ವಸ್ತುಗಳ ಸೇವನೆ ಚಟಕ್ಕೆ ಬಿದ್ದು, , ಜವಾಬ್ದಾರಿ ಮರೆತು ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇವರನ್ನು ವ್ಯಸನಮುಕ್ತರನ್ನಾಗಿ ಮಾಡಿ, ಮಾರ್ಗದರ್ಶನ ನೀಡುವ ಮನ ಪರಿವರ್ತನಾ ಕೇಂದ್ರವನ್ನು ಇಲ್ಲಿ ಆರಂಭಿಸಬೇಕು. ಎಂದು ಸುದರ್ಶನ್ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ದಾರೆ.

        ಕ್ಯಾತ್ಸಂದ್ರದಲ್ಲಿ ಹೆದ್ದಾರಿ ಬದಿಯ ಮದ್ಯದಂಗಡಿಗಳು ನಿಯಮ ಮೀರಿ ಬೆಳಿಗ್ಗೆ 5.30ಕ್ಕೇ ವ್ಯಾಪಾರ ಆರಂಭಿಸುತ್ತವೆ. ಬೆಳ್ಳಂಬೆಳಗ್ಗೆ ಕೆಲವರು ಮದ್ಯ ಸೇವಿಸಿ ಕುಟುಂಬದ ಶಾಂತಿ ಹಾಳು ಮಾಡುತ್ತಿದ್ದಾರೆ. ಯುವಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲವನ್ನು ಅಧಿಕಾರಿಗಳು ಪತ್ತೆ ಮಾಡಿ, ದುಷ್ಟ ವ್ಯವಹಾರಗಳಿಗೆ ಕಡಿವಾಣ ಹಾಕಲು ಪೊಲೀಸರು ಇಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಸುದರ್ಶನ್ ಒತ್ತಾಯಿಸಿದ್ದಾರೆ.

       ಇಲ್ಲಿ ಸುಮಾರು 500 ವರ್ಷಗಳ ಹಿಂದಿನ ರಾಮೇಶ್ವರ ಸ್ವಾಮಿ ದೇವಸ್ಥಾನ ಪಾಳು ಬಿದ್ದಿದೆ. ದೇವಸ್ಥಾನದ ಆವರಣ ಅಕ್ರಮ ಚಟುವಟಿಕೆಗಳ ಕೇಂದ್ರವಾಗಿದೆ. ಈ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದು ಅಭಿವೃದ್ಧಿಪಡಿಸಿ, ಅದರ ಪಾವಿತ್ರತೆ ಕಾಪಾಡಬೇಕು ಎಂದು ವಿನಂತಿಸಿದ್ದಾರೆ.

       ಎಸ್ ಎಲ್ ಎನ್ ನಗರದ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸದೆ ನಿರ್ಲಕ್ಷಿಸಿರುವ ಸಂಬಂಧಿಸಿದ ಇಲಾಖೆಗಳು, ಚುನಾಯಿತ ಪ್ರತಿನಿಧಿಗಳ ವಿರುದ್ಧ ಸ್ಥಳಿಯ ನಿವಾಸಿಗಳು ಹೆದ್ದಾರಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap