ಮಳೆ ಎದುರಿಸಲು ಸರ್ವ ಸನ್ನದ್ದವಾದ ಬಿಬಿಎಂಪಿ..!!

ಬೆಂಗಳೂರು:
    ನಗರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಬಿಬಿಎಂಪಿಯು ಮಳೆಗಾಲದಲ್ಲಿ ಸಂಭವಿಸುವ ಅವಾಂತರಗಳನ್ನು ತಪ್ಪಿಸಲು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪೂಜ್ಯ ಮಹಾಪೌರರು ತಿಳಿಸಿದರು.
     ನಗರದಲ್ಲಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮಹಾಪೌರರು ಶುಕ್ರವಾರ ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರರನ್ನು ಮಹಾಪೌರರ ಕಚೇರಿಗೆ ಕರೆಸಿ ಏನೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ಪಡೆದುಕೊಂಡರು.
      ಬಳಿಕ ಮಾತನಾಡಿದ ಮಹಾಪೌರರು, ನಗರದಲ್ಲಿ ಭಾರಿ ಮಳೆ ಬಂದು ಪ್ರವಾಹ ಉಂಟಾದರೆ ಏನೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಈ ಹಿಂದೆ ಸನ್ಮಾನ್ಯ ಉಪಮುಖ್ಯಂತ್ರಿಗಳ ಜೊತೆ ಸಭೆ ನಡೆಸಲಾಗಿದೆ. ಆ ಬಳಿಕ ರಾಜಕಾಲುವೆ ವಿಭಾಗದ ಅಧಿಕಾರಿಗಳು ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾವಹ ಉಂಟಾಗುವ 1,000ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿ ಮಳೆಗಾಲದಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಿದ್ದಾರೆ ಎಂದರು.
      ಸದ್ಯ ನಗರದ 182 ಸೂಕ್ಷ್ಮ ಪ್ರದೇಶಗಳಲ್ಲಿ ಮಾತ್ರ ಪ್ರವಾಹ ಉಂಟಾಗುವ ಪರಿಸ್ಥಿತಿ ಇದ್ದು, 80 ರಿಂದ 120 ಮಿ.ಮೀ ಮಳೆಯಾದರೆ ಯಾವುದೇ ಸಮಸ್ಯೆ ಎದುರಾಗುವುದುದಿಲ್ಲ. 120 ಮಿ.ಮೀ ಮೆಲ್ಪಟ್ಟು ಮಳೆ ಬಂದರೆ ಮಾತ್ರ ಪ್ರವಾಹದ ಸಮಸ್ಯೆ ಎದುರಾಗಲಿದೆ. 182ರ ಪೈಕಿ 28 ಅತಿ ಸೂಕ್ಷ್ಮ ಪ್ರದೇಶಗಳಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಎಂಡಿಸಿ)ದ ಸಹಯೋಗದಲ್ಲಿ 18 ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ನೀರಿನ ಮಟ್ಟ ಅಳೆಯುವ ಸಂವೇದಕ(Water Level Sensor)ಗಳನ್ನು ಅಳವಡಿಸಲಾಗಿದೆ. ಕೆಎಸ್‌ಎನ್‌ಎಂಡಿಸಿ ಉಚಿತವಾಗಿ ಸೆನ್ಸಾರ್‌ಗಳನ್ನು ಅಳವಡಿಸಿದ್ದು, ಪಾಲಿಕೆಯಿಂದ ಯಾವುದೇ ಹಣ ವ್ಯಯಿಸಿಲ್ಲ. ಉಳಿದ 10 ಅತಿ ಸೂಕ್ಷ್ಮ ಪ್ರದೇಶಗಳಲ್ಲಿಯೂ ಶೀಘ್ರ ಸೆನ್ಸಾರ್ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಸೆನ್ಸಾರ್ ಕಾರ್ಯ ನಿರ್ವಹಿಸುವ ವಿಧಾನ:
   ಒಂದು ಸೆನ್ಸಾರ್ ಅಳವಡಿಸಲು 35 ಸಾವಿರು ರೂ. ತಗಲುತ್ತದೆ. ಪ್ರತಿಯೊಂದು ಸೆನ್ಸಾರ್ ಯಂತ್ರಕ್ಕೂ ಸೋಲಾರ್ ಅಳವಡಿಕೆ ಮಾಡಲಾಗಿದೆ. ಅದರಿಂದ ನಿತ್ಯ ಅಂತರ್ಜಲದ ಮೂಲಕ ಕೆಎಸ್‌ಎನ್‌ಡಿಎಂಸಿ ನಿಯಂತ್ರಣ ಕೊಠಡಿಗೆ ಕೂಡಲೆ ಮಾಹಿತಿ ತಿಳಿಯಲಿದೆ. ಅವರು ಪಾಲಿಕೆ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ರವಾನೆ ಮಾಡಲಿದ್ದಾರೆ. ಸೆನ್ಸಾರ್ ಅಳವಡಿಸಿರುವ ಕಡೆ ರಾಜಕಾಲುವೆಯಲ್ಲಿ ಹರಿಯುವ ನೀರಿನ ಮಟ್ಟವನ್ನು ಬಣ್ಣದ ಆಧಾರದಲ್ಲಿ ತಿಳಿಯಬಹುದಾಗಿದೆ.
 
    ಅದರಂತೆ ಹಸಿರು, ನೀಲಿ, ಕೆಂಪು ಹಾಗೂ ಕಪ್ಪು ಬಣ್ಣದಲ್ಲಿ ಗುರುತಿಸಲಾಗುತ್ತದೆ. ಹಸಿರು ಹಾಗೂ ನೀಲಿ ಬಣ್ಣವಿದ್ದರೆ ಯಾವುದೇ ಅಪಾಯವಿರುವುದಿಲ್ಲ. ಕೆಂಪು ಬಣ್ಣವಿದ್ದರೆ ಅಪಾಯ ಎಂದರ್ಥ ಹಾಗೂ ಕಪ್ಪು ಬಣ್ಣಕ್ಕೆ ತಿರುಗಿದರೆ ಪ್ರವಾಹ ಉಂಟಾಗಲಿದೆ ಎಂಬ ಮಾಹಿತಿ ತಿಳಿಯಲಿದೆ. ಆ ಮಾಹಿತಿಗನುಗುಣವಾಗಿ ಪ್ರವಾಹ ಉಂಟಾಗುವ ಸ್ಥಳದ ಸುತ್ತಮುತ್ತಲಿನ ನಿವಾಸಿಗಳನ್ನು ಬೇರೆಡೆ ತೆರಳುವಂತೆ ಸೂಚನೆ ನೀಡಬಹುದು. ಇದರಿಂದ ಪ್ರವಾಹದಿಂದಾಗುವ ಅನಾಗುತಗಳನ್ನು ತಪ್ಪಿಸಬಹುದಾಗಿದೆ ಎಂದು ಮಹಾಪೌರರು ತಿಳಿಸಿದರು. 
ತಾತ್ಕಾಲಿಕ ಕೊಠಡಿ ಸ್ಥಾಪನೆ:
     ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದಾಗುವ ಅನಾಹುತಗಳ ನಿವಾರಣೆಗೆ ಈಗಾಗಲೇ 9 ಕಡೆ ಶಾಶ್ವತ ನಿಯಂತ್ರಣಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಇದೀಗ ಆಯಾ ವಲಯದ ಪ್ರತಿ ಉಪವಿಭಾಗ ಕಚೇರಿಗಳಲ್ಲಿ 63 ಕಡೆ ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ತಾತ್ಕಾಲಿಕ ನಿಯಂತ್ರಣಾ ಕೊಠಡಿಗಳಲ್ಲಿ ತುರ್ತು ಪರಿಹಾರ ಕಾರ್ಯಕ್ಕೆ ಅಗತ್ಯವಿರುವ ಯಂತ್ರಗಳು, ಸಲಕರಣೆಗಳು ಹಾಗೂ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದ್ದು, ಸಮಸ್ಯೆ ಇರುವ ಕಡೆ ಸಿಬ್ಬಂದಿ ತೆರಳಿ ನಿವಾರಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಮರ ತೆರವಿಗೆ 28 ತಂಡ:
    ಮಳೆಗಾಲದಲ್ಲಿ ಧರೆಗುರುಳುವ ಮರಗಳನ್ನು ತೆರವುಗೊಳಿಲು ಈಗಾಗಲೇ 21 ತಂಡಗಳಿವೆ. ಇದೀಗ ಹೆಚ್ಚುವರಿಯಾಗಿ 7 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ತಂಡದಲ್ಲೂ ಏಳು ಕಾರ್ಮಿಕರು, ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಮರಗಳನ್ನು ತೆರವುಗೊಳಿಸುವ ಅವಶ್ಯಕತೆಯಿರುವ ಗರಗಸ, ಕೊಂಬೆಗಳನ್ನು ತುಂಡರಿಸುವ ಯಂತ್ರ, ಹಾರೆ, ಹಗ್ಗ ಸೇರಿದಂತೆ ಇನ್ನಿತರ ಸಲಕರಣೆಗಳನ್ನು ನೀಡುವುದರ ಜತೆಗೆ ಕಟಾವು ಮಾಡಿದ ಮರದ ತುಂಡುಗಳ ಸಾಗಣೆಗೆ ವಾಹನಗಳನ್ನು ಕೂಡಾ ನಿಗದಿ ಮಾಡಲಾಗಿದೆ ಎಂದು ಮಹಾಪೌರರು ತಿಳಿಸಿದರು.
ಟ್ರಾಶ್ ಬ್ಯಾರಿಯರ್ ಅಳವಡಿಕೆ:
     ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿದ್ದ ಕಸವನ್ನು ತೆರವುಗೊಳಿಸಲು ಈಗಾಗಲೇ ಐದು ಕಡೆ ಟ್ರಾಶ್ ಬ್ಯಾರಿಯರ್(ಕಸ ತಡೆಯುವ ಹಗುರ ಅಲ್ಯೂಮಿನಿಯಂ ಬಲೆ) ಅಳವಡಿಸಲಾಗಿದೆ. ಉಳಿದ ಎಲ್ಲಾ ಕಡೆ ಟ್ರಾಶ್ ಬ್ಯಾರಿಯರ್ ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರರು ಮಹಾಪೌರರಿಗೆ ಮಾಹಿತಿ ನೀಡಿದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link