ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿಯ ವಾರ್ ರೂಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರಿಗೆ ಕೋವಿಡ್ -19 ದೃಢಪಟ್ಟಿದೆ.
ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಯ ಆವರಣ ಹಾಗೂ ಅವರ ಕಚೇರಿ ಇದ್ದ ಕಟ್ಟಡದ ನೆಲಮಹಡಿ ಮತ್ತು ಮೊದಲನೆ ಮಹಡಿಯನ್ನು ಸೀಲ್ ಡೌನ್ ಮಾಡಿ, ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿ ಸ್ವಚ್ಛಗೊಳಿಸಲಾಗುತ್ತಿದೆ. ಈ ಸಂಬಂಧ ಕಚೇರಿ ಸುತ್ತ ಮುತ್ತ ಸಾರ್ವಜನಿಕರ ಭೇಟಿಯನ್ನು ತಾತ್ಕಾಲಿಕವಾಗಿ ನಿರ್ಭಂದಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.
ಸಹಾಯಕ ಆಯುಕ್ತ ದರ್ಜೆಯ ಈ ಅಧಿಕಾರಿ ಶುಕ್ರವಾರದ ಬಳಿಕ ಕಚೇರಿಗೆ ಬಂದಿರಲಿಲ್ಲ. ‘ಆ ಅಧಿಕಾರಿಯ ಸಂಪರ್ಕಕ್ಕೆ ಬಂದಿರುವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಿದ್ದೇವೆ. ಬಿಬಿಎಂಪಿಯ ಇಡೀ ಕೇಂದ್ರ ಕಚೇರಿಯನ್ನು ಸೀಲ್ ಡೌನ್ ಮಾಡುವ ಅಗತ್ಯವಿಲ್ಲ. ಆದರೆ ಇಡೀ ಕಚೇರಿ ಪ್ರಾಂಗಣವನ್ನು ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ತಿಳಿಸಿದರು.
ಆರೋಗ್ಯ ವಿಭಾಗದವರಲ್ಲದ ಅನೇಕ ಅಧಿಕಾರಿಗಳನ್ನು ಕೊರೊನಾ ನಿಯಂತ್ರಣ ತಂಡದ ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿತ್ತು. ಇವರು ಕೋವಿಡ್-19 ಕಾಣಿಸಿಕೊಂಡ ಪ್ರದೇಶದಲ್ಲಿ ಓಡಾಡಿದಾಗ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು. ಸೋಂಕಿತ ವ್ಯಕ್ತಿ ಶಿಕ್ಷಣ ಇಲಾಖೆಯ ಅಧಿಕಾರಿಯಾಗಿದ್ದರಿಂದ ಬಿಬಿಎಂಪಿ ಶಾಲಾ ಕಾಲೇಜುಗಳ ಶಿಕ್ಷಕರು ಉಪನ್ಯಾಸಕರು ಅವರನ್ನು ಭೇಟಿಯಾಗಿರುವ ಸಾಧ್ಯತೆಗಳಿವೆ. ಇತ್ತೀಚಿನ ದಿನಗಳಲ್ಲಿ ಅವರ ಸಂಪರ್ಕಕ್ಕೆ ಬಂದವರು ಬಿಬಿಎಂಪಿ ಯನ್ನು ಸಂಪರ್ಕಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು ಎಂದರು.