ಬೆಂಗಳೂರು:
ಬಿಬಿಎಂಪಿ ನಿರ್ವಹಣೆಯ 156 ಶಾಲಾ-ಕಾಲೇಜುಗಳಲ್ಲಿ ಉನ್ನತ ವ್ಯಾಸಂಗ ವ್ಯವಸ್ಥೆ ಕಲ್ಪಿಸಲು ಖಾಸಗಿ ಸಂಸ್ಥೆಗಳು ಮುಂದೆ ಬಂದಿದ್ದು, 500 ಕೋಟಿ ರೂಪಾಯಿ ಮೊತ್ತದಲ್ಲಿ ಬಿಬಿಎಂಪಿ ಶಾಲಾ-ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಇದರ ಲಾಭ ತಲುಪಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಬಿಬಿಎಂಪಿ ರೋಶಿನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಸಂಸ್ಥೆಗಳ ವಿನೂತನ ಪ್ರಯತ್ನಕ್ಕೆ ತಮ್ಮ ಶುಭ ಹಾರೈಕೆ ಸಲ್ಲಿಸಿದರು.
ಮಲೆನಾಡು ಪ್ರದೇಶದಲ್ಲಿ ಪಕ್ಕ ಕಾಲು ಸೇತುವೆಗಳನ್ನು ನಿರ್ಮಿಸಲು 121 ಕೋಟಿ ರೂಪಾಯಿ ಮಂಜೂರು ಮಾಡಲಾಗಿದ್ದು, ಇನ್ನು ಹತ್ತು ದಿನಗಳಲ್ಲಿ ಕೆಲಸ ಆರಂಭವಾಗಲಿದೆ; ಮಳೆಗಾಲದಲ್ಲಿ ಮಕ್ಕಳು ಶಾಲೆಗೆ ಹೋಗುವಾಗ ಕಾಲುವೆಗೆ ಬೀಳುವ ಪರಿಸ್ಥಿತಿ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಮಳೆ ಅನಾಹುತದಿಂದ ಜನಸಾಮಾನ್ಯರು, ತತ್ತರಿಸಿದ್ದಾರೆ; ನಗರ ಪಾಲಿಕೆ ಅಧಿಕಾರಿಗಳು ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಳ್ಳುವ ಪ್ರಸಂಗ ಅವಹೇಳನಕಾರಿ. ಸ್ವಚ್ಛತೆ ಮತ್ತು ಗುಂಡಿ ಮುಚ್ಚುವ ಕೆಲಸವನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ಖಾಸಗಿ ವಲಯ ಮುಂದೆ ಬಂದು ಸರ್ಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟ ಸುಧಾರಿಸಲು ಪ್ರಯತ್ನಿಸಿದೆ; ಇದು ಯಶಸ್ವಿಯಾದರೆ, ಇದರ ವಿಸ್ತಾರದತ್ತ ಗಮನಹರಿಸಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ರಸ್ತೆ ಗುಂಡಿ, ಚರಂಡಿ ಮುಚ್ಚಲು ನ್ಯಾಯಾಲಯ ಆದೇಶ ಹೊರಡಿಸುವ ಪರಿಸ್ಥಿತಿಯು ಆಡಳಿತ ಹೇಗಿದೆ ಎಂಬುವುದನ್ನು ತೋರಿಸುತ್ತದೆ. ರಸ್ತೆ ದುರಸ್ಥಿಗೆ 10 ಸಾವಿರ ಕೋಟಿ ಮಂಜೂರು ಮಾಡಲಾಗಿದೆ. ಜನರಿಗೆ ಅನುಕೂಲವಾಗುವಂತೆ ಇದರ ಸದ್ವಿನಿಯೋಗ ಆಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಖಾಸಗಿ ವಲಯ ಮುಂದಾಗಬೇಕು ಎಂದು ಆಹ್ವಾನ ನೀಡಿದ ಅವರು, ಬೆಂಗಳೂರಿನಲ್ಲಿ ಇನ್ನು ಎರಡ್ಮೂರು ತಿಂಗಳಲ್ಲಿ ಎಲೆಕ್ಟ್ರಿಕ್ ಸಾರ್ವಜನಿಕ ಬಸ್ ಸಂಚಾರ ಆರಂಭವಾಗಲಿದ್ದು, ಐದಾರು ವರ್ಷಗಳಲ್ಲಿ ಎಲ್ಲ ಸಾರ್ವಜನಿಕ ಬಸ್ ಗಳು ಎಲೆಕ್ಟ್ರಿಕ್ ಬಸ್‍ಗಳು ಆಗಲಿದ್ದು, ಪರಿಸರ ಸಂರಕ್ಷಣೆಗೆ ಉತ್ತೇಜನ ದೊರೆಯಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ