ಬೆಂಗಳೂರು
ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದರೆ ಅವರಿಗೆ ಕಲ್ಲು ಹೊಡೆಯಿರಿ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹಾಸನದ ಅರಸಿಕೆರೆಯ ಚುನಾವಣಾ ಪ್ರಚಾರ ಸಭೆಯಲ್ಲಿ ನೀಡಿರುವ ಹೇಳಿಕೆಗೆ ಮೈತ್ರಿ ಪಕ್ಷ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದು, ಯಾವ ಶಾಸಕರೂ ಕೀಳು ಮಟ್ಟದ ರಾಜಕಾರಣ ಮಾಡಬಾರದು ಎಂದು ಹೇಳಿದ್ದಾರೆ.
ಬೀದರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಈಶ್ವರ ಖಂಡ್ರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಂದ ಬಿ ಫಾರಂ ಪಡೆದ ನಂತರ ಮೋದಿ ಕುರಿತು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮಾಡಿರುವ ಟೀಕೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ ಪ್ರತಿ ಪಕ್ಷ ಬಿಜೆಪಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ. ಆದರೆ ನಮ್ಮ ಮೈತ್ರಿಕೂಟದ ಶಾಸಕರು ಅವರಂತೆ ಸಹನೆ ಕಳೆದುಕೊಳ್ಳುವುದು ಬೇಡ. ಟೀಕೆ ಮಾಡುವಾಗ ಶಾಸಕರು ಸಂಯಮ ಕಾಯ್ದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
” ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ದಕ್ಷಿಣ ಸೇರಿದಂತೆ ರಾಜ್ಯದ ಯಾವುದೇ ಲೋಕಸಭಾ ಕ್ಷೇತ್ರದಿಂದ ಬೇಕಾದರೂ ಸ್ಪರ್ಧಿಸಲಿ. ನಮಗೇನು ಭಯವಿಲ್ಲ. ಪ್ರಧಾನಿ ಅವರ ಉಮೇದುವಾರಿಕೆಯನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ ಎಂದರು.
ಬಿಜೆಪಿಯಲ್ಲಿ ಬಿಜೆಪಿ ಭೀಷ್ಮ ಪಿತಾಮಹಾ ಎನಿಸಿಕೊಂಡಿರುವ ಎಲ್.ಕೆ. ಅಡ್ವಾಣಿ ಅವರನ್ನು ಅವರ ರಾಜಕೀಯ ಬದುಕಿನ ಕೊನೆ ಕಾಲದಲ್ಲಿ ಗೌರವಯುತವಾಗಿ ಕಳುಹಿಸಿಕೊಡುವ ವ್ಯವಸ್ಥೆಯಾಗಿಲ್ಲ. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಲು ಅಡ್ವಾಣಿ ಅವರ ಕೊಡುಗೆ ಅಪಾರ. ಆದರೆ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಅಡ್ವಾಣಿ ಅವರಿಗೆ ಮೋದಿ ಅವಮಾನ ಮಾಡಿದ್ದಾರೆ. ಆದರೆ ಭಾಷಣದಲ್ಲಿ ಮಾತ್ರ ಸಂಸ್ಕಾರ, ಸಂಸ್ಕೃತಿ ಬಗ್ಗೆ ಮೋದಿ ಮಾತಾಡುತ್ತಾರೆ ಎಂದು ಟೀಕಿಸಿದರು.
ಮಂಡ್ಯ ಮತ್ತು ತುಮಕೂರು ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವ ಬಗ್ಗೆ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಹೀಗಾಗಿ ಎಲ್ಲರ ಜತೆಯೂ ಕೂಡ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ. ಮಂಡ್ಯದಲ್ಲೀಗ ಪರಿಸ್ಥಿತಿ ಬೇರೆ ಇದೆ. ಆದರೆ ಬರುವ ದಿನಗಳಲ್ಲಿ ಇದು ಖಂಡಿತ ಬದಲಾಗಲಿದೆ ಎಂದರು.
ದೇವೇಗೌಡರು ಹಿರಿಯ ಮತ್ಸದ್ದಿ ರಾಜಕಾರಣಿ. ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ಅವರ ವಿವೇಚನೆಗೆ ಬಿಟ್ಟಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ಹೇಗೆ ರಾಜಕಾರಣ ಮಾಡಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಅವರೇ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
