ದಾವಣಗೆರೆ:
ಆನ್‍ಲೈನ್ ಬ್ಯಾಂಕಿಂಗ್ ವ್ಯವಹಾರ ನಡೆಸುವವರು ಅತೀ ಜಾಗರೂಕತೆ ವಹಿಸುವ ಅವಶ್ಯಕತೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಸೂಚ್ಯವಾಗಿ ಎಚ್ಚರಿಸಿದರು.
ನಗದ ಯು.ಬಿ.ಡಿ.ಟಿ. ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ಶುಕ್ರವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಂಡಿಪೇಟೆ ಶಾಖೆ ವತಿಯಿಂದ ಏರ್ಪಡಿಸಿದ್ದ ಜಾಗೃತಾ ತಿಳುವಳಿಕೆ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳ್ಳರೇ ಮನೆಗಳ ಬೀಗ ಮುರಿದು ಕನ್ನ ಹಾಕಿ ಹಣ ಕದಿಯಬೇಕಾಗಿಲ್ಲ. ಈಗ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕ್ಷಣಾರ್ಧದಲ್ಲಿ ಕದಿಯುವ ಚಾಣಾಕ್ಷರಿದ್ದಾರೆ. ಹೀಗಾಗಿ ಆನ್‍ಲೈನ್ ಬ್ಯಾಂಕಿಂಗ್ ವ್ಯವಹಾರ ನಡೆಸುವವರು ಅತೀ ಎಚ್ಚರ ಹಾಗೂ ಜಾಗರೂಕರಾಗಿರಬೇಕೆಂದು ಕಿವಿಮಾತು ಹೇಳಿದರು.
ಬಾಗಿಲು ಮುರಿದು ಮನೆಗೆ ಕನ್ನ ಹಾಕಿದ ಕಳ್ಳರನ್ನು ಹುಡುಕಬಹುದು. ಆದರೆ, ಎಲ್ಲೋ ಕುಳಿತು ಅನಾಯಾಸವಾಗಿ ನಿಮ್ಮ ಖಾತೆಯಲ್ಲಿರುವ ಹಣ ಕದಿಯುವವರನ್ನು ಹುಡುಕುವುದು ಸುಲಭವಲ್ಲ. ಆದ್ದರಿಂದ ಆನ್‍ಲೈನ್ ಬ್ಯಾಂಕಿಂಗ್ ವ್ಯವಹಾರ ನಡೆಸುವಾಗ ಎಚ್ಚರ ವಹಿಸಬೇಕೆಂದ ಅವರು, ಮೊಬೈಲ್ ಸಿಮ್ ಖರೀದಿಸುವಾಗ ಖಾಲಿ ಅರ್ಜಿಗೆ ಯಾರೂ ಸಹಿ ಹಾಕಬೇಡಿ. ಅರ್ಜಿಯನ್ನು ಪೂರ್ಣ ಓದಿ, ನಿಮ್ಮ ಹೆಸರು, ಜನ್ಮದಿನಾಂಕ ಸಹಿತ ದಾಖಲೆ ಭರ್ತಿ ಮಾಡಿ ಸಹಿ ಮಾಡಬೇಕು. ಕೆಲವು ಸಾಫ್ಟ್‍ವೇರ್ ತಂತ್ರಾಂಶ ಬಳಸಿ ನಿಮ್ಮ ದಾಖಲೆಗಳನ್ನು ಕದಿಯುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಕಾರಣಕ್ಕೂ ನಿಮ್ಮ ಸಿಮ್ ಕಾರ್ಡ್ ಅಥವಾ ಮೊಬೈಲ್ ಅನ್ನು ಬೇರೆಯವರಿಗೆ ನೀಡಬಾರದು ಎಂದು ಸಲಹೆ ನೀಡಿದರು.
ಮೊಬೈಲ್‍ನಲ್ಲಿ ಆನ್ಲೈನ್ ಬ್ಯಾಂಕಿಂಗ್ ಸೇವೆ ಉಪಯೋಗಿಸುವಾಗ ಆದಷ್ಟು ನಿಮ್ಮ ಸ್ವಂತ ಡೇಟಾದ ನೆಟ್‍ವರ್ಕ್ ಬಳಸಿ, ಸೈಬರ್‍ಕೆಫೆ ಸೆಂಟರ್‍ಗಳಲ್ಲಿ ಯಾವುದೇ ಕಾರಣಕ್ಕೂ ಬ್ಯಾಂಕಿಂಗ್ ವ್ಯವಹಾರ ಮಾಡಬೇಡಿ ನಿಮ್ಮ ಬ್ಯಾಂಕ್‍ನ ಯೂಸರ್‍ನೇಮ್, ಪಾಸ್‍ವರ್ಡ್ ಅನ್ನು ಸ್ವತಃ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಯಾರೊಂದಿಗೂ ಹಂಚಿಕೊಳ್ಳಬಾರದು. ಬ್ಯಾಂಕ್ ಖಾತೆಯಿಂದ ಹಣ ಕಳುವಾದರೆ ಸಾಧ್ಯವಾದಷ್ಟೂ ಬೇಗ ಪೊಲೀಸರ ಗಮನಕ್ಕೆ ತನ್ನಿ. ನಾಲ್ಕಾರು ದಿನ ಅಥವಾ ವಾರದ ನಂತರ ದೂರು ನೀಡಿದರೆ, ಅಪರಾಧಿಗಳನ್ನು ಹಿಡಿಯುವುದು ಕಷ್ಟ ಎಂದರು.
ಪ್ರಾಸ್ತಾವಿಕ ಮಾತನಾಡಿದ ಎಸ್‍ಬಿಐ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಅಸಿತ್‍ಕುಮಾರ್ ನಂದಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಣ ಕಳೆದುಕೊಳ್ಳುವ ಮೊದಲೇ ಮುನ್ನೆಚ್ಚರಿಕೆ ವಹಿಸಿದರೆ ಅಪರಾಧಗಳನ್ನು ತಡೆದು, ಭ್ರಷ್ಠಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಬಹುದಾಗಿದೆ. ಇದಕ್ಕಾಗಿ ಎಲ್ಲರೂ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಸೈಬರ್ ಕ್ರೈಂ ಬ್ರಾಂಚ್‍ನ ಪೊಲೀಸ್ ನಿರೀಕ್ಷಕ ಟಿ.ವಿ. ದೇವರಾಜ್ ಸೈಬರ್ ಅಪರಾಧಗಳನ್ನು ತಡೆಯುವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಬಿ.ಶಿವಪ್ರಸಾದ್ ಬಿ.ದಂಡಗಿ, ಹೆಚ್.ಮುರಳೀಧರ್ ಉಪಸ್ಥಿತರಿದ್ದರು. ಟಿ.ಮಂಜುನಾಥ ಸ್ವಾಗತಿಸಿದರು. ಆಶಾ ಎಸ್.ಆರ್., ಕೆ.ಎಸ್. ಅಶ್ವನಿ ನಿರೂಪಿಸಿದರು. ಮಧುಪ್ರಿಯ, ಪೂಜಾ ಪಟೇಲ್, ಎನ್.ಆರ್. ಜ್ಯೋತಿ ಪ್ರಾರ್ಥಿಸಿದರು. ಎಸ್‍ಬಿಐ ಬ್ಯಾಂಕ್‍ನ ಹಿರಿಯ ವ್ಯವಸ್ಥಾಪಕ ಪಿ.ಎಂ.ಮಠದ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ