ಆರ್ಥಿಕ ಸ್ವಾವಲಂಬನೆಗೆ ಪೂರಕವಾದ ವೃತ್ತಿ ಶಿಕ್ಷಣ ಕಲಿಯಲು ಕರೆ

ಗುಬ್ಬಿ
     ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದ ಅವಶ್ಯಕತೆ ಇದ್ದು ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಮ್ಮ ಬದುಕು ರೂಪಿಸಿಕೊಳ್ಳಲು ಅನುಕೂಲವಾಗುವಂತೆ ವಿವಿಧ ವೃತ್ತಿ ಕೌಶಲ್ಯಗಳನ್ನು ಕಲಿಯುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಪೂರಕವಾದ ವೃತ್ತಿ ಶಿಕ್ಷಣವನ್ನು ಕಲಿಯುವತ್ತ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ:ನವ್ಯಬಾಬು ಕರೆ ನೀಡಿದರು
       ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ, ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ, ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆತ್ಮವಿಶ್ವಾಸ ಬೆಳೆಸುವ ಶಿಕ್ಷಣ ನಮ್ಮಲ್ಲಿ ಸಾರ್ಥಕ ಬದುಕು ರೂಪಿಸುತ್ತದೆ. ಇಂತಹ ಶಿಕ್ಷಣ ಗ್ರಾಮೀಣ ಭಾಗಕ್ಕೆ ಪಸರಿಸಲಾಗುತ್ತಿದೆ. ಆದರೂ ಸಾಕಷ್ಟು ಪ್ರದೇಶಕ್ಕೆ ಶಿಕ್ಷಣ ತಲುಪಿಲ್ಲ. ಹೆಣ್ಣು ಮಕ್ಕಳ ಶಿಕ್ಷಣವಂತೂ ಶೇ.17.3 ರಷ್ಟು ಸಾಧನೆಯಾಗಬೇಕಿದೆ. ಉದ್ಯೋಗಕ್ಕೆ ಸೀಮಿತವಾದ ಶಿಕ್ಷಣ ಹೊರತಾದ ನೈತಿಕ ಶಿಕ್ಷಣ ಮಕ್ಕಳಿಗೆ ಕಲಿಸಿ ವಿಶಾಲ ಮನೋಭಾವ ಬೆಳೆಸಬೇಕಿದೆ ಎಂದರು.
 
         ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ವಿವಿಧ ವೃತ್ತಿ ಕೌಶಲ್ಯಗಳ ಅಗತ್ಯತೆ ಇದ್ದು ಶಿಕ್ಷಣದ ಜೊತೆಗೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಬಡಗಿ, ರೇಷ್ಮೆ ಸಾಕಣೆ ಸೇರಿದಂತೆ ಆರ್ಥಿಕ ಸ್ವಾವಲಂಬನೆಗೆ ಅನುಕೂಲವಾಗುವಂತಹ ವೃತ್ತಿಗಳನ್ನು ಶಿಕ್ಷಣದ ಜೊತೆಗೆ ಮಕ್ಕಳಿಗೆ ನೀಡುವುದರಿಂದ ಮಕ್ಕಳ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು, ಇಂತಹ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನಗಳು ಮಕ್ಕಳಲ್ಲಿ ಹೊಸ ಆಯಾಮ ನೀಡಲಿವೆ ಎಂದು ತಿಳಿಸಿದರು.
         ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಮಂಜುನಾಥ್ ಮಾತನಾಡಿ, ಪ್ರಸ್ತುತ ಶಿಕ್ಷಣದಲ್ಲಿ ವೃತ್ತಿ ಶಿಕ್ಷಣ ಮಕ್ಕಳಿಗೆ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸಾಗಿದೆ ಎಂದ ಅವರು, ಕಲಿಕೆಯ ಜೊತೆಗೆ ಗಳಿಕೆಯ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುವ ವೃತ್ತಿ ಶಿಕ್ಷಣ ಶೈಕ್ಷಣಿಕ ಜಿಲ್ಲೆಯಲ್ಲಿ 184 ಶಾಲೆಯಲ್ಲಿ ಸಕ್ರಿಯವಾಗಿ ನಡೆದಿದೆ ಎಂದು ತಿಳಿಸಿದ ಅವರು, ಹೊಲಿಗೆಯ ಜೊತೆಗೆ ವೃತ್ತಿ ಶಿಕ್ಷಣ, ಕಸೂತಿ, ತೋಟಗಾರಿಕೆ, ಕರಕುಶಲ ಕಲೆಯನ್ನ ಮಕ್ಕಳಿಗೆ ಕಲಿಸುವಲ್ಲಿ ಶಿಕ್ಷಕರು ಉತ್ಸುಕರಾಗಿದ್ದಾರೆ.
           ಆದರೆ ಇಂದಿನ ಜಾಗತೀಕರಣಕ್ಕೆ ತಕ್ಕಂತೆ ಕಂಪ್ಯೂಟರ್ ಕಲಿಕೆ, ಸೌಂದರ್ಯ ವರ್ಧಕ ಬಳಕೆ ಹಾಗೂ ಮೋಟಾರ್ ದುರಸ್ಥಿ ಕಾರ್ಯಕ್ಕೆ ಬೇಡಿಕೆ ಹೆಚ್ಚಿದೆ ಎಂದ ಅವರು, ತುಮಕೂರು ಜಿಲ್ಲೆಯು ಶೈಕ್ಷಣಿಕ ಪ್ರಗತಿಯಲ್ಲಿ 10 ನೇ ಸ್ಥಾನ ಪಡೆದಿದ್ದು, ಮುಂದಿನ ದಿನದಲ್ಲಿ ಫಲಿತಾಂಶ ಹೆಚ್ಚು ಮಾಡಿಕೊಂಡು 5 ಸ್ಥಾನ ಪಡೆಯಲು ಶ್ರಮಿಸಲಾಗುತ್ತಿದೆ. ಈ ಜೊತೆಗೆ ಕಟ್ಟಡಗಳ ಕೊರತೆ ನೀಗಿಸಲು 158 ಕೋಟಿ ರೂಗಳ ಅವಶ್ಯವಿದೆ. ಸದ್ಯಕ್ಕೆ 16 ಕೋಟಿ ರೂಗಳ ಕೆಲಸ ಆರಂಭಿಸಲಾಗಿದೆ ಎಂದರು. 
 
           ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಹೆಚ್.ಜಗನ್ನಾಥ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ವೃತ್ತಿ ಕೌಶಲ್ಯಗಳು ಹೆಚ್ಚು ಸಹಕಾರಿಯಾಗುವುದರ ಜೊತೆಗೆ ಮುಂದಿನ ಭವಿಷ್ಯ ರೂಪಿಸಲಿವೆ. ಆದ್ದರಿಂದ ಪ್ರತಿ ಶಾಲೆಯಲ್ಲಿ ವೃತ್ತಿ ಶಿಕ್ಷಣ ಅತ್ಯವಶ್ಯಕವಿದ್ದು ಶಿಕ್ಷಣ ಇಲಾಖೆ ವೃತ್ತಿ ಶಿಕ್ಷಣ ಕಲಿಕೆ ಹೆಚ್ಚಿನ ನೆರವು ಮತ್ತು ಪ್ರೋತ್ಸಾಹ ನೀಡುವತ್ತ ಮುಂದಾಗಬೇಕಿದೆ ಎಂದು ತಿಳಿಸಿದರು.
          ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಮಾಜಿ ರಾಜ್ಯಾಧ್ಯಕ್ಷ ಎಚ್.ಡಿ.ಯಲ್ಲಪ್ಪ ಮಾತನಾಡಿ, ವೃತ್ತಿ ಶಿಕ್ಷಣ ಕಡೆಗಣಿಸಲಾಗಿದ್ದ ಕಾಲದಲ್ಲಿ ಈ ಶಿಕ್ಷಕರನ್ನ ನಿಕೃಷ್ಟವಾಗಿ ಕಾಣಲಾಗಿತ್ತು. ಹೆಚ್ಚುವರಿ ಶಿಕ್ಷಕರ ಪಟ್ಟಿಗೆ ಮೊದಲು ವೃತ್ತಿ ಶಿಕ್ಷಣ ಶಿಕ್ಷಕರನ್ನ ಸೇರಿಸಲಾಗುತ್ತಿತ್ತು. ಬದಲಾವಣೆ, ನಿಯೋಜನೆಗಳಿಗೆ ನಮ್ಮನ್ನು ಬಳಸಿಕೊಳ್ಳುತ್ತಿದ್ದರು. ಬದಲಿ ವ್ಯವಸ್ಥೆಗೆ ಹಾಗೂ ಶಾಲಾ ಬೆಲ್ ಹೊಡೆಯಲು ಬಳಸಿಕೊಂಡ ಕಾಲವಿತ್ತು. ಆದರೆ ಇಂದು ವೃತ್ತಿ ಶಿಕ್ಷಣಕ್ಕೆ ಪ್ರಾಮುಖ್ಯತೆ ದೊರೆತಿದೆ. ಸಂಘಟನೆ ಮೂಲಕ ಸರ್ಕಾರದಿಂದ ವಿಶೇಷ ಶಿಕ್ಷಣಕ್ಕೆ ಸವಲತ್ತು ಪಡೆಯಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಆರು ತಾಲ್ಲೂಕಿನ ವಿದ್ಯಾರ್ಥಿಗಳು ವಿವಿಧ ವೃತ್ತಿ ಶಿಕ್ಷಣದ ವಸ್ತುಗಳನ್ನು ಪ್ರದರ್ಶಿಸಿದ್ದರು. ನಿವೃತ್ತ ವೃತ್ತಿ ಶಿಕ್ಷಣ ಶಿಕ್ಷಕರನ್ನು ಸನ್ಮಾನಿಸಲಾಯಿತು. 
          ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾರವಿಕುಮಾರ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನುಸೂಯ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೆ.ಯೋಶದಮ್ಮ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಜಿ.ಕಲ್ಪನಾ, ಪಟ್ಟಣ ಪಂಚಾಯ್ತಿ ಸದಸ್ಯರಾದ ಜಿ.ಸಿ.ಕೃಷ್ಣಮೂರ್ತಿ, ಜಿ.ಆರ್.ಶಿವಕುಮಾರ್, ಜಿಲ್ಲಾ ಬಿಜೆಪಿ ಮುಖಂಡ  ಜಿ.ಎನ್.ಬೆಟ್ಟಸ್ವಾಮಿ, ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ಬಿಆರ್‍ಸಿ ಸಿದ್ದಲಿಂಗಸ್ವಾಮಿ, ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕ ಎಲ್.ವೆಂಕಟೇಶ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಆರ್.ಜಿ.ನಾಗಭೂಷಣ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯೋಗಾನಂದ್, ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಷಡಾಕ್ಷರಿ, ಕಾರ್ಯದರ್ಶಿ ಶಾಂತರಾಜು, ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್ ತಾಲ್ಲೂಕು ಅಧ್ಯಕ್ಷ ಪಿ.ಗಂಗರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ರಾಜಣ್ಣ, ಪ್ರಾಚಾರ್ಯ ಕೃಷ್ಣಮೂರ್ತಿ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ರವೀಶ್, ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಸಿ.ಸತ್ಯಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಕೆ.ಶಿವಾನಂದ್, ತಾಲ್ಲೂಕು ಅಧ್ಯಕ್ಷ ಸಂಜೀವಯ್ಯ, ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap