ಬೆಂಗಳೂರು
ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸಿದರೆ ಅದರ ಫ್ಯೂಸ್ ಕಿತ್ತು ಹಾಕಿ ಉಳಿದುಕೊಳ್ಳುವುದು ಹೇಗೆ ಎಂದು ನನಗೆ ಗೊತ್ತಿದೆ.ಹೀಗಾಗಿ ಅದು ಆಪರೇಷನ್ ಕಮಲದಂತಹ ದುಸ್ಸಾಹಸಕ್ಕೆ ಕೈ ಹಾಕದೆ ಸುಮ್ಮನಿರುವುದು ಒಳ್ಳೆಯದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಬಜೆಟ್ ಪೂರ್ವಭಾವಿಯಾಗಿ ಸಂಪಾದಕರ ಜತೆ ಮಾತುಕತೆ ನಡೆಸಿದ ಅವರು,ಸರ್ಕಾರ ಬೀಳಿಸಲು ಬಿಜೆಪಿ ಯತ್ನಿಸಿದರೆ ಆ ಪಕ್ಷದ ಐದಾರು ಮಂದಿ ಶಾಸಕರು ರಾಜೀನಾಮೆ ನೀಡಿ ನನ್ನ ಸರ್ಕಾರದ ರಕ್ಷಣೆಗೆ ಬರುತ್ತಾರೆ ಎಂದರು.ಹೀಗಾಗಿ ಅವರೇನು ಹದಿನಾರು ಮಂದಿ ಶಾಸಕರನ್ನು ಸಮ್ಮಿಶ್ರ ಸರ್ಕಾರದ ಬೌಂಡರಿಯಿಂದ ಕಿತ್ತುಕೊಳ್ಳುತ್ತೇವೆ ಎಂದು ಹೊರಟಿದ್ದಾರೆ?ಅಂತಹ ದುಸ್ಸಾಹಸ ಮಾಡುವುದರಲ್ಲಿ ಅರ್ಥವಿಲ್ಲ.ಒಂದು ವೇಳೆ ಅವರು ಅಂತಹ ಸಾಹಸ ಮಾಡಿದರೆ ಬಿಜೆಪಿಯ ಫ್ಯೂಸ್ ಕಿತ್ತು,ಸಮ್ಮಿಶ್ರ ಸರ್ಕಾರಕ್ಕೆ ಅದೇ ಫ್ಯೂಸನ್ನು ಬಳಸಿ ಬೆಳಕನ್ನು ಉಳಿಸಿಕೊಳ್ಳುವುದಾಗಿ ನುಡಿದರು.
ಯಡಿಯೂರಪ್ಪ ಏನು ಪ್ರಯತ್ನ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿದೆ.ಆದರೆ ಅವರ ಪಕ್ಷದ ಐದಾರು ಮಂದಿ ಶಾಸಕರು ನನ್ನ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.ಇಂದು ಬೆಳಿಗ್ಗೆ ಐದು ಗಂಟೆಯ ವೇಳೆಯಲ್ಲೂ ನನ್ನ ಜತೆ ಮಾತನಾಡಿದ್ದಾರೆ.ಹೀಗಾಗಿ ಸರ್ಕಾರ ಬೀಳುತ್ತದೆ,ಸರ್ಕಾರ ಬೀಳುತ್ತದೆ ಎಂಬಂತಹ ವರದಿಗಳ ಕುರಿತು ನಾನು ಯಾವ ಯೋಚನೆಯನ್ನೂ ಮಾಡುತ್ತಿಲ್ಲ ಎಂದರು.
ನಾನು ಈಗಲೂ ಮುಖ್ಯಮಂತ್ರಿ.ಅವಧಿ ಪೂರ್ಣವಾಗುವವರೆಗೂ ಮುಖ್ಯಮಂತ್ರಿಯಾಗಿರುತ್ತೇನೆ.ಆನಂತರದ ದಿನಗಳ ವಿದ್ಯಮಾನ ಏನಾಗುತ್ತದೋ?ಅದರ ಆಧಾರದ ಮೇಲೆ ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು ಎಂದರು.ನಾನು ಪೊಲಿಟಿಕಲ್ ಮ್ಯಾನೇಜ್ ಮೆಂಟ್ ಮಾಡುವವನಲ್ಲ.ನೇರ ರಾಜಕೀಯ ಮಾಡುವವನಲ್ಲ,ಅದರ ಅಗತ್ಯವೂ ನನಗಿಲ್ಲ.ಆದರೆ ನನಗೆ ಮೂರು ಸಮ್ಮಿಶ್ರ ಸರ್ಕಾರಗಳಲ್ಲಿ ಭಾಗಿಯಾದ,ಎರಡು ಬಾರಿ ಮುಖ್ಯಮಂತ್ರಿಯಾದ ಅನುಭವವಿದೆ ಎಂದರು.
ಭಾವನಾತ್ಮಕವಾಗಿ ವರ್ತಿಸುವುದು ನಿಮ್ಮ ಬಲಹೀನತೆ ಎಂದು ವ್ಯಕ್ತವಾದ ಅಭಿಪ್ರಾಯಗಳಿಗೆ ಸಹಮತ ವ್ಯಕ್ತಪಡಿಸಿದ ಅವರು,ಇದು ನನ್ನ ಬಲಹೀನತೆಯೂ ಹೌದು.ನನ್ನ ಶಕ್ತಿಯೂ ಹೌದು.ಯಾಕೆಂದರೆ ನಾನಿರುವುದೇ ಹಾಗೆ.ಇದು ಜನರಿಗೂ ಗೊತ್ತಿದೆ.ಹೀಗಾಗಿ ಅವರು ಕೂಡಾ ನಾನು ಇರುವಂತೆಯೇ ನನ್ನನ್ನು ಒಪ್ಪಿಕೊಂಡಿದ್ದಾರೆ.
ಅಂದ ಹಾಗೆ ರಾಜಕಾರಣ ಭಾವನಾತ್ಮಕ ಅಲೆಗಳ ಮೇಲೆ ನಡೆಯುತ್ತದೆ.ಉದಾಹರಣೆಗೆ ಈಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿರುವ ದಿವಂಗತ ಅಂಬರೀಷ್ ಅವರ ಪತ್ನಿ ಶ್ರೀಮತಿ ಸುಮಲತಾ ಅವರ ಸಾಧನೆ ಏನು?ಅಂಬರೀಷ್ ಅವರ ಸಾಧನೆಗಳನ್ನು ನಾನು ಅಲ್ಲಗಳೆಯುವುದಿಲ್ಲ.ಆದರೆ ಸುಮಲತಾ ಅವರು ಮಂಡ್ಯ ಜಿಲ್ಲೆಗೆ ನೀಡಿರುವ ಕಾಣಿಕೆ ಏನು?
ಅಂಬರೀಷ್ ಅವರ ಬಗ್ಗೆ ಜನರಿಗಿದ್ದ ಪ್ರೀತಿಯನ್ನು ತಾನೇ ಅವರು ಬಳಸಿಕೊಳ್ಳಲು ಹೊರಟಿರುವುದು?ಅಂದರೆ ಅಂಬರೀಷ್ ಅವರ ಬಗ್ಗೆ ಜನರಿಗಿರುವ ಭಾವನಾತ್ಮಕ ವಿಷಯವನ್ನು ಮುಂದಿಟ್ಟುಕೊಂಡು ಶ್ರೀಮತಿ ಸುಮಲತಾ ಅವರು ರಾಜಕೀಯಕ್ಕೆ ಇಳಿಯಲು ಮುಂದಾಗಿದ್ದಾರೆ.
ಮಂಡ್ಯದಲ್ಲಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ನಾವು ತೀರ್ಮಾನಿಸಿಲ್ಲ.ಆದರೆ ಕಾರ್ಯಕರ್ತರು ಆ ರೀತಿ ಒತ್ತಡ ಹೇರುತ್ತಿದ್ದಾರೆ.ಅದೇ ರೀತಿ ಇವತ್ತಿನ ಪರಿಸ್ಥಿತಿ ಹೇಗಿದೆ ಎಂದರೆ ಐಎಎಸ್ ಅಧಿಕಾರಿಗಳ ಮಕ್ಕಳು ಐಎಎಸ್ ಮಾಡುತ್ತಿದ್ದಾರೆ .ಉದ್ಯಮಿಗಳ ಮಕ್ಕಳು ಉದ್ಯಮಿಗಳಾಗುತ್ತಿದ್ದಾರೆ.ಪೂಜಾರಿಗಳ ಮಕ್ಕಳು ಪೂಜಾರಿಗಳಾಗುತ್ತಿದ್ದಾರೆ.ಚಿತ್ರ ನಟರ ಮಕ್ಕಳು ಚಿತ್ರರಂಗಕ್ಕೆ ಬರುತ್ತಿದ್ದಾರೆ.ಅದೇ ರೀತಿ ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಬರುತ್ತಿದ್ದಾರೆ.
ಹೀಗಾಗಿ ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಇಳಿಯುವುದು ಅನಿವಾರ್ಯವಾದರೆ ಅದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.ಆದರೆ ಈ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಿರುವುದು ಪಕ್ಷ ಎಂದು ಅವರು ಹೇಳಿದರು.ಈ ತಿಂಗಳ ಎಂಟರಂದು ನಾನು ಬಜೆಟ್ ಮಂಡಿಸುತ್ತಿದ್ದೇನೆ.ಸಹಜವಾಗಿಯೇ ನನ್ನದು ರೈತ ಪರವಾದ ಬಜೆಟ್ ಆಗಿರುತ್ತದೆ.ಹಾಗೆಯೇ ಕೇಂದ್ರ ಸರ್ಕಾರದ ಬೆಳೆ ವಿಮೆ ಯೋಜನೆ ಯಶಸ್ವಿಯಾಗಿ ಅನುಷ್ಟಾನವಾಗದೆ ಇರುವುದರಿಂದ ರಾಜ್ಯದ ರೈತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಸರ್ಕಾರದ ವತಿಯಿಂದಲೇ ಬೆಳೆ ವಿಮೆ ಯೋಜನೆಯನ್ನು ಪ್ರಾರಂಭಿಸುವ ಉದ್ದೇಶವಿದೆ.
ರೈತರ ಸಾಲ ಮನ್ನಾ ವಿಷಯದಲ್ಲಿ ಈಗಾಗಲೇ ಆರು ಸಾವಿರ ಕೋಟಿ ರೂಗಳನ್ನು ಒದಗಿಸಲಾಗಿದೆ.ಬಾಕಿ ಉಳಿದ ಹಣವನ್ನು ಬಜೆಟ್‍ನಲ್ಲಿ ಒದಗಿಸುವ ಯೋಚನೆ ಇರಿಸಿಕೊಂಡಿದ್ದೇನೆ ಎಂದು ನುಡಿದರು.ರೈತರ ಸಮಸ್ಯೆಗೆ ಸಾಲ ಮನ್ನಾ ಒಂದೇ ಪರಿಹಾರವಲ್ಲ.ಬದಲಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒದಗಿಸುವ ಮೂಲಕ ಹಾಗೂ ಅವರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಒದಗಿಸಿಕೊಡುವುದರ ಮೂಲಕ ಅವರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸಬೇಕಾಗುತ್ತದೆ ಎಂದು ಹೇಳಿದರು.
ಪಶ್ಚಿಮ ಬಂಗಾಳದ ಪೋಲೀಸ್ ಕಮೀಷ್ನರ್ ಅವರನ್ನು ಏಕಾಏಕಿ ಬಂಧಿಸಲು ಹೊರಟ ಸಿಬಿಐ ಕ್ರಮ ತಪ್ಪು.ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್ ತಡೆಯಾಜ್ಞೆ ನೀಡಿರುವಾಗ ಸಿಬಿಐ ಅದನ್ನು ಮರೆತು ವರ್ತಿಸುವುದು ಸರಿಯಲ್ಲ ಎಂದರು.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಣ ಸಂಬಂಧ ಮಧುರವಾಗಿರಬೇಕು.ಇಲ್ಲದೆ ಹೋದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಅವರು ತೀವ್ರ ಆತಂಕ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
